ನ್ಯೂಸ್

ಅಕ್ಕನನ್ನು ಕಲ್ಯಾಣದ ದಾರಿಗೆ ಎಳೆತಂದಿದ್ದು ಗುರುಪ್ರಕಾಶವೇ

ಅಲ್ಲಮನ ಆಧ್ಯಾತ್ಮಿಕ ಯಾನದಲ್ಲಿ ಇಬ್ಬರು ಶಿವಶರಣೆಯರು ಎದುರಾಗುತ್ತಾರೆ. ಒಬ್ಬಾಕೆ ಮುಕ್ತಾಯಕ್ಕ; ಮತ್ತೊಬ್ಬಾಕೆ ಅಕ್ಕಮಹಾದೇವಿ. ಮುಕ್ತಾಯಕ್ಕ ಮತ್ತು ಅಲ್ಲಮರ ಸಂವಾದ ಬಲು ವಿಶಿಷ್ಟವಾದುದು. ಕಾಯದ ಕತ್ತಲೆಯ ನಿರ್ಗಮನವನ್ನು ಮುಕ್ತಾಯಕ್ಕ ಪ್ರತಿನಿಧಿಸಿದರೆ; ಕಾಯದ ಸಮಸ್ತ ಹಂಗನ್ನು ತೊರೆದು ಧೀರಶರಣೆಯಾಗಿ ಅಕ್ಕಮಹಾ ದೇವಿ ನಮಗೆ ಕಾಣುತ್ತಾಳೆ. ಮುಕ್ತಾಯಕ್ಕ ಅಣ್ಣ ಅಜಗಣ್ಣನನ್ನು ಕಳೆದುಕೊಂಡು ತಪಿಸುತ್ತಿದ್ದರೆ. ಅಕ್ಕಮಹಾದೇವಿ ಶಿವನನ್ನೇ ಮನೋಧಾರಣೆ ಮಾಡಿಕೊಂಡು ಅನಂತಕಾಲ ತಪಿಸುವುದನ್ನು ನಾವು ಕಾಣುತ್ತೇವೆ. ಆಕೆಯದು ತಾತ್ತ್ವಿಕ ಅನುಭೂತಿಯಾದರೆ; ಈಕೆಯದು ದೇಹಸಂಗ ತೊರೆದು ಲಿಂಗಸಂಗದ ಭೂಮಾನುಭೂತಿಯಲ್ಲಿ ಕಂಡರಿಸಿಕೊಳ್ಳುವ ಪರಿ! ಅಲ್ಲಮನು ಇವರಿಬ್ಬರನ್ನು ಎದುರಿಸುವುದು ಅವರವರ ಬದುಕಿನ ಕ್ರಮಗಳನ್ನು ಕಂಡರಿಸುವುದರಲ್ಲಿಯೇ.

ಮುಕ್ತಾಯಕ್ಕ ಅಜಗಣ್ಣನನ್ನು ಕಳೆದುಕೊಂಡಿದ್ದಾಳೆ. ಆಕೆಗೆ ಸಾವಿನಸ್ವರೂಪದ ಚಿಂತೆ. ದೇಹದಿಂದ ಪ್ರಾಣಗತವಾಗುವ ಕ್ರಮದ ಪ್ರಶ್ನೆಗಳು ಮುಕ್ತಾಯಕ್ಕನನ್ನು ಬಲುವಾಗಿ ಕಾಡಿವೆ. ಅಲ್ಲಮನ ಪೂರ್ವಾರ್ಧ ಬದುಕಿನಲ್ಲಿ ಒಬ್ಬ ಶರಣೆಯನ್ನು ಅಚಾನಕ್ಕಾಗಿ ಸಂಧಿಸುವ ಚಿತ್ರಣ ನಮಗಿಲ್ಲಿ ಕಾಣುತ್ತದೆ. ಮುಕ್ತಾಯಕ್ಕ ಕೇಳುವ ಪ್ರಶ್ನೆಗಳಿಗೆ ಅಲ್ಲಮನು ಉತ್ತರಕೊಡುವುದರಲ್ಲಿ ತಡಬಡಿಸುತ್ತಾನೆ. ಆಕೆಯ ಅಂತರಂಗದ ಪ್ರಶ್ನೆಗಳಲ್ಲಿ ಬಹಿರಂಗದ ಉಪದ್ವ್ಯಾಪಗಳು ಅಡಕಗೊಂಡಿವೆ. ಸಾಧನೆಯ ಹಾದಿಯಲ್ಲಿರುವ ಮುಕ್ತಾಯಕ್ಕೆ ಭೌತಿಕ ಚಹರೆಗಳನ್ನು ಹುಡುಕುತ್ತಿದ್ದಾಳೆ. ಆಗ ಅಲ್ಲಮನು ಭೌತಿಕ ಸಂಕಲೆಗಳನ್ನು ಕಡಿದು ಶಿವಯೋಗದ ದಾರಿಯನ್ನು ತೋರಿಸಿಕೊಡುತ್ತಾನೆ. ಆದರೆ, ಮುಕ್ತಾಯಕ್ಕನ ಪ್ರಾಶ್ನಿಕ ಮನೋಧರ್ಮ ಮಾತ್ರ ತುಂಬಾ ಸಂಕೀರ್ಣವಾದುದು. ಅಕ್ಕನ ವಿಷಯದಲ್ಲಿ ಇವನ್ನೆಲ್ಲಾ ನಾವು ಕಾಣಲಾರೆವು.

ಅಕ್ಕಮಹಾದೇವಿ ಭೌತಿಕಸ್ಥಿತಿಯ ಆವರಣ ವನ್ನು ಕಳಚಿಕೊಂಡು ಶಿವದಿಗಂಬರೆಯಾಗಿ ನಿಂತಿದ್ದಾಳಷ್ಟೆ. ದೇಹಮೋಹವೆಲ್ಲವೂ ಆಕೆ ಯಲ್ಲಿ ಕರಗಿಹೋಗಿದೆ. ತನುವಿನ ಮೋಹವನ್ನು ಆಕೆ ಕಡಿದುಕೊಂಡಿದ್ದಾಳೆ. ಈಕೆ ಉಡುತಡಿಯಿಂದ ಬಸವಣ್ಣನಿರುವ ಕಲ್ಯಾಣಕ್ಕೆ ಬರುತ್ತಿದ್ದಾಳೆ. ಅವಳ ವಚನವೊಂದರಲ್ಲಿ ಕಲ್ಯಾಣದ ಆಧ್ಯಾತ್ಮಿಕ ಪರಿವೇಶ ನಮಗೆ ಎದ್ದು ಕಾಣುತ್ತದೆ. ಕಲ್ಯಾಣದ ಅಭೌತಿಕರೂಪ ಅಕ್ಕನ ಅನುಭವಕ್ಕೆ ಈ ರೀತಿ ಬಂದಿದೆ:

ಕಲ್ಯಾಣವೆಂಬುದನ್ನಾರಿಗೂ ಹೊಗಬಾರದು ಅಸಾಧ್ಯವಯ್ಯಾ, ಆಸೆ-ಆಮಿಷವನಳಿದಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು, ಒಳಗು-ಹೊರಗು ಶುದ್ಧವಾದಂಗಲ್ಲದೆ ಕಲ್ಯಾಣವ ಹೊಗಬಾರದು, ನೀನೆಂಬುದನರಿದು ನಾನೆಂಬುದ ಮರೆದು ತಾನು ತಾನಾದಂಗಲ್ಲದೆ, ಕಲ್ಯಾಣವ ಹೊಕ್ಕು ಬೆರಸಬಾರದು, ಲಜ್ಜೆಗೆಟ್ಟೆನಲಾ ಸತಿಬೇಟಕ್ಕೊಲಿದು, ನಾನಾವುದನು ಅರಿಯೆನಾಗಿ ಚೆನ್ನಮಲ್ಲಿಕಾರ್ಜುನನ,ಧರ್ಮದಿಂದ ನಾನು ಕಲ್ಯಾಣವ ಕಂಡೆನು.

ನಾವು ಭೌತಿಕಸ್ವರೂಪದ ಕಲ್ಯಾಣದ ಬಗೆಗೆ ಮಾತನಾಡುತ್ತಿರುವಾಗ, ಅಕ್ಕನಿಗೆ ಭೌತಿಕರೂಪದ ಕಲ್ಯಾಣಕ್ಕಿಂತ ‘ಆತ್ಮಕಲ್ಯಾಣ’ವೇ ಆಕೆಗೆ ಕಾಣುತ್ತದೆ. ಅಕ್ಕನು ನೂರಾರು ಗಾವುದ ದಾರಿಯನ್ನು ಸವೆಸಿದ್ದಾಳೆ. ಅವಳು ನಿಂತನೆಲೆಯಲ್ಲಿ ಅಸಂಖ್ಯಾತ ಶಿವಶರಣೆಯರು ಕಲ್ಯಾಣದಲ್ಲಿ ನೆರೆದಿರುವುದನ್ನು ಕೇಳಿದ್ದಾಳೆ. ತನ್ನ ಮುಂದಿನ ದಾರಿ ಯಾವುದೆಂಬುದನ್ನು ಅವಳು ಕಂಡುಕೊಂಡಿದ್ದಾಳೆ. ತನ್ನಲ್ಲಿ ಉಂಟಾಗಿರುವ ಪ್ರಶ್ನೆಗಳಿಗೆ ಉತ್ತರ ಸಿಗುವುದು ಅಲ್ಲಿ ಮಾತ್ರ ಎಂದು ನಿಶ್ಚಯಿಸಿಕೊಂಡಿದ್ದಾಳೆ. ಕಲ್ಯಾಣವನ್ನು ಕುರಿತ ಅಕ್ಕನ ಈ ವಚನದ ಹಿಂದಿರುವ ಅಧ್ಯಾತ್ಮದ ಭಾವಕೋಶವನ್ನು ನಾವು ಮರೆಯುವಂತಿಲ್ಲ!

ಕಲ್ಯಾಣದಲ್ಲಿರುವ ಶರಣರು ಅಲ್ಲಮನು ತೋರಿಸಿದ ಮಾರ್ಗದಲ್ಲಿ ನಡೆದು ಶಿವಯೋಗದಲ್ಲಿಯೇ ತತ್ಪರರಾಗಿದ್ದಾರೆ. ಅಲ್ಲಮನು ಇಷ್ಟಲಿಂಗದ ನೆಲೆಯನ್ನು ತೋರಿಸಿದ್ದು ಶರಣರಲ್ಲಿ ಭಕ್ತು್ಯತ್ಸಾಹ ತುಂಬಿ ತುಳುಕಿದಂತಾಗಿದೆ. ಅವರೆಲ್ಲರ ಮನಸ್ಸು ತೃಪ್ತಿಯನ್ನು ಹೊಂದಿದೆ. ಶಿವಾನುಭವಗೋಷ್ಠಿಯ ಮಾತುಕತೆಗಳಿಂದ ವಿಷಯವಾಸನೆಗಳು ಇಲ್ಲವಾಗಿವೆ! ಇಂಥ ಕಲ್ಯಾಣಕ್ಕೆ ಅಕ್ಕ ಬರಬೇಕಷ್ಟೆ? ಆಕೆಗೆ ದಾರಿ ತೋರಿಸುವ ಗುರುವೊಬ್ಬ ಬೇಕು. ಅಕ್ಕ ಅದಕ್ಕಾಗಿ ತೊಳಲಾಡುತ್ತಿದ್ದಾಳೆ. ಚಾಮರಸನು ಅಕ್ಕಮಹಾದೇವಿಯ ತೊಳಲಾಟವನ್ನು ಪ್ರತಿಮಿಸಿರುವ ರೀತಿಯಿದು. ಗುರುವನರಸುವೆನೆಂದು ತಿರ್ರನೆ/ ತಿರುಗಿದಳು ಗಿರಿಗಹ್ವರಂಗಳ/ಗುರುವನರಸುವೆನೆಂದು ತೊಟ್ಟನೆ ತೊಳಲಿದಳು ಧೂೆಯ/ ಗುರುವನರಸುವೆನೆಂದು ಕಾಯವ/ಕರಗುತಿರ್ದಳು ಕಾತರಿಸಿ ಸದ್/ಗುರುವನರಸುವ ವೇಧೆಯಲಿ ಮೆರೆದಳು ಮಹಾದೇವಿ (ಅ.ಲೀಲೆ-17-02).

ಮಹಾದೇವಿಯು ಗುರುವನ್ನು ಹುಡುಕುವೆನೆಂದು ಪರ್ವತ ಹಾಗೂ ಕಾಡುಗಳ ಸುತ್ತಮುತ್ತ ತಿರುಗಿದಳು. ಬೇಗಬೇಗನೆ ಭೂಮಿಯಲ್ಲೆಲ್ಲಾ ಕಡೆ ಸುತ್ತುತ್ತಿದ್ದಳು. ದೇಹವನ್ನು ಸವೆಸುತ್ತಿದ್ದಳು. ಆಕೆ ಸದ್ಗುರುವನ್ನು ಹುಡುಕುವ ದಾರಿಯನ್ನೂ ಗುರಿಯನ್ನೂ ಕಾಣುತ್ತ ಶೋಭಿಸುತ್ತಿದ್ದಳು. ಅಧ್ಯಾತ್ಮಸಾಧಕರೆಲ್ಲರೂ ಗುರುವನ್ನು ಹುಡುಕುತ್ತಿರುತ್ತಾರೆ. ಗುರುವಿನ ಅನುಗ್ರಹವಿಲ್ಲದೆ ಅವರು ಮುಂದುವರಿಯಲಾರರು. ಗುರುತೋರಿದ ದಾರಿಯಲ್ಲಿ ಶಿಷ್ಯನು ನಡೆಯಬೇಕಷ್ಟೆ. ಇದು ಅಕ್ಕಮಹಾದೇವಿಯ ಇಚ್ಛೆಯಾಗಿತ್ತು. ಅಕ್ಕನನ್ನು ಕಲ್ಯಾಣದ ದಾರಿಗೆ ಎಳೆತಂದಿದ್ದು ಗುರುಪ್ರಕಾಶವೇ. ಆಕೆಯು ಬರೆದಿರುವ ಕಲ್ಯಾಣಕುರಿತ ವಚನ- ಅಕ್ಕನ ಆಧ್ಯಾತ್ಮಿಕ ಯಾತ್ರೆಯಲ್ಲಿ ಪ್ರಮುಖಘಟ್ಟವೆಂದು ಮನಗಂಡರೆ, ಇದು ಪರೋಕ್ಷವಾಗಿ ಆಕೆಯ ಅಂತರಂಗದ ಯಾತೆ್ರಯೇ ಆಗುತ್ತದೆ!