| ಬೆಂಕಿ ಬಸಣ್ಣ ನ್ಯೂಯಾರ್ಕ್
ಅಮೆರಿಕದ ಹೊಸ ಅಧ್ಯಕ್ಷ ಜೋ ಬೈಡನ್ ಅಧಿಕಾರ ವಹಿಸಿಕೊಂಡ ನಂತರ ಅವರನ್ನು ಮೊಟ್ಟಮೊದಲ ಬಾರಿಗೆ ಭೇಟಿ ಮಾಡಲು ಅಮೆರಿಕಕ್ಕೆ ಬಂದು ಇಳಿದ ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿನ ಅನಿವಾಸಿ ಭಾರತೀಯರಲ್ಲಿ ಸಂಚಲನ ಮೂಡಿಸಿದ್ದಾರೆ.
ಆಪಲ್, ಅಡೋಬ್ ಸೇರಿ ಅಮೆರಿಕದ ಕೆಲವು ಬಹುದೊಡ್ಡ ಕಂಪನಿಗಳ ಸಿಇಒಗಳೊಂದಿಗೆ ಅವರು ಮಾತುಕತೆ ನಡೆಸಿದ್ದಾರೆ. ಅಮೆರಿಕದ ಬಹುರಾಷ್ಟ್ರೀಯ ಕಂಪನಿಗಳಲ್ಲಿ ತುಂಬಾ ಪ್ರತಿಭಾವಂತ, ಬುದ್ಧಿವಂತ, ಕಠಿಣ ಪರಿಶ್ರಮ ಮಾಡುವ ಅನಿವಾಸಿ ಭಾರತೀಯರು ಬಹಳಷ್ಟು ಸಂಖ್ಯೆಯಲ್ಲಿದ್ದಾರೆ. ಈ ಕಂಪನಿಗಳು ಭಾರತದಲ್ಲಿ ತಮ್ಮ ಶಾಖೆಗಳನ್ನು ತೆರೆಯಲು ಉತ್ಸುಕವಾಗಿವೆ. ಈ ಹಿಂದೆ ಒಬಾಮ ಅಧಿಕಾರದಲ್ಲಿದ್ದಾಗ, ಉಪಾಧ್ಯಕ್ಷರಾಗಿದ್ದ ಜೋ ಬೈಡನ್ ಪಾಕಿಸ್ತಾನದ ಪರ ಮೃದು ಧೋರಣೆ ಮತ್ತು ವಿಶೇಷ ಪ್ರೀತಿಯನ್ನು ಹೊಂದಿದ್ದರು. ಹೀಗಾಗಿ ಅವರು ಅಧಿಕಾರಕ್ಕೆ ಬಂದ ತಕ್ಷಣ ಅಮೆರಿಕ ಮತ್ತು ಪಾಕಿಸ್ತಾನದ ಬಾಂಧವ್ಯಗಳು ತುಂಬಾ ವೃದ್ಧಿಯಾಗಲಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದರು. ಆದರೆ ಮುತ್ಸದ್ದಿ, ಚಾಣಾಕ್ಷ ಮೋದಿಯವರು ಜೋ ಬೈಡನ್ಗೆ ಬಹಳ ಹತ್ತಿರವಾಗಿ ಅಮೆರಿಕವು ಪಾಕಿಸ್ತಾನವನ್ನು ಕಡೆಗಣಿಸುವಂತೆ, ನಿರ್ಲಕ್ಷಿಸುವಂತೆ ಮಾಡಿದ್ದಾರೆ.
ಕೋವಿಡ್ನಿಂದಾಗಿ ಭಾರತದಲ್ಲಿರುವ ಅಮೆರಿಕ ರಾಯಭಾರಿ ಕಚೇರಿಗಳು ಹಲವಾರು ತಿಂಗಳು ಮುಚ್ಚಿದ್ದು, ಅಮೆರಿಕ ಪ್ರವಾಸ ಬಯಸಿದವರಿಗೆ ಬಹಳಷ್ಟು ತೊಂದರೆಯಾಗಿತ್ತು. ಭಾರತಕ್ಕೆ ರಜೆಗೆ ಬಂದವರು ಅಲ್ಲಿಯೇ ಸಿಕ್ಕಿಹಾಕಿಕೊಂಡಿದ್ದರು. ಆದರೆ ಈಗ ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಲಿದೆ. ಈಗಲೂ ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಗಳಲ್ಲಿ ವೀಸಾ ಅಪಾಯಿಂಟ್ಮೆಂಟ್ಗಳಿಗೆ ಅನೇಕ ತಿಂಗಳು ಕಾಯಬೇಕಾಗಿದೆ. ಟ್ರಂಪ್ ಸರ್ಕಾರವು ವಿಧಿಸಿದ್ದ ಎಚ್1ಬಿ ವೀಸಾ ಕಠಿಣ ನಿಯಮಗಳನ್ನು ಇನ್ನೂ ಕಡಿಮೆ ಮಾಡಿದರೆ ಭಾರತೀಯರಿಗೆ ಒಳ್ಳೆಯದಾಗುತ್ತದೆ. 65 ಸಾವಿರದಷ್ಟಿರುವ ಎಚ್1ಬಿ ವೀಸಾಗಳಿಗೆ ಪ್ರತಿವರ್ಷ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನರು ಅರ್ಜಿ ಹಾಕುತ್ತಿದ್ದಾರೆ. ಅದರಲ್ಲಿ ಬಹಳಷ್ಟು ಜನರು ಭಾರತೀಯರೇ ಆಗಿದ್ದಾರೆ. ಎಚ್1ಬಿ ವೀಸಾಗಳಿಗೆ ಬಹಳಷ್ಟು ಬೇಡಿಕೆ ಇರುವುದರಿಂದ, ಅದರ ಗರಿಷ್ಠ ಮಿತಿಯನ್ನು ಹೆಚ್ಚಿಸುವ ಪ್ರಯತ್ನವಾಗಬೇಕು. ಅಮೆರಿಕದಲ್ಲಿ ಲಕ್ಷಾಂತರ ಜನರು ಗ್ರೀನ್ ಕಾರ್ಡಗಳಿಗೆ ಅನೇಕ ವರ್ಷಗಳಿಂದ ಇನ್ನೂ ಕಾಯುತ್ತಿದ್ದಾರೆ. ಪ್ರಧಾನಿ ಮೋದಿಯವರು ಅನಿವಾಸಿ ಭಾರತೀಯರ ಎಚ್1ಬಿ, ಗ್ರೀನ್ಕಾರ್ಡ್ ಸಮಸ್ಯೆಗಳನ್ನು ಜೋ ಬೈಡನ್ ಜತೆ ರ್ಚಚಿಸಿ ಪರಿಹಾರ ಒದಗಿಸಿಕೊಟ್ಟರೆ ತುಂಬಾ ಒಳ್ಳೆಯದಾಗುತ್ತದೆ.