ರಾಜ್‌ಕೋಟ್: ಶನಿವಾರ ಸಂಜೆ ಗುಜರಾತ್‌ನ ರಾಜ್‌ಕೋಟ್‌ನಲ್ಲಿ ಗೇಮಿಂಗ್ ಝೋನ್‌ನಲ್ಲಿ ಭಾರಿ ಬೆಂಕಿ ಅವಘಡ ಸಂಭವಿಸಿದ್ದು 9 ಮಕ್ಕಳು ಸೇರಿ 24 ಮಂದಿ ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಘಟನಾ ಸ್ಥಳಕ್ಕೆ ಹಲವು ಅಗ್ನಿಶಾಮಕ ಟೆಂಡರ್ ಧಾವಿಸಿದ್ದು, ಬೆಂಕಿ ನಂದಿಸುವ ಪ್ರಯತ್ನ ಮುಂದುವರಿದಿದೆ. ಬೆಂಕಿಗೆ ಕಾರಣ ಇನ್ನೂ ತಿಳಿದುಬಂದಿಲ್ಲ.
ಬೆಂಕಿ ನಂದಿಸುವ ಪ್ರಯತ್ನ ನಡೆಯುತ್ತಿದೆ. ನಾಪತ್ತೆಯಾದವರ ಬಗ್ಗೆ ನಮಗೆ ಯಾವುದೇ ಸಂದೇಶ ಬಂದಿಲ್ಲ. ತಾತ್ಕಾಲಿಕ ಕಟ್ಟಡ ಕುಸಿದಿದೆ. ಗಾಳಿಯ ವೇಗದಿಂದಾಗಿ ನಾವು ಅಗ್ನಿಶಾಮಕ ಕಾರ್ಯಾಚರಣೆಯಲ್ಲಿ ತೊಂದರೆ ಎದುರಿಸುತ್ತಿದ್ದೇವೆ ಎಂದು ಅಗ್ನಿಶಾಮಕ ಅಧಿಕಾರಿ ಹೇಳಿರುವುದಾಗಿ ಎಎನ್ಐ ವರದಿ ಮಾಡಿದೆ. ಬೆಂಕಿ ಅವಘದದಲ್ಲಿ "24 ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡ ನಂತರವೇ ನಿಖರವಾದ ಸಂಖ್ಯೆ ತಿಳಿಯುತ್ತದೆ" ಎಂದು ರಾಜ್‌ಕೋಟ್ ಮುನ್ಸಿಪಲ್ ಕಮಿಷನರ್ ಆನಂದ್ ಪಟೇಲ್ ಉಲ್ಲೇಖಿಸಿದ್ದಾರೆ.
ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರು ಅಗ್ನಿ ದುರಂತದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಡಳಿತಕ್ಕೆ ಸೂಚನೆ ನೀಡಿದ್ದಾರೆ. "ರಾಜ್‌ಕೋಟ್‌ನ ಗೇಮ್ ಝೋನ್‌ನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ತಕ್ಷಣದ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ಮುನ್ಸಿಪಲ್ ಕಾರ್ಪೊರೇಷನ್ ಮತ್ತು ಆಡಳಿತಕ್ಕೆ ಸೂಚನೆಗಳನ್ನು ನೀಡಲಾಗಿದೆ. ಗಾಯಾಳುಗಳಿಗೆ ತಕ್ಷಣದ ಚಿಕಿತ್ಸೆಗೆ ಆದ್ಯತೆ ನೀಡಲು ಸಹ ಸೂಚಿಸಲಾಗಿದೆ" ಎಂದು ಭೂಪೇಂದ್ರ ಪಟೇಲ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.