ಶಿರಾಳಕೊಪ್ಪ: ತಮ್ಮ ಪಟ್ಟಾಧಿಕಾರದ ದಶಮಾನೋತ್ಸವದ ಅಂಗವಾಗಿ ವೀರಶೈವ ಧರ್ಮದ 36 ತತ್ವಗಳ ಪ್ರತೀಕವಾಗಿ 24 ಕಂಬಗಳ ಶಿಲಾಮಂಟಪದ ಮೇಲೆ 36 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಮೂರ್ತಿಯನ್ನು ನಿರ್ಮಿಸಿ ಲೋಕಾರ್ಪಣೆ ಮಾಡಲಾಗಿದೆ ಎಂದು ದುಗ್ಗಿ-ಕಡೇನಂದಿಹಳ್ಳಿ ಕ್ಷೇತ್ರದ ಶ್ರೀ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಧಾರ್ಮಿಕ ಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ತಿಕ ದೀಪೋತ್ಸವ ಹಾಗೂ ಶ್ರೀ ಜಗದ್ಗುರು ರೇಣುಕಾಚಾರ್ಯ ಹರಕೆ ರಥೋತ್ಸವದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
2024ರ ಮಾಘ ಮಾಸ ಶುಕ್ಲಪಕ್ಷದ ದ್ವಿತೀಯ ತಿಥಿಯಂದು ಮೂರ್ತಿ ಲೋಕಾರ್ಪಣೆಯಾದ ಸ್ಮರಣಾರ್ಥ ಪ್ರತಿವರ್ಷ ಅದೇ ಮುಹೂರ್ತದಲ್ಲಿ ಶ್ರೀ ಮಠದಲ್ಲಿ ಗುರುಪರಂಪರೆಯ ಜಾತ್ರೋತ್ಸವ ಹಾಗೂ ಧರ್ಮಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ. 2027ರ ಫೆ.7 ಮತ್ತು 8ರಂದು ಹಮ್ಮಿಕೊಳ್ಳಲಾಗಿದೆ ಎಂದರು.
ಲೋಕಕಲ್ಯಾಣ ಹಾಗೂ ಧರ್ಮಜಾಗೃತಿಗಾಗಿ ಸೇವೆ ಸಲ್ಲಿಸಿದ ಸಾಧಕರು, ಸೇವಾಕರ್ತರು ಮತ್ತು ಗಣ್ಯರನ್ನು ಗುರುತಿಸಿ ಪ್ರತಿವರ್ಷ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು ತಾಮ್ರಪತ್ರ, ರೇಷ್ಮೆ ಮಡಿ, ಪೇಟ ಹಾಗೂ 36 ಸಾವಿರ ರೂ. ಗೌರವಧನ ಒಳಗೊಂಡಿರುತ್ತದೆ ಎಂದರು.
2026ರ ಮೂರನೇ ವರ್ಷದ ಪ್ರಶಸ್ತಿಯನ್ನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದ ಹಿನ್ನೆಲೆಯ, ಮಠದ ಅಭಿವೃದ್ಧಿ ಕಾರ್ಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಈಸೂರು ಗ್ರಾಮದ ಬಸವಾರಾಧ್ಯ ಸಾಹುಕಾರ್ ಅವರಿಗೆ ಮತ್ತು 2027ರ ಪ್ರಶಸ್ತಿಯನ್ನು ಶಿಕಾರಿಪುರದ ವೇ. ಪಟ್ಟದಸ್ವಾಮಿ ಅವರಿಗೆ ನೀಡಿ ಗೌರವಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಶ್ರೀ ಕ್ಷೇತ್ರಕ್ಕೆ ಮೊದಲ ಬಾರಿಗೆ ಭೇಟಿ ನೀಡಿ ದರ್ಶನ ಪಡೆದಿರುವುದು ತುಂಬ ಸಂತೋಷ ತಂದಿದೆ. ಕ್ಷೇತ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳು, ಪೂಜ್ಯರ ಅನುಷ್ಠಾನ, ಧಾರ್ಮಿಕ ಕಾರ್ಯಕ್ರಮ ಹಾಗೂ ಸಮಾಜಮುಖಿ ಚಿಂತನೆಗಳನ್ನು ಕಂಡು ಹರ್ಷವಾಗಿದೆ.
ಹೊನ್ನಾಳಿ ತಹಸೀಲ್ದಾರ್ ಎಂ.ಪಿ.ಕವಿರಾಜ್ ಅವರು ಕೋಟೆ ನಿರ್ಮಾಣದ ಮಾಹಿತಿ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಹಾವೇರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಕಾಶ್ ಇತರರಿದ್ದರು.