ಸಾಗರ: ಮಕ್ಕಳು ಆಧುನಿಕತೆಯತ್ತ ಒಲವು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ಬದುಕನ್ನು ಉತ್ತಮ ಮಾರ್ಗದೆಡೆಗೆ ಕೊಂಡೊಯ್ಯಲು ಸಂಸ್ಕೃತಿ, ಸಂಸ್ಕಾರದ ಅಗತ್ಯವಿದೆ. ಗುರುಕುಲ ಮಾದರಿಯ ಶಿಕ್ಷಣ ನೀಡಲೇಬೇಕಾದ ಅನಿವಾರ್ಯತೆಯೂ ಇದೆ ಎಂದು ಬೆಂಗಳೂರಿನ ದೇವನಹಳ್ಳಿಯ ದ್ರೌಪದಿ ಆದಿಪರಾಶಕ್ತಿ ಮಹಾಸಂಸ್ಥಾನ ಪೀಠದ ಶ್ರೀ ಬಾಲಯೋಗಿ ಸಾಯಿ ಮಂಜುನಾಥ ಮಹಾರಾಜ ಸ್ವಾಮೀಜಿ ಹೇಳಿದರು.
ಸಾಗರ ಸಮೀಪ ಎಂ.ಎಲ್.ಹಳ್ಳಿಯ ಶ್ರೀರಾಮಕೃಷ್ಣ ವಸತಿ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಶ್ರೀಮಾತೆ ಶಾರದಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು.
ಸಾಗರ ತಾಲೂಕಿನ ಎಂ.ಎಲ್. ಹಳ್ಳಿಯ ಶ್ರೀ ರಾಮಕೃಷ್ಣ ವಸತಿ ಶಾಲೆ ಶಕ್ತವಾದ ಶಿಕ್ಷಣ ಕ್ಷೇತ್ರವಾಗಿದೆ. ದೇಶದ ಪ್ರಜೆಗಳಲ್ಲಿ ಮನಸ್ಸು ವಿಶಾಲವಾಗಿದ್ದರೆ ಮಾತ್ರ ಸುಭಿಕ್ಷೆ ಸಾಧ್ಯ. ಬದುಕಿನಲ್ಲಿ ಗುರು, ಗುರಿ ಇರಬೇಕು. ಆಗ ಮಾತ್ರ ಮನುಷ್ಯ ಉನ್ನತ ಮಟ್ಟಕ್ಕೆ ಹೋಗುತ್ತಾನೆ. ನಮ್ಮ ಕಾಯಕಗಳು ಇನ್ನೊಬ್ಬರನ್ನು ಮೆಚ್ಚಿಸುವುದಕ್ಕಾಗಿ ಆಗಬಾರದು. ನಾವು ಯಾವಾಗಲೂ ಮಾತೃ ಹೃದಯದಿಂದ ಕೆಲಸ ಮಾಡಬೇಕು. ವರ್ತಮಾನದ ಬದುಕಿಗೆ ಗುರುಕುಲ ಮಾದರಿ ಶಿಕ್ಷಣದ ಅಗತ್ಯತೆ ಇದೆ ಎಂದರು.
ಶಿವಮೊಗ್ಗದ ದೊಡ್ಡಮ್ಮದೇವಿ ಉಪಾಸಕ ಸಿದ್ದಪ್ಪಾಜಿ ಗುರೂಜಿ ಮಾತನಾಡಿ, ಶಕ್ತಿ ಉಪಾಸನೆ ಮನೆ ಮನೆಯಲ್ಲಿ ನಡೆಯಬೇಕು. ಎಲ್ಲಿ ಶಕ್ತಿ ಉಪಾಸನೆ ನಡೆಯುತ್ತದೆಯೋ ಅಲ್ಲಿ ಸಿದ್ಧರು, ಶರಣರು, ಮಹಾತ್ಮರು ಅವತರಿಸುತ್ತಾರೆ. ಶಕ್ತಿ ಸಂಪ್ರದಾಯದ ದೇವರ ಪೂಜೆ ಮತ್ತು ಅನುಷ್ಠಾನ ಮನುಷ್ಯನಲ್ಲಿ ಆತ್ಮಬಲ ಹೆಚ್ಚಿಸುತ್ತದೆ ಎಂದು ಹೇಳಿದರು.
ಶಕ್ತಿದೇವಿ ಕಾಳಿಕಾಂಬೆಯ ಉಪಾಸನೆಯಿಂದ ಕವಿ ಕಾಳಿದಾಸ ಮೂಡಿ ಬಂದ. ಆತ ತನ್ನ ಕಾವ್ಯದ ಉದ್ದಕ್ಕೂ ದೇವಿಯ ಉಪಾಸನೆ ಮಾಡುತ್ತಾನೆ. ಸಿದ್ಧಿ ಇಲ್ಲದ ಪ್ರಸಿದ್ಧಿಯಿಂದ ಯಾವುದೇ ಉಪಯೋಗವಿಲ್ಲ. ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯವು ಮಕ್ಕಳಲ್ಲಿ ಮನೋಬಲ ತುಂಬಿ ಉತ್ತಮ ಪ್ರಜೆಯನ್ನಾಗಿ ರೂಪಿಸುವ ಕೆಲಸ ಮಾಡುತ್ತಿದೆ ಎಂದರು.
ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಜ್ಞಾನಾನಂದಜೀ ಮಹರಾಜ್ ಮಾತನಾಡಿ, ನಿತ್ಯ ಕರ್ಮವನ್ನು ಶ್ರದ್ಧೆಯಿಂದ ಮಾಡಬೇಕು. ಮಕ್ಕಳ ಬೆಳವಣಿಗೆಯಲ್ಲಿ ಶಿಕ್ಷಕರ ಪಾತ್ರ ಎಷ್ಟಿದೆಯೋ ಪಾಲಕರ ಪಾತ್ರವೂ ಅಷ್ಟೇ ಇದೆ. ಮಾನವೀಯ ಮೌಲ್ಯಗಳ ಮೂಲಕ ಬದುಕು ಕಟ್ಟಿಕೊಳ್ಳಬೇಕು. ಬದುಕು ಆದರ್ಶವಾಗಬೇಕೇ ಹೊರತು ಆಡಂಬರವಾಗಬಾರದು. ಇಲ್ಲಿನ ವಸತಿ ಶಾಲೆಯಲ್ಲಿ ಮಕ್ಕಳಿಗೆ ಮಹಾತ್ಮರು, ದಾರ್ಶನಿಕರು ಮುಂತಾದವರ ಬದುಕನ್ನು ಮಕ್ಕಳಿಗೆ ತಿಳಿಸುವ ಶಿಕ್ಷಣ ನೀಡುತ್ತಿದ್ದು, ಅವರನ್ನು ಸಂಸ್ಕೃತಿ ಸಂಸ್ಕಾರದ ಮೂಲಕ ಮುನ್ನಡೆಸುವ ಕಾಯಕ ನಮ್ಮ ಗುರುಕುಲದ ಮೂಲಕ ನಡೆಯುತ್ತಿದೆ ಎಂದು ತಿಳಿಸಿದರು.
ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯದ ಹಿರಿಯ ವಿದ್ಯಾರ್ಥಿ, ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವಿಜ್ಞಾನ ವೈದ್ಯ ಶಾಸ್ತ ವಿಭಾಗದ ಮುಖ್ಯಸ್ಥ ಡಾ. ಜಿ.ಎನ್.ಪ್ರಮೋದ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಶ್ರೀರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆ ಅಧ್ಯಕ್ಷ ಡಾ. ಡಿ.ಆರ್.ನಾಗೇಶ್, ಕಾರ್ಯದರ್ಶಿ ಶೋಭಾ ವೆಂಕಟರಮಣ, ಸವಿತಾ ದೇವರಾಜ್, ಭಾಗೀರಥಮ್ಮ, ವಿನಾಯಕ್, ಮಾಲ್ವೆ ಗ್ರಾಪಂ ಉಪಾಧ್ಯಕ್ಷೆ ನಾಗರತ್ನಮ್ಮ ಇತರರಿದ್ದರು.