ಉತ್ತರಕನ್ನಡ: ಇಲ್ಲೊಬ್ಬ ಯುವಕ ಬೈಕ್ ಹೇಗಿದೆ ನೋಡ್ತೀನಿ ಎಂದವನಿಗೆ ಕೀಲಿ ಕೈ ಕೊಟ್ಟು ಬೈಕ್ ಕಳೆದುಕೊಂಡಿದ್ದಾನೆ. ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಬಾಳೆಗುಳಿ ಬಳಿ ಈ ಘಟನೆ ನಡೆದಿದೆ.
'ನಾನೂ ಕೆಟಿಎಂ ಬೈಕ್ ಖರೀದಿಸಬೇಕು ಅಂತ ಇದ್ದೇನೆ. ಒಂದ್ಸಲ ಬೈಕ್ ಹೇಗಿದೆ ನೋಡಬಹುದಾ. ಕೀಲಿ ಕೈ ಕೊಡಿ, ಓಡಿಸಿ ನೋಡ್ತೀನಿ. ಒಂದು ರೌಂಡ್ ಸವಾರಿ ಮಾಡ್ತೀನಿ. ಬೈಕ್ ಹೇಗಿದೆ ಅಂತ ಗೊತ್ತಾಗುತ್ತೆ' ಎಂದು ಈ ಭೂಪ ಕೇಳಿದ್ದಾನೆ. ಇರಬಹುದೇನೋ ಅಂತ ನಂಬಿ ಅರವಿಂದ ತಾಂಡೇಲ್ ಎನ್ನುವಾತ ತನ್ನ ಬೈಕ್ ಮತ್ತು ಕೀಯನ್ನು ಕಳ್ಳನ ಕೈಗೊಪ್ಪಿಸಿದ್ದಾನೆ.
ಇದನ್ನೇ ಅವಕಾಶ ಎಂದು ಭಾವಿಸಿದ ಈ ಭೂಪ ಕೆಟಿಎಂ ಚಲಾಯಿಸಿಕೊಂಡು ಫಾಸ್ಟ್ ಆಗಿ ಪರಾರಿ ಆಗಿದ್ದಾನೆ. ಎಷ್ಟು ಹೊತ್ತಾದರೂ ಬೈಕ್ ತೆಗೆದುಕೊಂಡು ಹೋದ ವ್ಯಕ್ತಿ ಬಂದಿಲ್ಲ ಎಂದು ಅರವಿಂದ ತಾಂಡೇಲ್ ಚಿಂತಿತರಾಗಿದ್ದಾರೆ. ಕಡೆಗೆ ಈ ಬೈಕ್ ಕಾಯುತ್ತಾ ಕುಳಿತರೆ ಹಿಂದಕ್ಕೆ ಬರಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದುರ್ವಿಧಿ ಏನೆಂದರೆ ಕಳೆದ ವಾರವಷ್ಟೇ ಎರಡೂವರೆ ಲಕ್ಷ ಹಣ ನೀಡಿ ಅರವಿಂದ ತಾಂಡೇಲ್ ಕೆಟಿಎಮ್ ಬೈಕ್ ಖರೀದಿಸಿದ್ದರು.
ಕಳ್ಳ ಬೈಕ್ ಕದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದ್ದು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈಗ ಪೊಲೀಸರು ಕಳ್ಳನನ್ನು ಹಿಡಿಯಲು ಬಲೆ ಬೀಸಿದ್ದಾರೆ.