ಬೆಂಗಳೂರು:
ನಾಡು ಬೆಳಗಿಸುವಲ್ಲಿ ಸದಾ ಮಹತ್ವದ ಪಾತ್ರ ವಹಿಸುತ್ತಾ ಬಂದಿರುವ ಶರಾವತಿ ಯೋಜನೆ (ಲಿಂಗನಮಕ್ಕಿ) ಜಲಾಶಯಕ್ಕೆ ನೀರಿನ ಬರ ಕಾಣಿಸಿಕೊಂಡಿದೆ. ಮಳೆಗಾಲದಲ್ಲಿ ಇಷ್ಟೊತ್ತಿಗೆ ಜಲಾಶಯಕ್ಕೆ ಶೇ.80 ಭಾಗ ನೀರು ಬರಬೇಕಾಗಿತ್ತು. ಆದರೆ, ಜಲಾಶಯದಲ್ಲಿ ಶೇ.49 ಭಾಗ ಮಾತ್ರ ನೀರು ಸಂಗ್ರಹವಾಗಿದ್ದು ಆತಂಕ ಎದುರಾಗಿದೆ.
ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಆಗುತ್ತಿರುವ ಜಲ ವಿದ್ಯುತ್ ಯೋಜನೆಗಳಲ್ಲಿ ಶರಾವತಿ ಯೋಜನೆ ಪ್ರಮುಖವಾದದ್ದು. ಇದೊಂದು ಯೋಜನೆಯಿಂದಲೇ ಪ್ರತಿ ನಿತ್ಯ 1035 ಮೆಗಾವಾಟ್ ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯವಿದೆ.
ರಾಜ್ಯದ ಬೇಡಿಕೆ ಸರಾಸರಿ 7500 ಮೆವಾ ವಿದ್ಯುತ್ ಬೇಡಿಕೆಯಲ್ಲಿ ಶರಾವತಿ ಯೋಜನೆಯಿಂದಲೇ ಹೆಚ್ಚು ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿತ್ತು. ಈ ಯೋಜನೆಯಲ್ಲಿ ಉತ್ಪತ್ತಿ ಆಗುವ ಪ್ರತಿ ಯುನಿಟ್ ವಿದ್ಯುತ್‌ಗೆ 45 ಪೈಸೆ ಮಾತ್ರ ವೆಚ್ಚವಾಗುತ್ತದೆ. ಆದರೆ, ಉಷ್ಣ ವಿದ್ಯುತ್ ಯೋಜನೆಯಲ್ಲಿ ಪ್ರತಿ ಯುನಿಟ್‌ಗೆ ಕನಿಷ್ಠ 4 ರೂ ವೆಚ್ಚವಾಗಲಿದೆ. ಪವನ ವಿದ್ಯುತ್ ಮತ್ತು ಸೋಲಾರ್ ವಿದ್ಯುತ್ ಉತ್ಪಾದನೆ ಮಾಡಲು ಹೆಚ್ಚು ಕಡಿಮೆ 4.50 ರಿಂದ 5 ರೂ ವೆಚ್ಚವಾಗಲಿದೆ. ಹಾಗಾಗಿ ಶರಾವತಿ ಸೇರಿದಂತೆ ಜಲ ವಿದ್ಯುತ್ ಯೋಜನೆಗಳು ಮಾತ್ರ ಅಗ್ಗದ ದರದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ.
ಶರಾವತಿಯಲ್ಲಿ ಈಗಿರುವ ನೀರಿನ ಪ್ರಮಾಣದಲ್ಲಿ 2244 ಮಿಲಿಯನ್ ಯುನಿಟ್ ವಿದ್ಯುತ್ ಮಾತ್ರ ಉತ್ಪಾದನೆ ಮಾಡಲು ಸಾಧ್ಯವಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 3615 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡುವಷ್ಟು ನೀರಿನ ಸಂಗ್ರಹವಿತ್ತು.
ಶರಾವತಿ, ಮಾಣಿ ಮತ್ತು ಸೂಪ ಯೋಜನೆಗಳ ಜಲಾಶಯದಲ್ಲಿ ಸರಾಸರಿ ಶೇ.50ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಈಗಿರುವ ನೀರು ಬಳಸಿಕೊಂಡು, 4355 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಬಹುದು. ಆದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 3 ಡ್ಯಾಂಗಳಲ್ಲಿ ಇದ್ದ ನೀರಿನಿಂದ 5891 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲು ಸಾಧ್ಯವಿತ್ತು. ಕಳೆದ ಬಾರಿಗೆ ಹೋಲಿಸಿದರೆ, 1576 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಕೊರತೆ ಬೀಳಲಿದೆ.
ಆಲಮಟ್ಟಿ ಜಲಾಶಯ ಭರ್ತಿಯಾಗಿರುವುದರಿಂದ ಅಲ್ಲಿ 290 ಮೆವಾ ವಿದ್ಯುತ್ ಉತ್ಪಾದನೆಗೆ ಸಮಸ್ಯೆ ಇರುವುದಿಲ್ಲ. ಇನ್ನು ಹಲವಾರು ನೀರಾವರಿ ಆಧಾರಿತ ಜಲಾಶಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಆಗಲಿದೆ. ಸಣ್ಣ ನೀರಾವರಿ ಯೋಜನೆಗಳಿಂದ ಕಳೆದ ಬಾರಿ 18 ಎಂಯು ವಿದ್ಯುತ್ ಉತ್ಪಾದನೆ ಆಗುವ ನಿರೀಕ್ಷೆ ಇತ್ತು. ಈ ಬಾರಿ 14 ಎಂಯು ವಿದ್ಯುತ್ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿದೆ.