ಈಗಿನ ಕಾಲದಲ್ಲಂತೂ ಗುರು ಎಂದಾಕ್ಷಣ ಅವನಿಂದ ನಮ್ಮ ಪ್ರಾಪಂಚಿಕ ಆಸೆ, ಆಕಾಂಕ್ಷೆಗಳೆಲ್ಲಾ ಈಡೇರುತ್ತದೆಯೇ ಎಂಬ ಗೊಂದಲಮಯ ಸನ್ನಿವೇಶದಲ್ಲಿ ಸಿಲುಕಿದ್ದಾನೆ ಈ ಸಾಧಕ ಎಂಬಾತ. ಆನಂದ, ಶಾಂತಿ, ನೆಮ್ಮದಿ, ತೃಪ್ತಿ, ಬ್ರಹ್ಮಾನಂದ, ಆತ್ಮಾನಂದ ಇತ್ಯಾದಿಗಳು ಯಾರಿಗೆ ಬೇಕಾಗಿವೆ?. ಇನ್ನು ಗುರು. ಈ ಪೂಜೆ ಸಲ್ಲಿಸಿದರೆ ಅದು ಲಭ್ಯ! ಮತ್ತೊಂದು ಆರಾಧನೆ, ಅರ್ಚನೆ ನಡೆಸಿದಲ್ಲಿ ಮಗದೊಂದು ಲಭ್ಯ ಎನ್ನುವವರೇ ತುಂಬಿರುವ ಪರಿಸರದಲ್ಲಿ ಭಗವದ್ ದರ್ಶನವೇ ಜೀವನದ ಗುರಿ ಎಂದು ತಿಳಿಸುವ ಗುರು ಎಲ್ಲಿರುವನೋ ಹುಡುಕಬೇಕಾಗಿದೆ. ಇಂತಹ ಸ್ಥಿತಿಯಲ್ಲಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಚಾರಗಳನ್ನು ತಿಳಿಯೋಣ.
ಆಚಾರ್ಯರುಗಳಲ್ಲಿ ಮೂರು ವಿಧ. ಅಧಮ ಆಚಾರ್ಯ ಶಿಷ್ಯನಿಗೆ ಉಪದೇಶ ಕೊಟ್ಟರಷ್ಟೇ ತೃಪ್ತನಾಗಿ ಬಿಡುತ್ತಾನೆ. ಮಧ್ಯಮ ಆಚಾರ್ಯ ತನ್ನ ಶಿಷ್ಯನ ಸಾಧನಾ ಮಾರ್ಗವನ್ನು ನೋಡಿ ಅದನ್ನು ಅನುಷ್ಠಾನಕ್ಕೆ ತರಲು ಪ್ರೇರೇಪಿಸುತ್ತಾನೆ. ಆದರೆ ಉತ್ತಮ ಆಚಾರ್ಯ ಅವಶ್ಯಕತೆ ತೋರಿಬಂದರೆ ತನ್ನ ಹಠಮಾರಿ ಶಿಷ್ಯರನ್ನು ಸದಾ ಎಚ್ಚರದಿಂದ ಗಮನಿಸಿ ಶಿಷ್ಯರ ಆಧ್ಯಾತ್ಮಿಕ ಏಳ್ಗೆಗೆ ಪ್ರಯತ್ನಿಸುತ್ತಾನೆ.
ಅದೊಂದು ಬಾರಿ ಸ್ವಾಮಿ ಪ್ರೇಮಾನಂದ (ಬಾಬುರಾಮ್ ಮಹಾರಾಜರು ಹಾಗೂ ಇತರ ಯುವ ಶಿಷ್ಯರೆಲ್ಲಾ ದಕ್ಷಿಣೇಶ್ವರಕ್ಕೆ ಭೇಟಿ ನೀಡಿ ಪರಮಹಂಸರೊಂದಿಗೆ ವಾಸಿಸುತ್ತಿದ್ದರು. ಬೆಳಗಿನ ಜಾವ ಸುಮಾರು ಮೂರು ಮೂರುವರೆ ಗಂಟೆಗೆ ಎದ್ದು ಎಲ್ಲಾ ಯುವಕರನ್ನು ಎಬ್ಬಿಸಿ ನಡೆಯಿರಿ ಪಂಚವಟೀ ತಟದಲ್ಲಿ ಧ್ಯಾನಕ್ಕೆ ಅಣಿಯಾಗಿ, ಸುಮ್ಮನೆ ಮಲಗಲು ಇಲ್ಲಿಗೆ ಬಂದಿರುವಿರೋ? ಎಂದು ಪರಮಹಂಸರು ಶಿಷ್ಯರನ್ನು ಧ್ಯಾನದಲ್ಲಿ ಮುಳುಗುವಂತೆ ಪ್ರೇರೇಪಣೆ ನೀಡುತ್ತಿದ್ದರು. ರಾಮಕೃಷ್ಣರು ಕೆಲವೊಮ್ಮೆ ರಾತ್ರಿಯೆಲ್ಲಾ ಪಂಚವಟಿ ತಟದಲ್ಲಿ ಭಗವನ್ನಾಮ ಜಪದಲ್ಲಿ ಕಳೆಯುತ್ತಿದ್ದ ಸನ್ನಿವೇಶಗಳನ್ನು ಅವರ ಶಿಷ್ಯರು ತಮ್ಮ ಅನುಭವಗಳಲ್ಲಿ ಚಿತ್ರಿಸಿದ್ದಾರೆ.
ಇಲ್ಲಿ ಒಂದು ಉದಾಹರಣೆ ನೀಡಬಹುದು: ಪರಮಹಂಸರ ಭಕ್ತರಲ್ಲಿ ಗಿರೀಶ್ ಚಂದ್ರ ಘೊಷ್ ಒಬ್ಬ. ನಾಟಕಕಾರ, ನಿರ್ದೇಶಕ, ಕವಿ ಮತ್ತು ಸ್ವತಃ ಅಪ್ರತಿಮ ನಟ. ಅದೊಂದು ದಿನ ಪರಮಹಂಸರಲ್ಲಿ, ಭಗವನ್ನಾಮ ಜಪ ಸಾಧ್ಯವಾಗುತ್ತಿಲ್ಲ ಎನ್ನುತ್ತಾನೆ. ಪರಮಹಂಸರು, ‘ಹೋಗಲಿ ಬಿಡು, ಮುಂಜಾನೆ ಎದ್ದಾಗ ನಾಮ ಜಪ ಮಾಡು’ ಎನ್ನುತ್ತಾರೆ. ಗಿರೀಶ್, ‘ಇಲ್ಲ, ಅದು ಸಾಧ್ಯವಿಲ್ಲ, ನಾನೆಲ್ಲಿರುತ್ತೇನೋ ಗೊತ್ತಿಲ್ಲ!’ ಎಂದ. ಹಾಗಾದರೆ, ರಾತ್ರಿ ಮಲಗುವ ಮುನ್ನ, ಎಂದಾಗ ಅದೂ ಅಸಾಧ್ಯ! ಕಾರಣ, ನಾಟಕದ ಕಂಪನಿಯನ್ನು ನಡೆಸುವ ನನಗೆ ನಿರ್ದಿಷ್ಟ ಸಮಯವಿರುವುದಿಲ್ಲ ಎಂದು ದೀನನಾಗಿ ಮೊರೆ ಹೋಗುತ್ತಾನೆ. ಆಗ ರಾಮಕೃಷ್ಣರು, ‘ಸರಿ ಹಾಗಾದರೆ ನಿನ್ನ ಪೂರ್ಣ ಜವಾಬ್ದಾರಿಯನ್ನು ನನಗೆ ನೀಡು’ ಎಂದಾಗ ಗಿರೀಶ್ ಒಪ್ಪುತ್ತಾನೆ. ಈ ಮಾತಿಗೆ ಗಿರೀಶ್ ಚಂದ್ರ ಶಿರಸಾಷ್ಟಾಂಗ ನಮನ ಸಲ್ಲಿಸಿ ಹೊರಟುಹೋಗುತ್ತಾನೆ. ಇತ್ತ ಪರಮಹಂಸರೇ ತನ್ನ ಶ್ರದ್ಧಾವಂತ ಶಿಷ್ಯನ ಪರವಾಗಿ ನಾಮ ಜಪ ಮಾಡುವಾಗ ಆ ಅದ್ಭುತ ಅಧ್ಯಾತ್ಮ ಶಕ್ತಿ ಗಿರೀಶ ಚಂದ್ರನನ್ನು ಸಂಪೂರ್ಣ ಆನಂದಮಯ ಸ್ಥಿತಿಯಲ್ಲಿರಿಸುತ್ತದೆ. ಈ ಸ್ಥಿತಿಯನ್ನು ಕಂಡ ನಾಟಕದ ಕಂಪನಿಯಲ್ಲಿರುವರೆಲ್ಲಾ, ಕೇವಲ ಭಗವದಾನಂದದಿಂದ ಉನ್ಮತ್ತನಾಗಿದ್ದಾರೆ ನಮ್ಮ ಸಾಹುಕಾರರು, ಮುಂದೇನು? ಎನ್ನುವ ಸ್ಥಿತಿಯಲ್ಲಿ ಪರಮಹಂಸರ ಬಳಿ ಬಂದು ತಿಳಿಸುತ್ತಾರೆ. ಆಗ ರಾಮಕೃಷ್ಣರು, ಗಿರೀಶ್ ಚಂದ್ರನ ಆಧ್ಯಾತ್ಮಿಕ ಒಳಿತಿಗಾಗಿ ತಾನೇ ಅವನ ಸಂಪೂರ್ಣ ಜವಾಬ್ದಾರಿ, ಅಧಿಕಾರ ಪಡೆದಿದ್ದೆ ಎಂದು ವಿವರಿಸಿ ನಂತರ ಗಿರೀಶ್ ಚಂದ್ರನ ನಿತ್ಯ ಕಾರ್ಯಗಳಿಗೆ ಧಕ್ಕೆ ಬರದಂತೆ ವ್ಯವಸ್ಥೆ ಮಾಡುತ್ತಾರೆ. ಇದೇ ನಿಜವಾದ ಗುರುವಿನ ಶಕ್ತಿ, ಶಿಷ್ಯನನ್ನು ಗುರಿಯತ್ತ ಕರೆದುಕೊಂಡು ಹೋಗುವ ಪರಿ.