ಬೆಂಗಳೂರು: ಭಯೋತ್ಪಾದನೆ ಚಟುವಟಿಕೆಗೆ ಪಿತೂರಿ ಮತ್ತು ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ಪಾಕ್ ಪ್ರಜೆ ಜಾಮೀನಿನ ಮೇರೆಗೆ ಬಿಡುಗಡೆಯಾಗಿದ್ದರೂ, ದೇಶ ತೊರೆಯಲು ಅವಕಾಶ ನೀಡದೆ ವಿದೇಶಿಯರ ಪ್ರತಿಬಂಧನ ಕೇಂದ್ರದಲ್ಲಿ ಇರಿಸಿರುವುದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಕರಾಚಿಯ ಉತ್ತರ ನಿಜಾಮಾಬಾದ್ ನಿವಾಸಿ ಮೊಹಮ್ಮದ್ ಫಹದ್ (37) ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಅರ್ಜಿ ಸಂಬಂಧ ಕೋರ್ಟ್ ಕಚೇರಿ ಎತ್ತಿರುವ ಕೆಲ ಆಕ್ಷೇಪಣೆಗಳನ್ನು ಸರಿಪಡಿಸಲು ಅರ್ಜಿದಾರರ ವಕೀಲರಗೆ ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ರಾಜ್ಯ ಸರ್ಕಾರ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ, ಬೆಂಗಳೂರಿನ ಸಂಡೇಕೊಪ್ಪದಲ್ಲಿರುವ ವಿದೇಶಿಯರ ಪ್ರತಿಬಂಧನ ಕೇಂದ್ರದ ಮೇಲ್ವಿಚಾರಕರನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಿದ್ದಾರೆ.
ಹೈಕೋರ್ಟ್‌ನಲ್ಲಿ ಖುಲಾಸೆ:
ಇದೇ ಪ್ರಕರಣದ ಅಬ್ದುಲ್ ರೆಹಮಾನ್ ಹಾಗೂ ಮೊಹಮ್ಮದ್ ಫಹದ್ ಅವರನ್ನು ತಪ್ಪಿತಸ್ಥರು ಎಂಬುದಾಗಿ 2023ರ ಫೆಬ್ರವರಿಯಲ್ಲಿ ಬೆಂಗಳೂರಿನ ಎನ್‌ಐಎ ವಿಶೇಷ ಕೋರ್ಟ್ ಶಿಕ್ಷೆ ವಿಧಿಸಿತ್ತು. ಈ ಆದೇಶ ಪ್ರಶ್ನಿಸಿ ಫಹದ್ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಫಹದ್ ಅವರನ್ನು ಖುಲಾಸೆಗೊಳಿಸಿ ಸೆ. 24ರಂದು ಹೈಕೋರ್ಟ್ ತೀರ್ಪು ನೀಡಿತ್ತು.
ಅಲ್ಲದೆ, ಜೈಲಿನಿಂದ ಬಿಡುಗಡೆಯಾದ ನಂತರ ಫಹದ್ ಅವರನ್ನು ಪಾಕಿಸ್ತಾನಕ್ಕೆ ಗಡಿಪಾರು ಮಾಡಬೇಕು ಎಂದು ಆದೇಶಿಸಿತ್ತು. ಹೈಕೋರ್ಟ್ ಆದೇಶದ ಮೇರೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾದ ಫಹದ್ ಅವರನ್ನು ಬೆಂಗಳೂರಿನ ಸಂಡೆಕೊಪ್ಪದಲ್ಲಿರುವ ವಿದೇಶಿಯರ ಪ್ರತಿಬಂಧನ ಕೇಂದ್ರದಲ್ಲಿ ಇರಿಸಲಾಗಿತ್ತು. ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.