ಸೊರಬ: ಕುಟೀರ ಎಂಬುದು ಸನಾತನ ಪರಂಪರೆಯ ಧ್ಯೋತಕವಾಗಿದ್ದು ಆತ್ಮ ಸಾಧನೆಯ ಜತೆಗೆ ಆತ್ಮಜ್ಞಾನದ ಪ್ರಸರಣದ ಕೇಂದ್ರವಾಗಿದೆ ಎಂದು ಮೂರು ಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ತಾಲೂಕಿನ ಜಡೆ ಹೋಬಳಿಯ ಬಂಕಸಾಣದ ಹೊಳೆಲಿಂಗೇಶ್ವರ ಕ್ಷೇತ್ರದ ಪುಣ್ಯ ಸಂಗಮ ಸ್ಥಳದ ಉತ್ತರವಾಹಿನಿಯಲ್ಲಿ ಶ್ರೀ ಸದ್ಗುರು ಸೇವಾ ಟ್ರಸ್ಟ್‌ಯಿಂದ ನಿರ್ಮಿಸಿದ ಸಮಾಧಾನ ಗುರು ಕುಟೀರ ಗುರುಪ್ರವೇಶ ಸಮಾರಂಭ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಸಮಾಧಾನ ಗುರುಕುಟೀರದ ಶ್ರೀ ಅಮರದೇವರು ಮಾತನಾಡಿ, ಗುರು ಕುಟೀರವು ಕೇವಲ ಭೌತಿಕವಾಗಿ ಕಲ್ಲು ಕಾಂಕ್ರಿಟ್‌ಗಳಿಂದಾದ ರಚನೆಯಲ್ಲ. ಇದೊಂದು ಭಾವನಾತ್ಮಕವಾದ ಮನಸ್ಥಿತಿ ಎಂದು ಹೇಳಿದರು.
ಸಮಾಧಾನದ ಮುಖ್ಯ ರೂವಾರಿ ಮೌನ ತಪಸ್ವಿ ಜಗದ್ಗುರು ಜಡೆಯ ಶಾಂತಲಿಂಗ ಶಿವಯೋಗಿಗಳು ಸಾನಿಧ್ಯ ವಹಿಸಿದ್ದರು. ವಿಧಾನಪರಿಷತ್ ಸದಸ್ಯೆ ಭಾರತಿ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಮೂಡಿಮಠದ ಶ್ರೀ ಸದಾಶಿವ ಸ್ವಾಮೀಜಿ, ತೊಗರ್ಸಿ ಪಂಚವಣ್ಣಿಗೆ ಮಠದ ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮೀಜಿ, ಜಡೆ ಸಂಸ್ಥಾನ ಮಠದ ಡಾ. ಮಹಾಂತ ಮಹಾ ಸ್ವಾಮೀಜಿ ಮಾತನಾಡಿದರು.
ತೊಗರ್ಸಿ ಮಳೆಮಠದ ಶ್ರೀ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ಲಕ್ಕವಳ್ಳಿ ಜೈನ ಮಠದ ಸ್ವಸ್ತಿಶ್ರೀ ವೃಷಭಸೇನ ಭಟ್ಟಾರಕ ಸ್ವಾಮೀಜಿ, ಗುಡುಗಿನಕೊಪ್ಪದ ಲಿಂಗಪ್ಪ ಶರಣರು ಸಮ್ಮುಖ ವಹಿಸಿದ್ದರು. ಗೊಗ್ಗೇಹಳ್ಳಿ ಪಂಚಮಠ ಸಂಸ್ಥಾನದ ಶ್ರೀ ಸಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಬಸವರಾಜ ಭಾರಂಗಿ, ವೀರೇಶ ಗೌಡ್ರು, ಎಚ್.ಮಲ್ಲಿಕಾರ್ಜುನಪ್ಪ, ರಾಜುಗೌಡ್ರು, ಬಾಸೂರು ಗುರುಪ್ರಸನ್ನ ಗೌಡ್ರು, ಅಂಡಿಗೆ ಅಶೋಕ ನಾಯಕ, ಶಿವಲಿಂಗೇಗೌಡ್ರು, ಸುಧಾ ಶಿವಪ್ರಸಾದ, ಪ್ರಕಾಶ ತಲಕಾಲುಕೊಪ್ಪ ಇತರರಿದ್ದರು. ಸಂಸದ ಬಿ.ವೈ. ರಾಘವೇಂದ್ರ ಅವರ ಪತ್ನಿ ಬಿ.ಆರ್. ತೇಜಸ್ವಿನಿ ಹಾಗೂ ಅವರ ಪುತ್ರರಿಂದ ಜಂಗಮ ಮಹಾಪೂಜೆ ನೆರವೇರಿತು.