ನ್ಯೂಸ್

ಜಸ್ಟೀಸ್ ಡಾ.ಶಿವರಾಜ ಪಾಟೀಲ್ ಆತ್ಮಕಥನ ಇನ್ನು ಮುಂದೆ ಗುಲ್ಬರ್ಗಾ ವಿವಿ ಪಠ್ಯಪುಸ್ತಕ..!

ಬೆಂಗಳೂರು: ಯಾವುದೇ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆ ಮತ್ತು ಸ್ಥಾನಮಾನವನ್ನು ಪಡೆದುಕೊಳ್ಳುವುದಕ್ಕೆ ನಿರಂತರ ಪ್ರಯತ್ನ, ಪರಿಶ್ರಮದ ಜೊತೆಗೆ ದೈವಕೃಪೆಯೂ ಕೂಡಾ ಅಗತ್ಯವಾಗಿ ಬೇಕು ಎಂದು ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ ಪಾಟೀಲ್ ಅಭಿಪ್ರಾಯಿಸಿದ್ದಾರೆ.

ನಗರದ ಇನ್‌ೆಂಟ್ರಿ ರಸ್ತೆಯಲ್ಲಿರುವ ಸ್ಪರ್ಶ್ ಆಸ್ಪತ್ರೆ ಸಭಾಂಗಣದಲ್ಲಿ ಗುಲ್ಬರ್ಗಾ ವಿಶ್ವವಿದ್ಯಾನಿಲಯ ಆಯೋಜಿಸಿದ್ದ ‘ಕಳೆದ ಕಾಲ ನಡೆದ ದೂರ’ ನ್ಯಾಯಮೂರ್ತಿ ಶಿವರಾಜ ವಿ.ಪಾಟೀಲ್ ಆತ್ಮಕಥನದ ಬಿ.ಎಸ್ಸಿ ಪಠ್ಯ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ಯುವ ಪೀಳಿಗೆಗೆ ಪ್ರೇರಣೆಯಾಗಬೇಕೆಂಬ ಕಾರಣಕ್ಕಾಗಿಯೇ ಆತ್ಮಕಥನವನ್ನು ರಚಿಸಿದ್ದೇನೆ. ಪುಸ್ತಕ ಪ್ರಕಟವಾಗಿ ಕೇವಲ 8 ತಿಂಗಳಲ್ಲೇ ಇದರ ಆಯ್ದ ಭಾಗವನ್ನು ಗುಲ್ಬರ್ಗಾ ವಿವಿ ವ್ಯಾಪ್ತಿಯ ಬಿಎಸ್ಸಿ ವಿದ್ಯಾರ್ಥಿಗಳಿಗೆ ಪಠ್ಯ ಪುಸ್ತಕವನ್ನಾಗಿ ಪ್ರಕಟಿಸಿರುವುದು ಸಂತೋಷ ತಂದಿದೆ. ನನಗಿಂತಲೂ ಅರ್ಹರು, ಯೋಗ್ಯರು, ಬುದ್ಧಿವಂತರು ಸಾಕಷ್ಟು ಜನ ಇದ್ದಾರೆ. ಆದರೆ ಅವರನ್ನು ಮೀರಿ ನನಗೆ ಹೆಚ್ಚಿನ ಸ್ಥಾನಮಾನಗಳು ದೊರೆತಿದ್ದರೆ ಅದಕ್ಕೆ ಪ್ರಯತ್ನದ ಜೊತೆಗೆ ದೇವರ ಆಶೀರ್ವಾದ ಹಾಗೂ ಅಸಂಖ್ಯಾತ ಜನರ ಹಾರೈಕೆ ಕೆಲಸ ಮಾಡಿದೆ ಎಂಬುದು ನನ್ನ ನಂಬಿಗೆ. ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅವರು ಮಾಡಿದ ಕೆಲಸಕ್ಕೆ ಶ್ರೀಮಂತರು ಪೇ (ಹಣ) ಮಾಡುತ್ತಾರೆ. ಆದರೆ ಬಡವರು ಪ್ರೇ (ಪ್ರಾರ್ಥನೆ) ಮಾಡುತ್ತಾರೆ. ಶ್ರೀಮಂತರು ನೀಡಿದ ಹಣಕ್ಕಿಂತ ಬಡವರು ಮಾಡಿದ ಪ್ರಾರ್ಥನೆಗೆ ಹೆಚ್ಚು ಬಲವಿದೆ ಎಂದು ತಮ್ಮ ಜೀವನದಲ್ಲಿ ವಕೀಲರಾಗಿ, ನ್ಯಾಯಾಧೀಶರಾಗಿ ನಡೆದು ಬಂದ ಹಾದಿಯನ್ನು ವಿವರಿಸಿದರು.

ಸಮಾರಂಭದಲ್ಲಿ ಹಿರಿಯ ಸಾಹಿತಿ ಡಾ.ಮಲ್ಲೇಪುರಂ ವೆಂಕಟೇಶ್, ಗುಲ್ಬರ್ಗಾ ವಿವಿ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ.ಎಚ್.ಟಿ.ಪೋತೆ, ಕೃತಿಯ ಸಂಪಾದಕ ಡಾ.ಎಂ.ಬಿ.ಕಟ್ಟಿ, ಪ್ರಕಾಶಕ ಬಸವರಾಜ ಕೊನೆಕ್, ಡಾ.ಶರಣ ಪಾಟೀಲ್, ಮುದ್ರಕ ಸ್ವಾನ್ ಪ್ರಿಂಟರ್ಸ್‌ನ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

'ಅತಿಶಯೋಕ್ತಿ ಇಲ್ಲದ ಕೃತಿಯೇ ಆತ್ಮಕಥನ'

ಬದುಕಿನ ಏಳು ಬೀಳುಗಳನ್ನು ಯಥಾವತ್ತಾಗಿ ಚಿತ್ರಿಸಿ, ಅತಿಶಯೋಕ್ತಿ ಇಲ್ಲದಂತೆ ರಚನೆಯಾಗುವ ಕೃತಿಯನ್ನು ಆತ್ಮಕಥನ ಎನ್ನಬಹುದು. ಈ ವ್ಯಾಖ್ಯಾನಕ್ಕೆ ಉತ್ತಮ ಉದಾಹರಣೆ ಡಾ. ಶಿವರಾಜ ಪಾಟೀಲರ ಕಳೆದ ಕಾಲ ಸವೆಸಿದ ದೂರ ಪುಸ್ತಕ. ನ್ಯಾಯಾಂಗ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಮಾರ್ಗದರ್ಶನ ಕೃತಿಯಾಗಿದ್ದು, ಶ್ರೀಯುತರ ಜೀವನದ ವಿವಿಧ ಮಜಲುಗಳನ್ನು ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತೆ ಮಾಡಿದ ಕಲಬುರಗಿ ವಿವಿ ಕಾರ್ಯ ಸ್ತುತ್ಯಾರ್ಹ ಎಂದು ಡಾ.ಮಲ್ಲೇಪುರಂ ವೆಂಕಟೇಶ ತಿಳಿಸಿದ್ದಾರೆ.