ಶಿವಮೊಗ್ಗ: ಗಾಜನೂರು ನವೋದಯ ವಿದ್ಯಾಲಯದಲ್ಲಿ ಡಿ.22ರಂದು ಬೆಳಗ್ಗೆ 10ಕ್ಕೆ ಹಳೇ ವಿದ್ಯಾರ್ಥಿಗಳ ಸಂಘದಿಂದ 14ನೇ ಬ್ಯಾಚ್ (1999-2006) ವಿದ್ಯಾರ್ಥಿಗಳ ರಜತ ಮಹೋತ್ಸವದ ಅಂಗವಾಗಿ ಗುರುವಂದನೆ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ತಾರಾನಾಥ್ ಹೇಳಿದರು.
ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಗಾಜನೂರು ನವೋದಯ ವಿದ್ಯಾಲಯದ ಸಂಸ್ಥಾಪಕ ಪ್ರಾಚಾರ್ಯ ಎಚ್.ಎನ್.ಎಸ್.ರಾವ್, ಆಯುಕ್ತರಾದ ಎ.ಎನ್.ರಾಮಚಂದ್ರ, ಎಸ್.ವಿ.ಶೇಷಾದ್ರಿ, ಸಾಯಿ ರಂಗರಾವ್, ಎ.ವೈ.ರೆಡ್ಡಿ ಭಾಗವಹಿಸುವರು. ನವೋದಯ ಶಾಲೆ ಪ್ರಾಚಾರ್ಯ ಜಾನ್ಸನ್ ಪಿ. ಜೇಮ್ಸ್ ಅಧ್ಯಕ್ಷತೆ ವಹಿಸುವರು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಹಳೇ ವಿದ್ಯಾರ್ಥಿಗಳು, ಪಾಲಕರು, ಶಾಲೆ ವಿದ್ಯಾರ್ಥಿಗಳು ಸೇರಿ 1,000ಕ್ಕೂ ಹೆಚ್ಚು ಜನ ಭಾಗವಹಿಸುವರು. ಗಾಜನೂರು ನವೋದಯ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕರು ದೇಶದ ವಿವಿಧ ರಾಜ್ಯಗಳಿಂದ ಆಗಮಿಸುವರು. ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು, ಬೋಧಕೇತರ ಸಿಬ್ಬಂದಿಯನ್ನು ಸನ್ಮಾನಿಸಲಾಗುವುದು. ಸಾಧಕರು ಹಾಗೂ ಸಮಾಜ ಸೇವಕರನ್ನು ಗುರುತಿಸಿ ನವೋದಯ ಭೂಷಣ ಹಾಗೂ ನವೋದಯ ರತ್ನ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದರು.
ಡಾ. ವಾದಿರಾಜ್ ಕುಲಕರ್ಣಿ, 14ನೇ ಬ್ಯಾಚ್‌ನ ವಿದ್ಯಾರ್ಥಿಗಳಾದ ಕಾರ್ತಿಕ್, ಪಿ.ಟಿ.ಪವನ್‌ಕುಮಾರ್ ಹಾಗೂ ಡಾ. ಚೇತನ್ ನವಿಲೇಹಾಳ್, ಯುವರಾಜ್, ಉಮಾಕಾಂತ್ ಸುದ್ದಿಗೋಷ್ಠಿಯಲ್ಲಿದ್ದರು.