ನ್ಯೂಸ್

ಕೇಂದ್ರಡಾಳಿತ ಪ್ರದೇಶದಲ್ಲಿ ಗುಂಡಿನಚಕಮಕಿ; ಸೇನೆಗೆ ಸಿಕ್ಕಿಬಿದ್ದ ‘ಜೈಶ್-ಎ-ಮೊಹಮ್ಮದ್‌’ನ ಉಗ್ರರು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಉಧಮ್‌ಪುರದ ಬಸಂತ್‌ಗಢ ಪ್ರದೇಶದಲ್ಲಿ ಬುಧವಾರ (ಸೆಪ್ಟೆಂಬರ್ 11)ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ ನಡೆದಿದೆ. ದಾಳಿ ವೇಳೆ ಜೈಶ್-ಎ-ಮೊಹಮ್ಮದ್‌ನ ನಾಲ್ವರು ಭಯೋತ್ಪಾದಕರು ಶಸ್ತ್ರಾಸ್ತ್ರಗಳೊಂದಿಗೆ ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.

ನಿರ್ದಿಷ್ಟ ಗುಪ್ತಚರ ಆಧಾರದ ಮೇಲೆ ಕಥುವಾದಲ್ಲಿ ಜಂಟಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಕ್ಷಣಾ ವಕ್ತಾರರು ಮಾಹಿತಿ ನೀಡಿದ್ದಾರೆ. ಕಥುವಾ-ಬಸಂತಗಢ ಗಡಿಯಲ್ಲಿ ಭಯೋತ್ಪಾದಕರು ಸಂಪರ್ಕ ಸಾಧಿಸಿರುವುದು ಬಹಿರಂಗವಾಗಿದೆ ಎಂದು ಅವರು ತಿಳಿಸಿದರು. ಪೊಲೀಸರು ಪ್ರಸ್ತುತ ಪ್ರದೇಶವನ್ನು ಸುತ್ತುವರೆದ ಬಳಿಕ ಎರಡೂ ಕಡೆಯಿಂದ ಕೆಲವು ಸುತ್ತು ಗುಂಡುಗಳನ್ನು ಹಾರಿಸಲಾಗಿದೆ. ಜಮ್ಮುವಿನ ಅಖ್ನೂರ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಪಾಕಿಸ್ತಾನಿ ರೇಂಜರ್‌ಗಳು ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧ ಗಾಯಗೊಂಡ ಗಂಟೆಗಳ ನಂತರ ಎನ್‌ಕೌಂಟರ್ ನಡೆದಿದೆ. ಸದ್ಯ ಕದನ ವಿರಾಮ ಉಲ್ಲಂಘನೆಯ ನಂತರ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಥಳಿಯ ಮಾಧ್ಯಮ ವರದಿ ಮಾಡಿದೆ.

ಜೈಶ್-ಎ-ಮೊಹಮ್ಮದ್​​ ಸಂಘಟನೆಯನ್ನು ಪಾಕಿಸ್ತಾನದಲ್ಲಿ 2000 ಇಸವಿಯಲ್ಲಿ ಸ್ಥಾಪಿಸಲಾಯಿತು. ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುವ ಮತ್ತು ಭಾರತದಿಂದ ಕಾಶ್ಮೀರವನ್ನು ಬೇರ್ಪಡಿಸುವ ಉದ್ದೇಶದಿಂದ ಮೌಲಾನಾ ಮಸೂದ್ ಅಜರ್ ಈ ಸಂಘಟನೆಯನ್ನು ಸ್ಥಾಪಿಸಿದ್ದನು. ಈ ಸಂಘಟನೆಯು ಭಾರತೀಯ ಸೇನೆ ಮತ್ತು ಸಾಮಾನ್ಯ ಜನರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಈ ನಿಷೇಧಿತ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಸಂಘಟನೆಯಯು 2019ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ಅನೇಕ ಮಾರಣಾಂತಿಕ ದಾಳಿಗಳಿಗೆ ಕಾರಣವಾಗಿದೆ.

ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ 10 ವರ್ಷಗಳ ನಂತರ ಮೊದಲ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಮೂರು ಹಂತದ ಚುನಾವಣೆಗಳು ಸೆಪ್ಟೆಂಬರ್ 18 ರಂದು ಪ್ರಾರಂಭವಾಗಲಿದ್ದು, ಎರಡನೇ ಮತ್ತು ಮೂರನೇ ಹಂತದ ಚುನಾವಣೆಗಳು ಕ್ರಮವಾಗಿ ಸೆಪ್ಟೆಂಬರ್ 25 ಮತ್ತು ಅಕ್ಟೋಬರ್ 1 ರಂದು ನಡೆಯಲಿದ್ದು, ಅಕ್ಟೋಬರ್ 8 ರಂದು ಮತ ಎಣಿಕೆ ನಡೆಯಲಿದೆ. ಚುನಾವಣೆಗು ಮುನ್ನ ಅಲ್ಲಲ್ಲಿ ಹಿಂಸಾಚಾರದ ಘಟನೆಳು ನಡೆಯುತ್ತಿವೆ. (ಏಜೆನ್ಸೀಸ್​​)