ನ್ಯೂಸ್

ಮಹಿಳಾ ಎಸ್​ಐಗೆ ಥಳಿಸಿ ಅವಾಚ್ಯ ಶಬ್ದಗಳಿಂದ ನಿಂದನೆ; ವಿಡಿಯೋ ವೈರಲ್​ ಆಗ್ತಿದ್ದಂತೆ 9 ಮಂದಿ ಅರೆಸ್ಟ್​, ಓರ್ವ ಮಿಸ್ಸಿಂಗ್​

ಅಮರಾವತಿ: ಗಾಂಜಾ ನಶೆಯಲ್ಲಿದ್ದ ಯುವಕರ ಗುಂಪೊಂದು ಮಹಿಳಾ ಸಬ್​ಇನ್ಸ್​ಪೆಕ್ಟರ್ (SI) ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರು 09 ಮಂದಿ ಶಂಕಿತರನ್ನು ಬಂಧಿಸಿದ್ದಾರೆ. ಘಟನೆಯು ಆಂಧ್ರಪ್ರದೇಶದ ವಿಜಯನಗರ ಜಿಲ್ಲೆಯಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ, ಯುವಕರ ಗುಂಪೊಂದು ಮಹಿಳಾ ಸಬ್ಇನ್ಸ್​ಪೆಕ್ಟರ್ (SI) ದೇವಿ ಅವರೊಂದಿಗೆ ವಾಗ್ವಾದ ನಡೆಸುತ್ತಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ನೋಡಬಹುದಾಗಿದೆ. ಮಾತನಾಡುತ್ತಿರುವಾಗಲೇ ಯುವಕರ ಗುಂಪು ದೇವಿ ಅವರ ತಲೆಗೂದಲನ್ನು ಹಿಡಿದು ಹಲ್ಲೆ ನಡೆಸುತ್ತಿರುವುದನ್ನು ನೋಡಬಹುದಾಗಿದೆ. ಕೂಡಲೇ ಅಲ್ಲಿದ್ದ ಮತ್ತೊಂದು ಗುಂಪು ಮಧ್ಯಪ್ರವೇಶಿಸಿದ್ದು, ದೇವಿ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, ವಿಜಯನಗರ ಜಿಲ್ಲೆಯ ಪ್ರದೇಶವೊಂದರಲ್ಲಿ ಜಾತ್ರೆ ನಡೆಯುತ್ತಿದ್ದು, ಇದರ ಅಂಗವಾಗಿ ಡ್ಯಾನ್ಸ್ ಬೇಬಿ ಡ್ಯಾನ್ಸ್ ನೃತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ನಡೆಯುತ್ತಿದ್ದಾಗ ಯುವಕರ ಗುಂಪೊಂದು ವೇದಿಕೆ ಏರಿ ಡ್ಯಾನ್ಸರ್​ ಜತೆ ಅಸಭ್ಯವಾಗಿ ವರ್ತಿಸಿದ್ದು, ಕರ್ತವ್ಯದಲ್ಲಿದ್ದ ಎಸ್‌ಐ (SI) ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ಸರಿಪಡಿಸಲು ಪ್ರಯತ್ನಿಸಿದ್ದಾರೆ. 

ಈ ವೇಳೆ ಪೊಲೀಸ್ ಅಧಿಕಾರಿ ಹಾಗೂ ಯುವಕರ ಗುಂಪಿನ ನಡುವೆ ಮಾತಿನ ಚಕಮಕಿಯಾಗಿದ್ದು, ಯುವಕರ ಗುಂಪು ಪೊಲೀಸ್ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆ ಸಂಬಂಧ 09 ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು, ಓರ್ವ ತಲೆಮಾರಿಸಿಕೊಂಡಿದ್ದಾನೆ. ಆರೋಪಿಗಳು ಘಟನೆ ನಡೆದಾಗ ಗಾಂಜಾ ಸೇವಿಸಿದ್ದರು ಎಂದು ತಿಳಿದು ಬಂದಿದ್ದು, ಇನ್ನೋರ್ವ ಆರೋಪಿ ಬಂಧನವಾದ ಕೂಡಲೇ ಕೋರ್ಟ್​​ಗೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.