ನ್ಯೂಸ್

ಗನ್​ಮ್ಯಾನ್​ಗೆ ಕರೊನಾ: ಬಿಜೆಪಿ ಶಾಸಕ, ಇಡೀ ಕುಟುಂಬ ಕ್ವಾರಂಟೈನ್​

ಹೈದರಾಬಾದ್: ಗನ್​ಮ್ಯಾನ್​ಗೆ ಕರೊನಾ ವೈರಸ್​ ತಗುಲಿರುವ ಹಿನ್ನೆಲೆಯಲ್ಲಿ ಆಂಧ್ರಪ್ರದೇಶದ ಬಿಜೆಪಿ ಶಾಸಕ ರಾಜ ಸಿಂಗ್ ಹೋಂ ಕ್ವಾರಂಟೈನ್​ನಲ್ಲಿದ್ದಾರೆ. ಇವರ ಗನ್​ಮ್ಯಾನ್​ಗೆ ಸೋಂಕು ತಗುಲಿರುವುದು ನಿನ್ನೆ ತಿಳಿಯುತ್ತಿದ್ದಂತೆಯೇ ಅವರ ಜತೆಗೇ ಹೆಚ್ಚು ಇದ್ದ ಹಿನ್ನೆಲೆಯಲ್ಲಿ ಖುದ್ದಾಗಿ ಕ್ವಾರಂಟೈನ್​ಗೆ ಒಳಗಾಗಿದ್ದಾರೆ. ಇವರ ಜತೆಗೆ ಕುಟುಂಬದವರೂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.

ಮುನ್ನೆಚ್ಚರಿಕೆಯಿಂದ ಸಂಪರ್ಕಕ್ಕೆ ಬಂದವರೆಲ್ಲರನ್ನು ಕ್ವಾರಂಟೈನ್ ಗೆ ಒಳಗಾಗುತ್ತಿದ್ದೇವೆ ಎಂದು ಅವರು ಹೇಳಿಕೆ ನೀಡಿದ್ದಾರೆ. ಕ್ವಾರಂಟೈನ್​ನಲ್ಲಿದ್ದೇ ವ್ಯಾಯಾನ ಮಾಡುತ್ತಿರುವ ಶಾಸಕ, ಅದನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಅಪ್​ಲೋಡ್​ ಮಾಡಿದ್ದಾರೆ. ವ್ಯಾಯಾಮದಿಂದ ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆ ಎಂದಿರುವ ಶಾಸಕ, ಎಲ್ಲರೂ ಅದನ್ನು ಪಾಲಿಸುವಂತೆ ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಕಳೆದ ತಿಂಗಳು ತೆಲುಗುದೇಶಂ ಪಾರ್ಟಿಯ ಶಾಸಕರಾದ ಮುತಿರೆಡ್ಡಿ ಯಾದಗಿರಿ ರೆಡ್ಡಿ, ಬಾಜಿರೆಡ್ಡಿ ಗೊವರ್ಧನ್, ಗಣೇಶ್ ಗುಪ್ತ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಈ ಶಾಸಕರ ಕುಟುಂಬಸ್ಥರಿಗೂ ಸೋಂಕು ಹರಡಿತ್ತು. ಈ ಹಿನ್ನೆಲೆಯಲ್ಲಿ, ಅವರ ಸಂಪರ್ಕದಲ್ಲಿದ್ದ ರಾಜ್ಯ ಹಣಕಾಸು ಸಚಿವ ಟಿ. ಹರೀಶ್​ ರಾವ್​​ ಸಹ ಕ್ವಾರಂಟೈನ್ ಆಗಿದ್ದಾರೆ.

ಇಷ್ಟೇ ಅಲ್ಲದೇ, ಮಾಜಿ ಬಿಜೆಪಿ ಶಾಸಕ ಚಿಂತಲಾ ರಾಮಚಂದ್ರ ರೆಡ್ಡಿ ಅವರಿಗೂ ಕರೊನಾ ಸೋಂಕು ತಗುಲಿದ್ದು, ಇವರೂ ಸಂಪೂರ್ಣವಾಗಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ.

ತೆಲಂಗಾಣದಲ್ಲಿ ಒಟ್ಟು 7072 ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, 3506 ಮಂದಿ ಗುಣಮುಖರಾಗಿದ್ದಾರೆ. 203 ಮಂದಿ ಮೃತಪಟ್ಟಿದ್ದಾರೆ.