ವಡೋದರಾ: ಟಿಕ್ಟಾಕ್ ವಿಡಿಯೋ ಕ್ರೇಜ್ ಸಮಾಜದ ಬಹುತೇಕ ಜನರನ್ನಾವರಿಸಿದೆ. ಏನೋ ಮಾಡಿ ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆಗಿಬಿಡಬೇಕೆಂಬ ಹಂಬಲ, ಬಯಕೆ. ಹೀಗೆ ಬಯಸಿದ್ದ ಇಬ್ಬರು ಸೂಕ್ಷ್ಮ ಮರೆತು ಮಾಡಿದ ಅವಾಂತರಕ್ಕೆ ಈಗ ಪ್ರತಿಫಲ ಉಣ್ಣುತ್ತಿದ್ದಾರೆ. ಅಂತಹ ಅವಾಂತರ ಅವರೇನು ಮಾಡಿದ್ರು ಅಂತೀರಾ?
ಆರೋಪಿಗಳ ಹೆಸರು ಸಲ್ಮಾನ್ ಪಠಾಣ್ ಮತ್ತು ಆರೀಫ್ ಶೇಖ್. ಲಾಕ್ಡೌನ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಈ ಇಬ್ಬರನ್ನೂ ಸಯಾಜಿಗಂಜ್ ಪೊಲೀಸರು ಬಂಧಿಸಿ ಸೆರೆಗೆ ದಬ್ಬಿದ್ದರು. ಇದಾಗಿದ್ದು ಏಪ್ರಿಲ್ 16ರಂದು. ಅಂದೇ ಅವರ ಪರ ವಕೀಲರು ಜಾಮೀನು ತಂದು ಬಿಡಿಸಿಕೊಂಡು ಹೋಗಿದ್ದರು. ಅದೇ ದಿನ ಈ ಆರೋಪಿಗಳು ಪೊಲೀಸ್ ಠಾಣೆಯಿಂದ ಬಿಡುಗಡೆ ಹೊಂದುವ ಸಮಯದಲ್ಲಿ ಠಾಣೆಯ ಒಳಾಂಗಣದ ದೃಶ್ಯವನ್ನು ಮೊಬೈಲ್ ಮೂಲಕ ಚಿತ್ರೀಕರಿಸಿಕೊಂಡಿದ್ದರು. ಈ ಚಿತ್ರೀಕರಣ ನಡೆಸುವುದಕ್ಕೆ ಅವರು ಯಾರ ಅನುಮತಿಯನ್ನೂ ಪಡೆದಿರಲಿಲ್ಲ ಎಂದು ಸಬ್ ಇನ್ಸ್ಪೆಕ್ಟರ್ ಎಸ್ಜಿ ಸೋಲಂಕಿ ಹೇಳಿದ್ದಾರೆ.
ಈ ವಿಡಿಯೋವನ್ನು ಬಳಸಿಕೊಂಡ ಆರೋಪಿಗಳು ಅದಕ್ಕೆ ಪೊಲೀಸ್ ಸೈರನ್ ಸೇರಿಸಿ ಎಡಿಟ್ ಮಾಡಿಕೊಂಡು ಟಿಕ್ಟಾಕ್ನಲ್ಲಿ ಅಪ್ಲೋಡ್ ಮಾಡಿದ್ದರು. ವಿಡಿಯೋದಲ್ಲಿ ಆರೋಪಿಗಳಲ್ಲೊಬ್ಬ ಠಾಣೆಯೊಳಗೆ ಸ್ಟೇರ್ಕೇಸ್ ಮೇಲೆ ಕುಳಿತು ಶೂಗಳನ್ನು ಧರಿಸುತ್ತಿರುವ ದೃಶ್ಯವಿದೆ. ಜಾಮೀನು ಪಡೆದು ಠಾಣೆಯಿಂದ ಹೊರಗೆ ಹೋಗುವ ಮುನ್ನ ಚಿತ್ರೀಕರಿಸಿದ ದೃಶ್ಯವಿದು. ಇದನ್ನು ಫಿಲ್ಮಿ ಸ್ಟೈಲ್ನಲ್ಲಿ ಎಡಿಟ್ ಮಾಡಿಕೊಂಡು ನಂತರ ಟಿಕ್ಟಾಕ್ಗೆ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ವೈರಲ್ ಆಗಿ ಪೊಲೀಸರ ಗಮನಕ್ಕೆ ಬಂತು.
ಟಿಕ್ಟಾಕ್ ವಿಡಿಯೋ ಅಪ್ಲೋಡ್ ಮಾಡಿದ ಈ ಆರೋಪಿಗಳ ವಿರುದ್ಧ ಅನುಮತಿ ಪಡೆಯದೇ ವಿಡಿಯೋ ಚಿತ್ರೀಕರಣ ಮಾಡಿದ್ದಕ್ಕಾಗಿ ಐಟಿ ಕಾಯ್ದೆಯ ಸೆಕ್ಷನ್ 66(ಇ) ಪ್ರಕಾರ ಉಲ್ಲಂಘನೆಯ ಪ್ರಕರಣವನ್ನು ಪೊಲೀಸರು ಕೂಡಲೇ ದಾಖಲಿಸಿದ್ದಾರೆ. ಇದಲ್ಲದೆ, ಐಪಿಸಿ ಸೆಕ್ಷನ್ 269, 270ರ ಪ್ರಕಾರವೂ ಪ್ರಕರಣ ದಾಖಲಾಗಿದೆ. ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)