ನ್ಯೂಸ್

ಭಾರತದ ರಾಯಭಾರ ಕಚೇರಿ ಸಿಬ್ಬಂದಿ ಮೇಲೆ ಪಾಕಿಗಳು ಹಲ್ಲೆ ಮಾಡಿದ ರೀತಿ ನೋಡಿದರೆ ನಿಮ್ಮ ರಕ್ತ ಕುದಿಯುತ್ತೆ!

ನವದೆಹಲಿ: ಪಾಕ್​ನಲ್ಲಿನ ಭಾರತೀಯ ರಾಯಭಾರ ಕಚೇರಿಯ ಇಬ್ಬರು ಸಿಬ್ಬಂದಿಯನ್ನು ಸೋಮವಾರ ಬೆಳಗ್ಗೆ 8.30ರಲ್ಲಿ ಅಪಹರಿಸಿದ್ದ ಪಾಕಿಸ್ತಾನದ ಅಧಿಕಾರಿಗಳು ಯಾವುದೋ ಗೌಪ್ಯ ಸ್ಥಳಕ್ಕೆ ಕರೆದೊಯ್ದು ಕೋಳ ತೊಡಿಸಿ, ರಾಡ್​ ಮತ್ತು ಬಡಿಗೆಯಿಂದ ಮನಬಂದಂತೆ ಹಲ್ಲೆ ಮಾಡಿದ್ದಾರೆ ಎಂದು ಭಾರತೀಯ ರಾಯಭಾರ ಕಚೇರಿ ಮೂಲಗಳು ತಿಳಿಸಿವೆ.

ಕಾರ್ಯನಿಮಿತ್ತ ಕಾರಿನಲ್ಲಿ ತೆರಳುತ್ತಿದ್ದ ರಾಯಭಾರ ಕಚೇರಿ ಸಿಬ್ಬಂದಿ ಪೆಟ್ರೋಲ್​ ಹಾಕಿಸಿಕೊಳ್ಳಲು ಮುಂದಾದಾಗ ಪೆಟ್ರೋಲ್​ ಬಂಕ್​ಗೆ ಐದಾರು ವಾಹನಗಳಲ್ಲಿ ಬಂದ 15ರಿಂದ 16 ಮಂದಿ ಶಸ್ತ್ರಸಜ್ಜಿತರ ಗುಂಪು ತಮ್ಮನ್ನಯ ಅಪಹರಿಸಿತು. ಕಣ್ಣಿಗೆ ಬಟ್ಟೆ ಕಟ್ಟಿದ್ದಲ್ಲದೆ, ತಲೆ ಮೇಲೆ ಮಣಭಾರದ ಚೀಲ ಇರಿಸಿ, ಗೌಪ್ಯ ಸ್ಥಳಕ್ಕೆ ಕರೆದೊಯ್ಯಲಾಯಿತು. ತಮ್ಮನ್ನು ಅಪಹರಿಸಿದ ಸ್ಥಳದಿಂದ 10 ನಿಮಿಷದ ದೂರದಲ್ಲಿ ಈ ಸ್ಥಳವಿತ್ತು. ಅಲ್ಲಿಗೆ ಹೋದ ಬಳಿಕ ಕೋಳ ತೊಡಿಸಿ, ರಾಡ್​ ಮತ್ತು ಬಡಿಗೆಗಳನ್ನು ಹಲ್ಲೆ ಮಾಡುತ್ತಾ, ರಾಯಭಾರ ಕಚೇರಿಯಲ್ಲಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯ ಕೆಲಸದ ವಿವರಗಳನ್ನು ತಿಳಿಸುವಂತೆ ಆಗ್ರಹಿಸಿದ್ದಾಗಿ ಅಪಹರಣಕ್ಕೆ ಒಳಗಾಗಿದ್ದ ಸಿಬ್ಬಂದಿ ತಿಳಿಸಿರುವುದಾಗಿ ಹೇಳಿವೆ.

ರಾಯಭಾರ ಕಚೇರಿ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಕಾರು ಗುದ್ದೋಡಲು ಪ್ರಯತ್ನಿಸಿದಾಗ ಅವರನ್ನು ತಡೆದು ನಿಲ್ಲಿಸಲಾಯಿತು. ಈ ಘಟನೆಯಲ್ಲಿ ಒಬ್ಬ ಪಾದಾಚಾರಿ ಗಂಭೀರವಾಗಿ ಗಾಯಗೊಂಡಿರುವುದಾಗಿ ಪಾಕ್​ ಪತ್ರಿಕೆಗಳು ವರದಿ ಮಾಡಿವೆ. ಆದರೆ, ಇದನ್ನು ಅಲ್ಲಗಳೆದಿರುವ ಅಪಹರಣಕ್ಕೆ ಒಳಗಾಗಿದ್ದ ಸಿಬ್ಬಂದಿ, ತಮ್ಮನ್ನು ಹೊಡೆಯುತ್ತಿರುವಂತೆ ವಿಡಿಯೋ ಚಿತ್ರೀಕರಿಸಿಕೊಂಡು ಕಾರು ಅಪಘಾತ ಎಸಗಿದ್ದಾಗಿ ತಪ್ಪೊಪ್ಪಿಕೊಳ್ಳುವಂತೆ ಮಾಡಿದರು ಎಂದು ಹೇಳಿರುವುದಾಗಿ ತಿಳಿಸಿವೆ.

ಎಲ್ಲರಿಗೂ ಇದೇ ಗತಿ: ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇದೇ ಗತಿ ಮಾಡುವುದಾಗಿ ಹೇಳಿದ ಅಪಹರಣಕಾರರು ತಮ್ಮನ್ನು ರಾತ್ರಿ 9 ಗಂಟೆಗೆ ಬಿಡುಗಡೆ ಮಾಡಿದ್ದಾಗಿ ಅವರು ತಿಳಿಸಿರುವುದಾಗಿ ಮೂಲಗಳು ಹೇಳಿವೆ.

ಅಪಹರಣಕ್ಕೆ ಒಳಗಾಗಿ ಬಿಡುಗಡೆಯಾಗಿರುವ ಸಿಬ್ಬಂದಿಯ ಮುಖ, ಕತ್ತು ಮತ್ತು ತೊಡೆಗಳ ಮೇಲೆ ಗಾಯಗಳಾಗಿವೆ. ಆದರೂ ಅವರು ನಡೆದಾಡುವ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿವೆ.