ನ್ಯೂಸ್

'ಅಮೆರಿಕದ ಅಧ್ಯಕ್ಷರಿಗೆ ಕೊಳೆಗೇರಿಗಳು ಕಾಣದಂತೆ ಗೋಡೆ ಕಟ್ಟಿಸುವ ಮೋದಿಯವರು ಕುಸಿದಿರುವ ಆರ್ಥಿಕತೆ ಕಾಣಿಸದಿರಲು ಏನು ಮಾಡುತ್ತಾರಂತೆ'...' ಎಚ್​ಡಿಕೆ ಪ್ರಶ್ನೆ

ಬೆಂಗಳೂರು: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರು ಫೆ.24 ಮತ್ತು 25ರಂದು ಭಾರತದ ಪ್ರವಾಸ ಕೈಗೊಂಡಿದ್ದಾರೆ. ಅವರ ಭೇಟಿಗಾಗಿ ಗುಜರಾತ್​ನ ಅಹಮದಾಬಾದ್​ನಲ್ಲಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.

ಅದರಲ್ಲಿ ಕೊಳೆಗೇರಿಗಳು ಕಾಣದಂತೆ ಏಳು ಅಡಿ ಗೋಡೆಗಳನ್ನು ಕಟ್ಟಲಾಗುತ್ತಿರುವ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿದೆ. ಇದೇ ವಿಚಾರವನ್ನು ಇಟ್ಟುಕೊಂಡು ಪ್ರತಿಪಕ್ಷಗಳು ಕೇಂದ್ರ ಸರ್ಕಾರವನ್ನು ಟೀಕಿಸುತ್ತಿವೆ. ನಿನ್ನೆ ಶಿವಸೇನಾ ಈ ಬಗ್ಗೆ ವ್ಯಂಗ್ಯ ಮಾಡಿತ್ತು.

ಇಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಅವರು ಟ್ವೀಟ್​ ಮಾಡುವ ಮೂಲಕ ಗೋಡೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಭಾರತದ ಭೇಟಿ ವೇಳೆ ಅಹ್ಮದಾಬಾದ್​ನ ಸ್ಲಂಗಳು ಕಾಣಬಾರದು ಎಂದು ಪ್ರಧಾನಿ ನರೇಂದ್ರ ಮೋದಿಯವರು ಎತ್ತರದ ಗೋಡೆಗಳನ್ನು ಕಟ್ಟಿಸುತ್ತಿದ್ದಾರಂತೆ. ಆದರೆ ಅಧಃಪತನಕ್ಕೆ ಕುಸಿದಿರುವ ದೇಶದ ಆರ್ಥಿಕತೆ ಕಾಣಿಸಿದಂತೆ ಮೋದಿ ಯಾವ ಗೋಡೆ ಕಟ್ಟುತ್ತಾರೆ ಎಂದು ಪ್ರಶ್ನಿಸಿದ್ದಾರೆ.

ಅಷ್ಟೇ ಅಲ್ಲದೆ, ದೇಶವ್ಯಾಪಿ ಭುಗಿಲಿದ್ದಿರುವ ಸಿಎಎ ವಿರೋಧಿ ಹೋರಾಟ ಕಾಣಿಸಿದಂತೆ ಯಾವ ಭದ್ರಕೋಟೆ ನಿರ್ಮಿಸುತ್ತಾರೆ? ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಸಮಸ್ಯೆಗಳನ್ನು ಮರೆಮಾಚಲು ಯಾವ ತಡೆಗೋಡೆ ನಿರ್ಮಿಸುತ್ತಾರೆ? ಮೋದಿಯವರೇ ಇದಕ್ಕೆಲ್ಲ ಉತ್ತರಿಸುತ್ತೀರಾ ಎಂದು ಟ್ವೀಟ್ ಮೂಲಕ ವ್ಯಂಗ್ಯವಾಗಿ ಕೇಳಿದ್ದಾರೆ.