ಹನಗೋಡು: ಹುಣಸೂರು ತಾಲೂಕು ಮಟ್ಟದ ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟದ ಬಾಲಕರ ಖೋ-ಖೋ ಪಂದ್ಯಾವಳಿಯಲ್ಲಿ ಹನಗೋಡು ಪಿಯು ಕಾಲೇಜು ತಂಡವು ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿದೆ.
ಹುಣಸೂರು ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹನಗೋಡು ಪಿಯು ಕಾಲೇಜು ತಂಡ ಹುಣಸೂರಿನ ಛಾಯಾದೇವಿ ಕಾಲೇಜು ತಂಡದ ವಿರುದ್ಧ 12-1 ಅಂತರದಲ್ಲಿ ಜಯ ಗಳಿಸಿದರೆ, ಸೆಮಿ ಫೈನಲ್‌ನಲ್ಲಿ ಹುಣಸೂರಿನ ಬಿಜಿಎಸ್ ಕಾಲೇಜು ತಂಡವನ್ನು 10-2 ಅಂತರದಲ್ಲಿ ಮಣಿಸಿ ಗೆಲುವು ತನ್ನದಾಗಿಸಿಕೊಂಡಿತು. ಅಂತಿಮ ಪಂದ್ಯದ ರೋಚಕ ಹಣಾಹಣಿಯಲ್ಲಿ ರತ್ನಪುರಿಯ ವಿಎಸ್‌ಎಸ್ ಸಾಧನಪುರ ಕಾಲೇಜು ತಂಡವನ್ನು 5-4ರಲ್ಲಿ ಸೋಲಿಸಿ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಆ ಮೂಲಕ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಗೊಂಡಿತು. ಕ್ರೀಡಾಪಟುಗಳ ಸಾಧನೆಯನ್ನು ಪ್ರಾಚಾರ್ಯ ದೊರೈರಾಜು ಹಾಗೂ ಉಪನ್ಯಾಸಕರು ಅಭಿನಂದಿಸಿದ್ದಾರೆ.
ಕಾಮಗೌಡನಹಳ್ಳಿಯ ಕ್ರೀಡಾಪಟುಗಳು: ವಿಜಯಿ ತಂಡದ ಎಲ್ಲಾ ಖೋಖೋ ಆಟಗಾರರು ಹನಗೋಡಿಗೆ ಸಮೀಪದ ಕಾಮಗೌಡನಹಳ್ಳಿ ಗ್ರಾಮದವರಾಗಿರಾಗಿದ್ದಾರೆ. ಇದೇ ಗ್ರಾಮದ ಸಂತೋಷ್, ಸತೀಶ್ ಅವರೇ ತರಬೇತಿ ನೀಡುತ್ತಿದ್ದಾರೆ. ಹನಗೋಡು ಪ್ರೌಢಶಾಲೆ ತಂಡದಲ್ಲಿಯೂ ಸಹ ಇದೇ ಗ್ರಾಮದ ಆಟಗಾರರಿರುವುದು ವಿಶೇಷವೆನಿಸಿದೆ.