ನ್ಯೂಸ್

ಉಡುತಡಿಯಲ್ಲಿರುವ ಗುರುರಾಜನೆಂಬ ಉಡುರಾಜ

ಇಲ್ಲಿನ ಬೃಂದಾವನಕ್ಕೆ ಅರ್ಪಿಸಿದ ಪಾದೋದಕವನ್ನು ಸ್ವೀಕರಿಸಿದ ಎಷ್ಟೋ ಜನರಿಗೆ ಯಾವುದೇ ಔಷಧೋಪಚಾರವಿಲ್ಲದೆ ಸರ್ಪದಂಶನದಿಂದುಂಟಾದ ವಿಷಾದಿಗಳು ನಿವಾರಣೆಯಾಗಿವೆ. ಇಲ್ಲಿನ ರಾಯರನ್ನು ಸೇವಿಸಿದ ಎಷ್ಟೋ ಭಕುತರಿಗೆ ಚರ್ವದಿಗತ ರೋಗಗಳೂ ಸುಲಭವಾಗಿ ಪರಿಹೃತವಾಗಿವೆ. ಉಡುತಡಿಯಲ್ಲಿ ಒಂದೆಡೆ ಸಮಾಜದ ಮಹಾನ್ ಸಾಧಕಿ ಅಕ್ಕಮಹಾದೇವಿಯು ಜನಿಸಿ ಲೋಕಕಲ್ಯಾಣವನ್ನು ಮಾಡಿದ್ದರೆ, ಮಂಚಾಲೆಯಿಂದ ಹೊನ್ನಾಳಿಯ ದ್ವಾರಾ ಆಗಮಿಸಿದ ಕ್ರಾಂತಿಕಾರಿ ವೇದಾಂತಿ, ಯತಿಪುಂಗವ, ಶ್ರೇಷ್ಠ ಸಮಾಜಸುಧಾರಕ

ಶ್ರೀ ರಾಘವೇಂದ್ರರು ನೆಲೆಸಿ ಇಂದಿಗೂ ಭಕ್ತವರ್ಗವನ್ನೂ ಹರಸುತ್ತಿದ್ದಾರೆ. ರಾಯರ ಭಕುತೆಯಾದ ಸಮೀಪದ ಮಳೂರಿನಲ್ಲಿರುವ ಪ್ರೇಮಲತಾ ಗುರುರಾವ್ ಅವರು ಅನೇಕ ದಶಕಗಳಿಂದ ರಾಯರ ನಾಮಜಪಮಾತ್ರದಿಂದಲೇ, ಅವರ ತೀರ್ಥಮಾತ್ರರಿಂದಲೇ ಹಾವು ಕಚ್ಚಿದವರಿಗೆ ಚಿಕಿತ್ಸೆ ನೀಡುತ್ತ ಗುಣಮುಖರನ್ನಾಗಿಸುತ್ತಿದ್ದಾರೆ. ಇಂತು ರಾಯರು ಶಾಂತಸ್ವಭಾವದ ಚಂದ್ರನಂತೆ ಉಡುತಡಿಯ ಭಕುತರಿಗೆ ಶಾಂತಿ, ನೆಮ್ಮದಿ, ಬೆಳಕುಗಳನ್ನು ನೀಡುವ ಉಡುರಾಜನಾಗಿ ವಿರಾಜಿಸುತ್ತಿರುವುದು ನಮ್ಮ ಸೌಭಾಗ್ಯವೇ ಸರಿ.

ಶಿವಮೊಗ್ಗ ಜಿಲ್ಲೆಗೆ ಸೇರಿದ ಶಿಕಾರಿಪುರ ತಾಲ್ಲೂಕಿನ ಸುಪರ್ದಿಯಲ್ಲಿ ಬರುವ ಪ್ರಾಚೀನ ಗ್ರಾಮವೇ ಉಡುತಡಿ ಅಥವಾ ಉಡುಗಣಿ. ಶಿವಮೊಗ್ಗದಿಂದ ಉತ್ತರದಿಕ್ಕಿನೆಡೆಗೆ 15 ಕಿ.ಮೀ.. ಚಲಿಸಿದಾಗ ಸಿಗುವ ಗ್ರಾಮವೇ ಉಡುತಡಿ. ಕರ್ನಾಟಕದ ಹೆಮ್ಮೆಯ ವಚನಗಾರ್ತಿ ಅಕ್ಕಮಹಾದೇವಿ ಜನಿಸಿದ ಸ್ಥಳವೂ ಹೌದು ಈ ಗ್ರಾಮ. ಈಕೆ ಇದೇ ಊರಿನಲ್ಲಿದ್ದುಕೊಂಡು 12ನೇ ಶತಮಾನದಲ್ಲಿ ಪರಶಿವನನ್ನು ಕೊಂಡಾಡಿದ್ದು ಶಿಶುಗಳಿಗೂ ವಿದಿತವಾದ ವಿಚಾರ. ಈ ಹಳ್ಳಿ ಶಿರಾಳಕೊಪ್ಪದಿಂದ ದಕ್ಷಿಣಕ್ಕೆ 5 ಕಿ.ಮೀ. ದೂರದಲ್ಲಿದೆ. 312 ವರ್ಷಗಳ ಹಿಂದೆ ಗುರುರಾಯರು ಮೃತ್ತಿಕಾರೂಪದಲ್ಲಿ ಬಂದು ನೆಲೆಸಿದ ಪವಿತ್ರತಾಣ ಈ ಉಡುತಡಿಯಾಗಿದೆ. ರಾಯರು ಇಲ್ಲಿಗೆ ಬಂದದ್ದೇ ಒಂದು ವಿಶೇಷ ಸಂದರ್ಭ. ಹೊನ್ನಾಳಿಗೆ ಬರುತ್ತೇನೆಂದು ಶ್ರೀರಾಮಾಚಾರ್ಯರಿಗೆ ತಿಳಿಸಿದ್ದ ರಾಯರು ಸ್ವಯಂ ಯತಿವೇಷದಿಂದ ಬಂದು ಎಲ್ಲರೂ ನೋಡನೋಡುತ್ತಿದ್ದಂತೆಯೇ ಗರ್ಭಗುಡಿ ಪ್ರವೇಶಿಸಿ ನೆಲೆಸಿದ್ದನ್ನು ಅರಿತಿದ್ದೇವಷ್ಟೇ! ಆದರೆ ತರುವಾಯ ಮಂಚಾಲೆಯಿಂದ ತಡವಾಗಿ ಬಂದ ರಾಯರ ಮೃತ್ತಿಕೆಯನ್ನು ಏನು ಮಾಡಬೇಕೆಂದು ಹೊನ್ನಾಳಿಯ ಭಕ್ತರು ಆಲೋಚಿಸುತ್ತಿದ್ದಾಗ ಸ್ವಯಂ ರಾಯರೇ ಭಕ್ತರೊಬ್ಬರಿಗೆ ತನ್ನನ್ನು ಉಡುತಡಿಗೆ ತೆಗೆದುಕೊಂಡು ಹೋಗಿ ಅಲ್ಲಿ ಬೃಂದಾವನದಿ ಪ್ರತಿಷ್ಠಾಪಿಸಿ ಎಂದು ಆದೇಶಿಸಿದ್ದರಂತೆ. ಅದರಂತೆ ಭಕ್ತರು ಉಡುಗಣಿಯಲ್ಲಿ ಚಿಕ್ಕ ತುಳಸಿಬೃಂದಾವನದ ಆಕಾರದಲ್ಲಿ ರಾಯರ ಮೃತ್ತಿಕೆಯನ್ನಿಟ್ಟು ಪ್ರತಿಷ್ಠಾಪಿಸಿದ್ದರಂತೆ. ಹೀಗಾಗಿಯೇ ಇದು ತೃತೀಯ ಮಂತ್ರಾಲಯವೆನಿಸಿದೆ. ಕ್ರಿ.ಶ. 1710ರ ಆಸುಪಾಸಿನಲ್ಲಿ ರಾಯರ ಪರಮಾಪ್ತ ಭಕ್ತರೂ ಅವರದ್ದೇ ಪೀಠದಲ್ಲಿ ವಿರಾಜಮಾನರೂ ಆಗಿದ್ದ ಶ್ರೀಮತ್ ಸುಮತೀಂದ್ರತೀರ್ಥರು ಇಲ್ಲಿಗೆ ಸಂಚಾರಕ್ರಮೇಣ ಆಗಮಿಸಿ ರಾಯರನ್ನು ಅರ್ಚಿಸಿದ್ದರಂತೆ. ಇಲ್ಲಿನ ರಾಯರ ಬೃಂದಾವನವಿದ್ದ ಸ್ಥಳವು ಸ್ವಲ್ಪ ಭೂಮಿಯಿಂದ ಹಳ್ಳ ಭಾಗದಲ್ಲಿದ್ದ ಕಾರಣ ಮಳೆಗಾಲದಲ್ಲಿ ಊರಿನ ನೀರೆಲ್ಲಾ ಇಲ್ಲೇ ಸೇರಿಕೊಂಡು ರಾಯರ ಬೃಂದಾವನವನ್ನು ಅಶುದ್ಧಗೊಳಿಸಿಬಿಡುತ್ತಿದ್ದವಂತೆ. ಇದನ್ನು ಕಂಡ ಆ ಊರಿನ ಕೆಲ ವೇದವಿದ್ವಾಂಸರು ರಾಯರ ಬೃಂದಾವನವನ್ನು ಭೂಗತ ಮಾಡಿ ಅದರ ಗುರುತಿಗಾಗಿ ಹಾಗೂ ಯಾರೂ ಮೆಟ್ಟದಿರಲೆಂದು ಆಂಜನೇಯನ ವಿಗ್ರಹವೊಂದನ್ನು ಆ ಭೂವಲಯದ ಮೇಲೆ ಪ್ರತಿಷ್ಠಾಪಿಸಿದರು. ಆದರೆ ಕಾಲಕ್ರಮೇಣ ಈಗ್ಗೆ ಸುಮಾರು 150 ವರ್ಷಗಳ ಹಿಂದೆ ಅಂದರೆ ಬಹುಶಃ ಶ್ರೀ ಸುಧಮೇಂದ್ರತೀರ್ಥರ ಅಥವಾ ಶ್ರೀಸುಗುಣೇಂದ್ರತೀರ್ಥರ ಕಾಲಕ್ಕೆ ಈ ಸ್ಥಳಕ್ಕಿಂತ ಹತ್ತು ಅಡಿ ದೂರದಲ್ಲಿ ಮತ್ತೊಮ್ಮೆ ಸಕ್ರಮವಾಗಿ ಗುರುರಾಯರ ಮೃತ್ತಿಕಾಬೃಂದಾವನವು ಪ್ರತಿಷ್ಠಾಪಿತವಾಯಿತು. ಈ ಮಠದ ವಿಸ್ತಾರವು ಸುಮಾರು 3200 ಅಡಿಗಳಷ್ಟಿದ್ದು ಇದೀಗ ಇದೂ ಜೀಣೋದ್ಧಾರವನ್ನು ಕಾಣುತ್ತಿದೆ. ಅನೇಕ ದಶಕಗಳಿಂದ ಈ ಮಠಕ್ಕೆ ಸೇರಿದಂತೆ ಮೂರು ಎಕರೆಗಳ ಫಲವತ್ತಾದ ಭೂಮಿಯೂ, ಒಂದು ಕಲ್ಯಾಣಮಂಟಪವೂ ಇದೆ. ರಾಯರ ಭಕುತರಾದ ಕೆಲವು ರೈತರು ಇಲ್ಲಿ ಭತ್ತವನ್ನು ಬೆಳೆದು ರಾಯರಿಗೂ ಅರ್ಪಿಸಿ ತಮ್ಮ ಜೀವನೋಪಾಯವನ್ನು ಕಂಡುಕೊಂಡಿದ್ದಾರೆ. ಹಿಂದಿನಿಂದಲೂ ಈ ರಾಯರ ಬೃಂದಾವನದ ಸಂರಕ್ಷಣೆ, ಪೂಜಾದಿಗಳನ್ನು ಊರಿನ ನಾಯಕ ಮನೆತನದವರು ನಡೆಸಿಕೊಂಡು ಬರುತ್ತಿದ್ದರು. ಕ್ರಿ.ಶ. 1982ರಲ್ಲಿ ಊರಿನ ಎಲ್ಲ ಹಿರಿಯರೂ, ಗುರುರಾಯರ ಭಕ್ತರೂ ಸೇರಿ ‘ಶ್ರೀಗುರುರಾಜ ಸೇವಾ ಸಮಿತಿ’ಯನ್ನು ಸ್ಥಾಪಿಸಿ ತನ್ಮೂಲಕ ರಾಯರ ಬೃಂದಾವನದ ಕೈಂಕರ್ಯವನ್ನು ಮೊದಲಿಗೆ ಅಧ್ಯಕ್ಷರಾಗಿದ್ದ ಜಯತೀರ್ಥಾಚಾರ್ಯ ಎನ್ನುವವರ ದ್ವಾರಾ ನಡೆಸಿಕೊಂಡು ಬರುತ್ತಿದ್ದರು. ಇಂದಿನ ಮುಖ್ಯಮಂತ್ರಿಗಳಾಗಿರುವ ಯಡಿಯೂರಪ್ಪನವರೂ ಇದರ ಗೌರವಾಧ್ಯಕ್ಷರಾಗಿದ್ದರು. ಪ್ರಸ್ತುತ ಜೀಣೋದ್ಧಾರಕ್ಕಾಗಿ ಇಲ್ಲಿರುವ ಕಲ್ಯಾಣಮಂಟಪದಲ್ಲೇ ರಾಯರ ಪುರಾತನವಾದ (ಎರಡನೆಯ) ಬೃಂದಾವನ ಹಾಗೂ ಅದರಲ್ಲಿದ್ದ ಸಾಲಿಗ್ರಾಮಾದಿಗಳನ್ನು ಬಾಲಾಲಯದಲ್ಲಿ ಇರಿಸಿದ್ದಾರೆ. ರಾಯರ ಆರಾಧನೆಯು ಇಲ್ಲಿ ಪ್ರತಿವರ್ಷವೂ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. ಮೂರು ಸಹಸ್ರಕ್ಕೂ ಮಿಗಿಲಾದ ಭಕ್ತರು ಅಂದಿನ ದಿನ ಇಲ್ಲಿನ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಮೊದಲಿಗೆ ಸ್ಥಾಪಿತವಾಗಿದ್ದ ರಾಯರ ಭೂಮ್ಯಂತರ ಬೃಂದಾವನವು ಕೇವಲ ತುಳಸಿಕಟ್ಟೆಯ ಆಕಾರದಲ್ಲಿ ನಾಲ್ಕು ಕಲ್ಲುಗಳಿಂದ ಕೂಡಿತ್ತು ಎಂಬ ವಿಚಾರ ಇತ್ತೀಚೆಗೆ ನಡೆದ ಭೂಖನನದಿಂದ ಈ ವಿಷಯವು ಬೆಳಕಿಗೆ ಬಂದಿದೆ. ಸಾಗರ ಊರಿನಿಂದ 40 ಕಿ.ಮೀ. ದೂರದಲ್ಲಿರುವ ಈ ಉಡುಗಣಿಯು ಬಳ್ಳಿಗಾವಿಯಿಂದ ಕೇವಲ ಐದು ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಬನವಾಸಿಯೂ ಕೇವಲ 45 ಕಿ.ಮೀ. ದೂರದಲ್ಲಿದೆ.