ಜೆರುಸಲೇಂ: ಒತ್ತೆಯಾಳಾಗಿ ಇರಿಸಿಕೊಂಡಿದ್ದ ಇಬ್ಬರು ಅಮೆರಿಕನ್ ಪ್ರಜೆಗಳನ್ನು ಮಾನವೀಯ ಆಧಾರದ ಮೇಲೆ ಹಮಾಸ್ ಸಶಸ್ತ್ರ ವಿಭಾಗ ಇಝ್ ಎಲ್-ದೀನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಬಿಡುಗಡೆ ಮಾಡಿದೆ.
ಕತಾರ್ನ ಮಧ್ಯಸ್ಥಿಕೆ ಹಿನ್ನೆಲೆಯಲ್ಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿರುವುದಾಗಿ ಕಸ್ಸಾಮ್ ಬ್ರಿಗೇಡ್ಸ್ ವಕ್ತಾರ ಅಬು ಉಬೈದಾ ಪತ್ರಿಕಾ ಪ್ರಕಟಣೆಯಲ್ಲಿ ಶುಕ್ರವಾರ ತಿಳಿಸಿದ್ದಾರೆ. ಬಿಡುಗಡೆಯಾದ ಇಬ್ಬರು ತಾಯಿ ಮತ್ತು ಮಗಳೆಂದು ತಿಳಿದುಬಂದಿದೆ.
ಇಸ್ರೇಲಿ ವಿದೇಶಾಂಗ ಸಚಿವಾಲಯದ ಪ್ರಕಾರ ಇಬ್ಬರು ಅಮೆರಿಕನ್ ಪ್ರಜೆಗಳನ್ನು ಹಮಾಸ್, ರೆಡ್ಕ್ರಾಸ್ಗೆ ಸಂಸ್ಥೆಗೆ ಹಸ್ತಾಂತರ ಮಾಡಿದ್ದು, ಅಲ್ಲಿಂದ ಅಮ್ಮ-ಮಗಳನ್ನು ಸೆಂಟ್ರಲ್ ಇಸ್ರೇಲ್‌ನಲ್ಲಿರುವ ಸೇನಾ ನೆಲೆಗೆ ಕರೆದೊಯ್ಯಲಾಯಿತು.
ಯುಎಸ್ ವಿದೇಶಾಂಗ ಕಾರ್ಯದರ್ಶಿ ಟ್ವೀಟ್
ಇಸ್ರೇಲ್‌ನಲ್ಲಿ ಅಕ್ಟೋಬರ್ 7ರ ದಾಳಿಯ ನಂತರ ಹಮಾಸ್‌ನಿಂದ ಬಂಧಿತರಾಗಿದ್ದ ಇಬ್ಬರೂ ಮಹಿಳೆಯರು ಇದೀಗ ಇಸ್ರೇಲಿ ಅಧಿಕಾರಿಗಳ ವಶದಲ್ಲಿದ್ದಾರೆ. ಯುಎಸ್ ರಾಯಭಾರ ಕಚೇರಿಯ ತಂಡವು ಅವರಿಬ್ಬರನ್ನು ಮರಳಿ ಕರೆತರಲಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.
ಅಕ್ಟೋಬರ್ 7 ರಂದು ಹಮಾಸ್, ಇಸ್ರೇಲ್ ಮೇಲೆ ದಾಳಿ ಮಾಡಿ ಕೆಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಅದಕ್ಕೆ ಇಸ್ರೇಲ್ ಪ್ರತೀಕಾರ ತೀರಿಸಿಕೊಳ್ಳುತ್ತಿದೆ. ಹಮಾಸ್ ಭಯೋತ್ಪಾದಕರ ಮೇಲೆ ನೆಲ ಮತ್ತು ವಾಯು ದಾಳಿಯನ್ನು ಇಸ್ರೇಲ್ ಸೇನೆ ಮುಂದುವರೆಸಿದೆ. ಹಮಾಸ್ ದಾಳಿಯಿಂದ 1,400 ಕ್ಕೂ ಹೆಚ್ಚು ಇಸ್ರೇಲಿಗಳು ಮೃತಪಟ್ಟಿದ್ದು, ಹಮಾಸ್ ವಿರುದ್ಧ ನಡೆಯುತ್ತಿರುವ ಸಂಘರ್ಷದಲ್ಲಿ 4,000ಕ್ಕೂ ಹೆಚ್ಚು ಜನರು ಎರಡೂ ಕಡೆಗಳಿಂದ ಮೃತಪಟ್ಟಿದ್ದಾರೆ. (ಏಜೆನ್ಸೀಸ್)