ನ್ಯೂಸ್

ಮಗುವಿಗೆ ಚಂಡಮಾರುತದ ಹೆಸರಿಟ್ಟ ದಂಪತಿ: ಹೆಸರು ಕೇಳಿ ನೆಟ್ಟಿಗರು ಶಾಕ್​​..!

ಗುಜರಾತ್​: ನೈಸರ್ಗಿಕ ವಿಕೋಪಗಳ ನಂತರ ಮಕ್ಕಳಿಗೆ ಹೆಸರಿಡುವ ವಿಲಕ್ಷಣ ಪ್ರವೃತ್ತಿಗೆ ಅನುಗುಣವಾಗಿ, ಗುಜರಾತ್​ನ ಮಹಿಳೆಯೊಬ್ಬರು ತನ್ನ ಒಂದು ತಿಂಗಳ ಮಗುವಿಗೆ ಚಂಡಮಾರುತದ ಹೆಸರಿಟ್ಟಿದ್ದಾರೆ.

ಕಚ್ ಜಿಲ್ಲೆಯ ಜಖೌನಲ್ಲಿರುವ ತಾತ್ಕಾಲಿಕ ಆಶ್ರಯದಲ್ಲಿ ವಾಸಿಸುತ್ತಿರುವ ಕುಟುಂಬವು ಒಂದು ತಿಂಗಳ ಹಿಂದೆ ಹುಟ್ಟಿದ ಮಗುವಿಗೆ ಏನು ಹೆಸರು ಇಡಬೇಕು ಎಂದು ಯೋಚಿಸಿ, ಕೊನೆಗೆ ಬಿಪರ್​ಜಾಯ್​ ಎಂದು ನಾಮಕರಣ ಮಾಡಿದೆ. ಬಿಪರ್​ಜಾಯ್​ ಎಂಬ ಹೆಸರನ್ನು 2020ರಲ್ಲಿ ವಿಶ್ವ ಹವಾಮಾನ ಸಂಸ್ಥೆಯ (WMO) ರಾಷ್ಟ್ರಗಳು ಅನುಮೋದನೆ ನೀಡಿವೆ.

ಬಿಪರ್​ಜಾಯ್​ ಎಂದರೆ "ಅಕ್ಷರಶಃ ವಿಪತ್ತು" ಎಂದರ್ಥವಾಗಿದೆ. ಈ ಪದವನ್ನು ಬೆಂಗಾಲಿಯಲ್ಲಿ ಭಾಷೆಯಿಂದ ಪಡೆಯಲಾಗಿದ್ದು, ವಿಶ್ವ ಹವಾಮಾನ ಸಂಸ್ಥೆಯು ಚಂಡಮಾರುತಗಳ ಹೆಸರನ್ನು ಶಿಫಾರಸ್ಸು ಮಾಡುತ್ತದೆ. ಈ ಹಿಂದೆಯೂ ಹಲವಾರು ಕುಟುಂಬಗಳು ಚಂಡಮಾರುತದ ಹೆಸರುಗಳನ್ನು ಮಕ್ಕಳಿಗೆ ಇಟ್ಟಿದ್ದಾರೆ. ತಿತ್ಲಿ, ಫನಿ ಮತ್ತು ಗುಲಾಬ್ ಹೀಗೆ ಈ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಭೂಕಂಪಗಳು ಮತ್ತು ಚಂಡಮಾರುತಗಳಂತಹ ನೈಸರ್ಗಿಕ ವಿಕೋಪಗಳ ನಂತರ ಮಕ್ಕಳಿಗೆ ಹೆಸರಿಡುವ ವಿಚಿತ್ರ ಪ್ರವೃತ್ತಿ ಹೊಸದಲ್ಲ. ಈ ಹಿಂದೆ ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಕೋವಿಡ್​-19 ಸಾಂಕ್ರಾಮಿಕ ರೋಗ ಉತ್ತುಂಗದಲ್ಲಿದ್ದಾಗ ಹುಟ್ಟಿದ ನವಜಾತ ಹೆಣ್ಣು ಮಗುವಿಗೆ ಕರೋನಾ ಎಂದು ಹೆಸರಿಟ್ಟಿದ್ದರು.

ಮುಂಬೈ-ಉತ್ತರ ಪ್ರದೇಶ ರೈಲಿನಲ್ಲಿ ಜನಿಸಿದ ಮಗುವಿಗೆ ಹಾಗೂ ಲಾಕ್​ಡೌನ್​ ವೇಳೆ ತ್ರಿಪುರಾದಲ್ಲಿ ಸಿಲುಕಿದ್ದ ರಾಜಸ್ಥಾನದ ದಂಪತಿ ತಮ್ಮ ನವಜಾತ ಗಂಡು ಮಗುವಿಗೆ ಲಾಕ್‌ಡೌನ್ ಎಂದು ಹೆಸರಿಟ್ಟಿದ್ದರು.(ಏಜೆನ್ಸೀಸ್​)