ಮೃತ ಹಲೈನಾ ಹಚ್ಚಿನ್ಸ್​ ಮತ್ತು ನಟ ಅಲೆಕ್​ ಬಾಲ್ಡ್​ವಿನ್ 
ನ್ಯೂಸ್

ಸಿನಿಮಾ ಶೂಟಿಂಗ್​ ವೇಳೆ ಶೂಟಾಯ್ತು ನಿಜವಾದ ಗುಂಡು! ಮುಂದಾದದ್ದು ದುರಂತ

ನ್ಯೂ ಮೆಕ್ಸಿಕೋ: ಸಿನಿಮಾ ಶೂಟಿಂಗ್​ ವೇಳೆ ಹಾಲಿವುಡ್​ ನಟ ಅಲೆಕ್​ ಬಾಲ್ಡ್​ವಿನ್​ ಹಾರಿಸಿದ ಗುಂಡಿಗೆ ಸಿನಿಮಾಟೋಗ್ರಾಫರ್​ ಹಲೈನಾ ಹಚ್ಚಿನ್ಸ್​ ಬಲಿಯಾಗಿದ್ದಾರೆ. ಅವರ ಹೊಸ ಸಿನಿಮಾದ ಚಿತ್ರೀಕರಣದ ವೇಳೆ ಗುರುವಾರ ನ್ಯೂ ಮೆಕ್ಸಿಕೋದ ಸಾಂತ ಫೆನಲ್ಲಿ ಸಂಭವಿಸಿದ ಈ ದುರ್ಘಟನೆಯ ಬಗ್ಗೆ ಇದೀಗ ಹಲವು ಮಾಹಿತಿಗಳು ಹೊರಬಿದ್ದಿವೆ.

'ರಸ್ಟ್' ಚಿತ್ರದ ಶೂಟಿಂಗ್​ ಸಮಯದಲ್ಲಿ ಹಾನ್ನಾ ಗುಟೈರ್ರೆಜ್​ ಎಂಬುವರು ಚಿತ್ರಕ್ಕೆ ಶಸ್ತ್ರಾಸ್ತ್ರಗಳ ಸಹಾಯ ಒದಗಿಸಿದ್ದರು. ಅಸ್ತ್ರಗಳನ್ನಿರಿಸಿದ್ದ ಕಾರ್ಟ್​ನಿಂದ ಒಂದು ಗನ್​ ತೆಗೆದು ಗನ್ನಿನಲ್ಲಿ ಲೈವ್​ ಬುಲೆಟ್ಸ್​ನ ರೌಂಡ್ ಇರುವ ಬಗ್ಗೆ ಅರಿವಿಲ್ಲದೆ ಸಹಾಯಕ ನಿರ್ದೇಶಕ ಡೇವ್​ ಹಾಲ್ಸ್​, ನಟ ಬಾಲ್ಡ್​ವಿನ್​ ಕೈಗೆ ನೀಡಿದ್ದರು. ಅದರಿಂದ ಶೂಟ್ ಮಾಡಲ್ಪಟ್ಟ ಗುಂಡಿನಿಂದ ಕ್ಯಾಮೆರಾ ಹಿಡಿದಿದ್ದ ಹಚ್ಚಿನ್ಸ್​ ಮೃತಪಟ್ಟರೆ, ನಿರ್ದೇಶಕ ಜೋಯೆಲ್​ ಸೌಜಾಗೂ ಗಾಯಗಳುಂಟಾದವು ಎಂದು ಪೊಲೀಸರ ಪ್ರಾಥಮಿಕ ವರದಿ ತಿಳಿಸಿದೆ.

ಚಿತ್ರೀಕರಣ ನಡೆಯುತ್ತಿದ್ದ ರಾಂಚ್​ನಲ್ಲಿ ಘಟನೆಗೆ ಸಂಬಂಧಿಸಿದ ವಿಡಿಯೋ ಫೂಟೇಜ್​ಗಳನ್ನು ಪಡೆಯಲು ಮತ್ತು ರಕ್ತದ ಕಲೆಗಳಿಂದ ಕೂಡಿದ ನಟ ಬಾಲ್ಡ್​ವಿನ್​ರ ಬಟ್ಟೆ ಮತ್ತು ಇತರ ಪ್ರಾಪ್​ ಗನ್​ಗಳನ್ನು ಪರಿಶೀಲಿಸಲು ಪೊಲೀಸ್​ ಅಧಿಕಾರಿಗಳು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಸಾಂತ ಫೆನ ಕೌಂಟಿ ಶರೀಫ್​ ಕಛೇರಿಗೆ ನಗರದ ನ್ಯಾಯಾಲಯ ಶುಕ್ರವಾರದಂದು ಸರ್ಚ್​ ವಾರೆಂಟ್​ ನೀಡಿದೆ. ಹೆಚ್ಚಿನ ವಿವರಗಳು ಸದ್ಯದಲ್ಲೇ ಹೊರಬೀಳಲಿವೆ ಎಂದು ವರದಿಗಳು ತಿಳಿಸಿವೆ. (ಏಜೆನ್ಸೀಸ್)