ಹೊಸಪೇಟೆಯಲ್ಲಿ ಶನಿವಾರ ಹೋಲಿ ಸಂಭ್ರಮದಲ್ಲಿ ದೇಶ ವಿದೇಶಿಗರು. 
ನ್ಯೂಸ್

ಹಂಪಿಯಲ್ಲಿ ರಂಗೇರಿದ ಹೋಲಿ ಸಂಭ್ರಮ

ಮಂಜುನಾಥ

ಹೊಸಪೇಟೆ: ವಿಶ್ವ ವಿಖ್ಯಾತ ಹಂಪಿಯಲ್ಲಿ ಶನಿವಾರ ದೇಶ- ವಿದೇಶಿ ಪ್ರವಾಸಿಗರು ಹೋಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ವಿರೂಪಾಕ್ಷೇಶ್ವರ ದೇಗುಲದ ರಥಬೀದಿಯಲ್ಲಿ ಪರಸ್ಪರ ಬಣ್ಣ ಎರಚಿ ಇಡೀ ವಿಶ್ವಕ್ಕೆ ಸಹೋದರತ್ವದ ಸಂದೇಶ ಸಾರಿದರು. ಕಳೆದ ಬಾರಿಗಿಂತ ಈ ಭಾರಿ ದೇಶ ವಿದೇಶಿಗರು ಹೆಚ್ಚಿದ್ದರು.

ಕೊಪ್ಪಳದ ಸಣಾಪುರ ಬಳಿ ಪ್ರವಾಸಿಯೊಬ್ಬರ ಕೊಲೆ, ವಿದೇಶಿ ಮಹಿಳೆ ಸಹಿತ ಇಬ್ಬರ ಮೇಲೆ ಅತ್ಯಾಚಾರ ಪ್ರಕರಣದಿಂದ ವಿದೇಶಿಗರು ಸೇರಿ ಈ ಬಾರಿ ಹಂಪಿಯಲ್ಲಿ ನಡೆಯುವ ಹೋಳಿ ಉತ್ಸವದಲ್ಲಿ ವಿದೇಶಿಯರು ಹೋಳಿ ಆಚರಣೆಗೆ ಬರದೆ ಇರಬಹುದು ಎಂಬ ಆತಂಕ ಇತ್ತು. ಆದರೆ, ಕಳೆದ ವರ್ಷಗಳಿಗೆ ಹೋಲಿಸಿದರೆ, ಈ ಭಾರಿ ದೇಶ ವಿದೇಶಗಳ ಪ್ರವಾಸಿಗರು ಹೆಚ್ಚಿದ್ದರು.

ರಥಬೀದಿಯಲ್ಲಿ ಶುಕ್ರವಾರ ತಡರಾತ್ರಿ ಕಾಮದಹನ ಮಾಡಲಾಯಿತು. ಬಳಿಕ ಮಾರನೇ ದಿನ ಶನಿವಾರ ಬೆಳಗ್ಗೆ ರಥಬೀದಿಯಲ್ಲಿ ಜಮಾಯಿಸಿ ರಂಗಿನಾಟದಲ್ಲಿ ತೊಡಗಿಸಿಕೊಂಡರು. ಪರಸ್ಪರ ಬಣ್ಣ ಹಚ್ಚಿ, ಓಕುಳಿಯಾಟದಲ್ಲಿ ಮಿಂದೆದ್ದರು. ಬಗೆ ಬಗೆಯ ಬಣ್ಣದಲ್ಲಿ ಮಿಂದೆದ್ದ ಪ್ರವಾಸಿಗರು, ಸ್ಥಳೀಯರೊಡಗೂಡಿ ಹೋಳಿಹಬ್ಬ ರಂಗೇರಿಸಿದರು. ಅಲ್ಲದೇ ತಮಟೆ, ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿದರು.

ಬೇರೆ ಬೇರೆ ರಾಜ್ಯಗಳಲ್ಲದೇ ಇಂಗ್ಲೆಂಡ್‌, ಜರ್ಮನಿ, ಇಟಲಿ, ಅಮೆರಿಕ, ಇಸ್ರೇಲ್‌, ರಷ್ಯಾ, ಜಪಾನ್‌, ಸ್ವೀಜರ್‌ಲ್ಯಾಂಡ್‌, ಕೆನಡಾ, ನ್ಯೂಜಿಲ್ಯಾಂಡ್‌ ಸೇರಿದಂತೆ ವಿವಿಧ ದೇಶಗಳಿಂದ ಆಗಮಿಸಿದ್ದ ವಿದೇಶಿ ಪ್ರವಾಸಿಗರು ಹಂಪಿಯ ರಥಬೀದಿಯಲ್ಲಿ ಹೋಳಿಹಬ್ಬದ ರಂಗಿನಾಟದಲ್ಲಿ ಭಾಗಿಯಾದರು. ಬಳಿಕ ತುಂಗಭದ್ರಾ ನದಿಗೆ ತೆರಳಿ ಸ್ನಾನ ಮಾಡಿದರು.

ಸ್ಥಳೀಯರಿಗಿಲ್ಲ ಹಂಪಿ ಪ್ರವೇಶ

ಹಂಪಿಯಲ್ಲಿ ಹೋಳಿ ಸಂಭ್ರಮ ಬಲು ಜೋರಾಗಿರುತ್ತದೆ. ದೇಶ-ವಿದೇಶಿಗರು ಸಂಭ್ರಮ ಮುಗಿಲು ಮುಟ್ಟುತ್ತದೆ. ಆದರೆ, ಕೊಪ್ಪಳದ ಸಣಾಪುರದ ಹಿನ್ನೆಲೆಯಲ್ಲಿ ಪ್ರವಾಸಿಗರ ಭದ್ರತೆ ಹೆಚ್ಚಿಸಲಾಗಿದೆ.

ಈ ಬಾರಿ ಹಂಪಿಯ ಸ್ಥಳೀಯರಿಗೆ ಹಾಗೂ ಪ್ರವಾಸಿಗರಿಗೆ ಹೊರತು ಪಡಿಸಿದರೆ, ಉಳಿದೇಲ್ಲರಿಗೆ ಕಮಲಾಪುರ‌ ಹಾಗೂ ಕಡ್ಡಿರಾಂಪುರ ಮಾರ್ಗವಾಗಿ ಹಂಪಿಗೆ ಹೋಗುವುದುನ್ನು ಪೊಲೀಸರು ನಿರ್ಬಂಧ ಹಾಕಿದರು. ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸರ ಜತೆ ವಾದಕ್ಕೂ ಇಳಿದರು. ಹಂಪಿಯಲ್ಲಿ ಬಣ್ಣದೋಕುಳಿ ಸಂಭ್ರಮದ ವೇಳೆ ಪೊಲೀಸರು, ಪ್ರವಾಸಿ ಮಿತ್ರರು ಮತ್ತು ಸೆಕ್ಯುರಿ ಗಾರ್ಡ್‌ಗಳು ನದಿ ತೀರ ಮತ್ತು ರಥಬೀದಿಯಲ್ಲಿ ಬಂದೋಬಸ್ತ ಕೈಗೊಂಡಿದ್ದರು.