ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ಮುಕ್ತವಾಗಿ ವಿಧಾನಸಭೆ ಚುನಾವಣೆಗಳನ್ನು ನಡೆಸಿಕೊಟ್ಟಿದ್ದಕ್ಕಾಗಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ನೀಡಿ ಗೌರವಿಸಬೇಕು ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ಶಮಿಕ್ ಭಟ್ಟಾಚಾರ್ಯ (Samik Bhattacharya) ಹೇಳಿದ್ದಾರೆ.
ನಿನ್ನೆ(ಶುಕ್ರವಾರ) ಮಾಧ್ಯಮಗಳೊಂದಿಗೆ ಮಾತನಾಡಿದ ಶಮಿಕ್ ಭಟ್ಟಾಚಾರ್ಯ, ಮತದಾರರ ಪಟ್ಟಿಯಿಂದ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳನ್ನು ತೆಗೆದುಹಾಕಿ ಪಟ್ಟಿಯನ್ನು ಶುದ್ಧೀಕರಿಸಿದ ಕೀರ್ತಿ ಜ್ಞಾನೇಶ್ ಕುಮಾರ್ ಅವರಿಗೆ ಸಲ್ಲುತ್ತದೆ ಎಂದು ಶ್ಲಾಘಿಸಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಸಮಯದಲ್ಲಿ ಇಬ್ಬರು ಚುನಾವಣಾ ಆಯುಕ್ತರು, ತಮ್ಮ ಹೆಸರಿನಲ್ಲಿ ತೆಗೆದುಕೊಂಡ ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ವರದಿಗಳ ನಂತರ ಚುನಾವಣಾ ಆಯೋಗದ ಕಾರ್ಯವೈಖರಿಯ ಬಗ್ಗೆ ತೀವ್ರ ವಿವಾದ ಸೃಷ್ಟಿಯಾಗಿರುವ ವೇಳೆಯಲ್ಲಿ ಬಂಗಾಳದ ಬಿಜೆಪಿ ನಾಯಕರಿಂದ ಈ ಅಚ್ಚರಿಯ ಹೇಳಿಕೆ ಹೊರಬಿದ್ದಿದೆ.
ಇತ್ತೀಚೆಗೆ ಸಿಇಸಿ ವಿರುದ್ಧ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಿದ ಭಟ್ಟಾಚಾರ್ಯ, ಜ್ಞಾನೇಶ್ ಕುಮಾರ್ ಅವರಿಗೆ ಕನಿಷ್ಠ ಪಕ್ಷ ಪದ್ಮಭೂಷಣ ಪ್ರಶಸ್ತಿಯನ್ನಾದರೂ ನೀಡಬೇಕು. ಸುದೀರ್ಘ ಕಾಲದ ನಂತರ ಪಶ್ಚಿಮ ಬಂಗಾಳದಲ್ಲಿ ಬೆದರಿಕೆ ತಂತ್ರಗಳನ್ನು ದೂರವಿಡಲಾಯಿತು, ಚುನಾವಣೆಯ ಸಮಯದಲ್ಲಿ ಯಾವುದೇ ಕೊಲೆ ಘಟನೆಗಳು ನಡೆಯಲಿಲ್ಲ ಮತ್ತು ಜನರು ಮುಕ್ತವಾಗಿ ತಮ್ಮ ಮತ ಚಲಾಯಿಸಲು ಅವಕಾಶ ನೀಡಿದಕ್ಕೆ ರಾಜ್ಯದ ಜನತೆ ತುಂಬಾ ಸಂತೋಷವಾಗಿದ್ದಾರೆ ಎಂದು ಹೇಳಿದರು.
ಜ್ಞಾನೇಶ್ ಕುಮಾರ್ ಅವರು ಬಂಗಾಳದ ಮತದಾರರ ಪಟ್ಟಿಯನ್ನು ಶುದ್ಧೀಕರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಶ್ಲಾಘಿಸಿದ ಬಟ್ಟಾಚಾರ್ಯ, ಇಂತಹ ಗಡಿ ರಾಜ್ಯದಲ್ಲಿ, ಜ್ಞಾನೇಶ್ ಕುಮಾರ್ ಅವರು ಮತದಾರರ ಪಟ್ಟಿಯಿಂದ ಬಾಂಗ್ಲಾದೇಶಿ ನುಸುಳುಕೋರರ ಹೆಸರುಗಳನ್ನು ತೆಗೆದುಹಾಕಲು ವಿಶೇಷ ಆಸಕ್ತಿ ವಹಿಸಿದರು. ಇಲ್ಲಿನ ಜನರು ಇಂತಹ ಪ್ರಜಾಸತ್ತಾತ್ಮಕ ಚುನಾವಣೆಯನ್ನು ಅಪರೂಪವಾಗಿ ಕಂಡಿದ್ದಾರೆ. ಆದ್ದರಿಂದ, ಬಂಗಾಳದ ಸಾರ್ವಜನಿಕರು ಜ್ಞಾನೇಶ್ ಕುಮಾರ್ ಅವರಿಗೆ ಕೃತಜ್ಞರಾಗಿದ್ದಾರೆ ಮತ್ತು ಅವರನ್ನು ಮನಃಪೂರ್ವಕವಾಗಿ ಹಾರೈಸಿದ್ದಾರೆ ಎಂದರು.
ಒಂದು ಕಡೆ ಬಿಜೆಪಿ ನಾಯಕರು ಜ್ಞಾನೇಶ್ ಕುಮಾರ್ ಬೆಂಬಲಕ್ಕೆ ನಿಂತಿದ್ದರೆ ಅಭಿಜಿತ್ ದೀಪ್ಕೆ ನೇತೃತ್ವದ ಕಾಕ್ರೋಚ್ ಜನತಾ ಪಾರ್ಟಿ, 48 ಗಂಟೆಗಳಲ್ಲಿ ಸಿಇಸಿ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದ್ದು, ಈ ಗಡುವಿನೊಳಗೆ ರಾಜೀನಾಮೆ ನೀಡದಿದ್ದರೆ ದೇಶವ್ಯಾಪಿ ಹೋರಾಟ ನಡೆಸುವುದಾಗಿ ಸಿಜೆಪಿ ಎಚ್ಚರಿಸಿದೆ. ಮತ್ತೊಂದೆಡೆ, ಶುಕ್ರವಾರ (ಸೆಪ್ಟೆಂಬರ್ 25) ಕಾಂಗ್ರೆಸ್ ಪಕ್ಷವು ಸಿಇಸಿ ಅವರನ್ನು ಹುದ್ದೆಯಿಂದ ವಜಾಗೊಳಿಸಬೇಕು ಮತ್ತು ಬಂಧಿಸಬೇಕು ಎಂದು ಆಗ್ರಹಿಸಿ ಬೃಹತ್ ಪ್ರತಿಭಟನೆಗಳನ್ನು ನಡೆಸಿದೆ.
ಇದರ ಮಧ್ಯೆ, ಇಬ್ಬರು ಆಯುಕ್ತರ ಸಮ್ಮತಿಯಿಲ್ಲದೆ ಜ್ಞಾನೇಶ್ ಕುಮಾರ್ ಅವರು ತಂದಿದ್ದಾರೆನ್ನಲಾದ ತಂತ್ರಾಂಶ ಬದಲಾವಣೆಗಳು ಹಾಗೂ ಆಯೋಗದ ಚುನಾವಣಾ ಆದೇಶಗಳನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿಯೊಂದನ್ನು ಸಲ್ಲಿಸಲಾಗಿದೆ. ಇನ್ನೊಂದೆಡೆ, ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮಾತನಾಡಿ, ಅಧಿಕೃತ ಚರ್ಚೆಗಳ ಸಮಯದಲ್ಲಿ ಮೂವರು ಚುನಾವಣಾ ಆಯುಕ್ತರು ವಿಭಿನ್ನ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದು ಚುನಾವಣಾ ಆಯೋಗವು ಪ್ರಜಾಸತ್ತಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಸಮರ್ಥಿಸಿಕೊಂಡಿದ್ದಾರೆ(ಏಜೆನ್ಸೀಸ್).