ನ್ಯೂಸ್

ದೇಶಪ್ರೇಮ ನಾಶಕ್ಕೆ ಕೈ ಸಂಚು; ಪ್ರಧಾನಿ ಮೋದಿ ವಾಗ್ದಾಳಿ

ಪಲ್ವಾಲ್ (ಹರಿಯಾಣ): ಜಾತಿಗಳು ಮತ್ತು ಧರ್ಮಗಳ ಆಧಾರದ ಮೇಲೆ ದೇಶವನ್ನು ವಿಭಜಿಸಿ, ದೇಶಪ್ರೇಮವನ್ನು ನಾಶಪಡಿಸುವುದು ಕಾಂಗ್ರೆಸ್​ನ ಗುರಿ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶಕ್ಕೆ ಮಹತ್ವದ್ದೆನಿಸುವ ಎಲ್ಲ ವಿಷಯಗಳಲ್ಲೂ ಗೊಂದಲ ಮೂಡಿಸಲು ಕಾಂಗ್ರೆಸ್ ಯತ್ನಿಸುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಲು ಬಿಡಲಿಲ್ಲ. ಜಮ್ಮು-ಕಾಶ್ಮೀರದಲ್ಲಿ ಸಂವಿಧಾನವನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತರಲು ಬಿಡಲಿಲ್ಲ ಎಂದು ಆಪಾದಿಸಿದರು.

ಸಂಸತ್ತು ಮತ್ತು ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೂ ಕಾಂಗ್ರೆಸ್ ಸಹಕರಿಸಲಿಲ್ಲ. ಮುಸ್ಲಿಂ ಸೋದರಿಯರನ್ನು ತ್ರಿವಳಿ ತಲಾಖ್​ನ ಸಮಸ್ಯೆಯಲ್ಲಿ ಸಿಲುಕಿ ನರಳುವಂತೆ ಮಾಡಿದ್ದರು. ಜನರ ಸಮಸ್ಯೆಗಳನ್ನು ಬಗೆಹರಿಸುವ ಬದಲು ತನ್ನದೇ ಕುಟುಂಬಕ್ಕೆ ಅನುಕೂಲ ಮಾಡಿಕೊಡುವುದಕ್ಕೆ ಕಾಂಗ್ರೆಸ್ ಹೆಚ್ಚು ಶಕ್ತಿ-ಶ್ರಮ ವ್ಯಯಿಸಿದೆ ಎಂದು ದೂರಿದರು.

ಈವರೆಗೆ ಅನೇಕ ಪಾಪಗಳನ್ನು ಕಾಂಗ್ರೆಸ್ ಮಾಡಿದೆ. ಇಷ್ಟಾದ ನಂತರವೂ ಸರ್ಕಾರ ರಚಿಸುವ ಕನಸು ಕಾಣುತ್ತಿದೆ. ಕಳೆದ ಡಿಸೆಂಬರ್​ನಲ್ಲಿ ಮಧ್ಯಪ್ರದೇಶದ ಜನರು ಈ ಕನಸನ್ನು ನನಸು ಮಾಡಿಕೊಳ್ಳಲು ಕಾಂಗ್ರೆಸ್​ಗೆ ಅವಕಾಶ ನೀಡಲಿಲ್ಲ. ಅದೇ ರೀತಿ ಹರಿಯಾಣದಲ್ಲೂ ಕಾಂಗ್ರೆಸ್ ಅಧಿಕಾರದ ಕನಸು ಕಾಣುತ್ತಿದೆ. ಅದು ಈಡೇರುವುದಿಲ್ಲ. ಕಾಂಗ್ರೆಸ್ ನಾಯಕರು ತಾವೂ ಕೆಲಸ ಮಾಡುವುದಿಲ್ಲ, ಮಾಡುವವವರಿಗೂ ಮಾಡಲು ಬಿಡುವುದಿಲ್ಲ ಎಂದು ಮೋದಿ ಟೀಕಿಸಿದರು. ಹರಿಯಾಣದಲ್ಲಿ ಅ. 5ರಂದು ಮತದಾನ ನಡೆಯಲಿದ್ದು, ಅ. 8ರಂದು ಫಲಿತಾಂಶ ಹೊರಬೀಳಲಿದೆ.

ಮೀಸಲಾತಿ ಅಬಾಧಿತ: ಮೀಸಲಾತಿಯನ್ನು ಅಂತ್ಯಗೊಳಿಸಲು ಕಾಂಗ್ರೆಸ್ ಬಯಸಿದ್ದು, ಅದಕ್ಕಾಗಿ ಹರಿಯಾಣವನ್ನೇ ಮೊದಲ ಬಾರಿಗೆ ಆಯ್ಕೆ ಮಾಡಿಕೊಂಡಿದೆ. ಆದರೆ ಮೋದಿ ಮತ್ತು ಬಿಜೆಪಿ ಅಧಿಕಾರದಲ್ಲಿ ಇರುವವರೆಗೆ ಭಾರತದಲ್ಲಿ ಮೀಸಲಾತಿಯನ್ನು ಯಾರೂ ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು.

ಸಂವಿಧಾನದ ಮೇಲೆ ಮೋದಿ ಸರ್ಕಾರದ ದಾಳಿ

ಸೋನಿಪತ್: ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸಂವಿಧಾನದ ಮೇಲೆ ಆಕ್ರಮಣ ನಡೆಸುತ್ತಿದೆ. ಅಲ್ಲದೆ, ಬೆರಳೆಣಿಕೆಯ ಬಿಲಿಯಾಧಿಪತಿಗಳನ್ನು ಪೋಷಿಸುತ್ತಿದೆ ಎಂದು ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಂಗಳವಾರ ಆರೋಪ ಮಾಡಿದ್ದಾರೆ. ಶನಿವಾರ ನಡೆಯಲಿರುವ ಹರಿಯಾಣ ವಿಧಾನಸಭೆಯ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆ ನಿಯಂತ್ರಿಸಲು ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು.

ಸಣ್ಣ ವರ್ತಕರ ಜೀವನ ನಾಶ: ತಾವು ರ್ಯಾಲಿಗೆ ಬರುವ ಮಾರ್ಗದಲ್ಲಿ ವ್ಯಕ್ತಿಯೊಬ್ಬ ತಡೆದು ತನ್ನ ಗೋಳು ಹೇಳಿಕೊಂಡ. ‘ಮೋದಿ ಮತ್ತು ಹರಿಯಾಣ ಸರ್ಕಾರ ನನ್ನ ಜೀವನವನ್ನು ನಾಶ ಮಾಡಿವೆ’ ಎಂದು ಆ ಸಣ್ಣ ವ್ಯಾಪಾರಿ ಹೇಳಿದ ಎಂದು ಗಾಂಧಿ ಸಾರ್ವಜನಿಕ ಸಭೆಯಲ್ಲಿ ಹೇಳಿದರು. ನೋಟು ಅಮಾನ್ಯೀಕರಣ ಹಾಗೂ ತಪು್ಪ ಜಿಎಸ್​ಟಿಯಿಂದಾಗಿ ತನ್ನಂಥವರ ಬದುಕು ಹಾಳಾಗಿದ್ದು ಅದಾನಿ ಮತ್ತು ಅಂಬಾನಿಗೆ ನೆರವಾಗಲು ಅವುಗಳನ್ನು ಮಾಡಲಾಗಿದೆಯೆಂದು ಆತ ಹೇಳಿದನೆಂದು ಗಾಂಧಿ ವಿವರಿಸಿದರು.

1 ಲಕ್ಷಕ್ಕಿಂತ ಹೆಚ್ಚು ಲವ್ ಜಿಹಾದ್ ದೂರುಗಳು!

ಮುಂಬೈ: ಹಿಂದು ಮಹಿಳೆಯರನ್ನು ಮದುವೆ ನೆಪದಲ್ಲಿ ಪುಸಲಾಯಿಸಿ ಇಸ್ಲಾಂಗೆ ಮತಾಂತರಿಸುವ ಲವ್ ಜಿಹಾದ್ ಅಸ್ತಿತ್ವದಲ್ಲಿದೆ ಎಂಬುದಕ್ಕೆ ಈ ಕುರಿತು ದಾಖಲಾದ ಒಂದು ಲಕ್ಷಕ್ಕೂ ಹೆಚ್ಚು ದೂರುಗಳೇ ಸಾಕ್ಷಿಯಾಗಿವೆ ಎಂದು ಮಹಾರಾಷ್ಟ್ರದ ಗೃಹ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.

ಕೊಲ್ಹಾಪುರದಲ್ಲಿ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಅಂತರ್​ಧರ್ವಿುಯ ಮದುವೆಗೆ ನನ್ನ ವಿರೋಧ ಇಲ್ಲ. ಆದರೆ ನಕಲಿ ಹೆಸರು ಹೇಳಿ, ಹಿಂದು ಮಹಿಳೆಯರನ್ನು ಮದುವೆಗೆ ಒಪ್ಪಿಸಿ, ಮಕ್ಕಳಾದ ಬಳಿಕ ಬಿಟ್ಟುಹೋದ ಅಸಂಖ್ಯಾತ ವಂಚನೆ ಪ್ರಕರಣಗಳು ನಡೆದಿವೆ. ಮೊದಲು ಅಲ್ಲೊಂದು ಇಲ್ಲೊಂದು ಪ್ರಕರಣ ನಡೆಯುತ್ತಿದ್ದವು. ಈಗ ಇದೊಂದು ಸಂಚಿನ ರೀತಿಯಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಇದಲ್ಲದೆ ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 48 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ‘ವೋಟ್ ಜಿಹಾದ್’ ಕೂಡ ಕಂಡುಬಂತು. ಕೆಲವು ಪ್ರದೇಶಗಳಲ್ಲಿ ಒಂದು ಸಮುದಾಯದವರು ಒಟ್ಟಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಮತ ಚಲಾಯಿಸಿ, ಸೋಲುವಂತೆ ಮಾಡಿದರು ಎಂದು ಹೇಳಿದರು.

ಆರೋಪಕ್ಕೆ ಕಾಂಗ್ರೆಸ್ ಆಕ್ಷೇಪ

ಫಡ್ನವಿಸ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಲೆ, ‘ಶಿವಾಜಿ ಮಹಾರಾಜರ ಸೇನೆಯಲ್ಲಿ ಮುಸ್ಲಿಂ ಯೋಧರೂ ಇದ್ದರೆಂಬುದನ್ನು ಫಡ್ನವಿಸ್ ಮರೆತಂತಿದೆ’ ಎಂದಿದ್ದಾರೆ. ಮಹಾರಾಷ್ಟ್ರ ವಿರೋಧ ಪಕ್ಷದ ನಾಯಕ ವಿಜಯ್ ಮುತ್ತೆಮ್ಾರ್ ಪ್ರತಿಕ್ರಿಯಿಸಿ, ‘ಬಿಜೆಪಿ ನಾಯಕರು ಕೇವಲ ಜಿಹಾದ್, ಮಸೀದಿ, ಹಿಂದು-ಮುಸ್ಲಿಂ, ಭಾರತ- ಪಾಕಿಸ್ತಾನ ಇಂಥ ವಿಷಯಗಳನ್ನೇ ಮಾತನಾಡುತ್ತಾರೆ. ಈ ಪದಗಳನ್ನು ಬಳಸದಿದ್ದರೆ ಬಿಜೆಪಿ ಅಭ್ಯರ್ಥಿಗಳು ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುತ್ತಾರೆ’ ಎಂದು ಟೀಕಿಸಿದ್ದಾರೆ.