ನ್ಯೂಸ್

ಗಂಡನ ಕಾಮದಾಹಕ್ಕೆ ಬೇಸತ್ತು ಮಹಿಳೆ ಆತ್ಮಹತ್ಯೆ: 18 ಪುಟಗಳ ಡೆತ್​ನೋಟ್​ನಲ್ಲಿ ಪತಿಯ ಕಾಮದಾಟ ಬಯಲು!

ಅಹಮದಾಬಾದ್​: ವಿವಾಹಿತ ಮಹಿಳೆಯೊಬ್ಬಳು 18 ಪುಟಗಳ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗುಜರಾತ್​ನ ಅಹಮದಾಬಾದ್​ನಲ್ಲಿ ನಡೆದಿದೆ.

ಹರ್ಷಾ ಪಟೇಲ್​ (39) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಅಹಮದಾಬಾದ್​ನ ಘಟ್ಲೋಡಿಯಾ ನಿವಾಸಿ ಹಾಗೂ ಮೂಳೆ ವೈದ್ಯರಾಗಿರುವ ಹಿತೇಂದ್ರ ಪಟೇಲ್​ ಎಂಬುವರನ್ನು ಕಳೆದ ಆಗಸ್ಟ್​ನಲ್ಲಿ ಹರ್ಷಾ ವರಿಸಿದ್ದರು. ಇಬ್ಬರದ್ದು ಸಹ ಎರಡನೇ ಮದುವೆಯಾಗಿತ್ತು. ಇದಕ್ಕೂ ಮುನ್ನ ಮ್ಯಾಟ್ರಿಮೊನಿಯಲ್​ ವೆಬ್​ಸೈಟ್​ನಲ್ಲಿ ಇಬ್ಬರು ತಮ್ಮ ಮಾಹಿತಿಯನ್ನು ನೋಂದಣಿ ಮಾಡಿದ್ದರು. ಇಲ್ಲಿಂದ ಶುರುವಾದ ಇಬ್ಬರ ಪರಿಚಯ ಮದುವೆ ಬಂಧನದಲ್ಲಿ ಬೆಸೆದುಕೊಂಡಿತ್ತು.

ಇಬ್ಬರು 2020ರ ಆಗಸ್ಟ್​ 28ರಲ್ಲಿ ಮದುವೆಯಾಗಿದ್ದರು. ಇದೀಗ ವರ್ಷ ಕಳೆದಿಲ್ಲ, ಅಷ್ಟರಲ್ಲೇ ಕಳೆದ ಮಂಗಳವಾರ ಹರ್ಷಾ ಗಂಡನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 18 ಪುಟಗಳ ಡೆತ್​ನೋಟ್​ ಬರೆದಿರುವ ಹರ್ಷಾ, ಗಂಡ ಮತ್ತು ಅತ್ತೆ-ಮಾವನ ಕರಾಳ ಮುಖದ ಅನಾವರಣ ಮಾಡಿದ್ದಾರೆ.

ಮದುವೆಯಾಗಿ ಕೆಲವು ದಿನಗಳವರೆಗೆ ದಂಪತಿ ಆನಂದ ಸಾಗರದಲ್ಲಿ ತೇಲಾಡುತ್ತಿದ್ದರು. ಆದರೆ, ಈ ಖುಷಿ ಹರ್ಷಾಗೆ ಹೆಚ್ಚು ದಿನ ಉಳಿಯಲಿಲ್ಲವಂತೆ. ಆಕೆಯ ಅತ್ತೆ-ಮಾವ ವರದಕ್ಷಿಣೆ ಕಿರುಕುಳ ಕೊಡಲು ಆರಂಭಿಸಿದರಂತೆ. ಈ ಬಗ್ಗೆ ಗಂಡನಿಗೆ ಹೇಳಿದರೂ ಕ್ಯಾರೆ ಎನ್ನದ ಪತಿ ಮತ್ತಷ್ಟು ಕಿರುಕುಳ ನೀಡಲು ಸಾಥ್​ ನೀಡಿದನಂತೆ.

ಪ್ರತಿ ಸಣ್ಣ ವಿಚಾರಕ್ಕೂ ಅತ್ತೆ-ಮಾವ ತನ್ನ ಮೇಲೆ ಹಲ್ಲೆ ಮಾಡುತ್ತಿದ್ದುದ್ದನ್ನು ಗಂಡನಿಗೆ ಹೇಳಿದ್ದಾಳೆ. ಆದರೂ, ಗಂಡನ ಮನಸ್ಸು ಕರಗಲಿಲ್ಲವಂತೆ. ಇಷ್ಟೇ ಅಲ್ಲದೆ, ಪ್ರತಿ ರಾತ್ರಿ ಪತಿ ನರಕ ತೋರಿಸುತ್ತಿದ್ದನಂತೆ. ಮೊದಲೇ ಹಿತೇಂದ್ರ ವೈದ್ಯನಾಗಿದ್ದರಿಂದ ಪ್ರತಿ ದಿನ ರಾತ್ರಿ ಮಾದಕ ವಸ್ತು ಇಂಜೆಕ್ಷನ್​ ನೀಡುತ್ತಿದ್ದನಂತೆ. ಅಲ್ಲದೆ, ಬಲವಂತವಾಗಿ ಆಕೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿದ್ದನಂತೆ. ಡ್ರಗ್ಸ್​ ಇಂಜೆಕ್ಷನ್​ನಿಂದ ಪ್ರಜ್ಞೆ ಕಳೆದುಕೊಳ್ಳುತ್ತಿದ್ದ ಆಕೆಯ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದನಂತೆ. ಅಲ್ಲದೆ, ವಿವಿಧ ಭಂಗಿಗಳಲ್ಲಿ ಆಸೆ ತೀರಿಸುವಂತೆ ಮೃಗೀಯವಾಗಿ ವರ್ತಿಸುತ್ತಿದ್ದ ಎಂದು ಡೆತ್​ನೋಟ್​ನಲ್ಲಿ ಹರ್ಷಾ ಉಲ್ಲೇಖಿಸಿದ್ದಾರೆ.

ಗಂಡನ ಅಸಹಜ ಲೈಂಗಿಕ ಕ್ರಿಯೆ ಹಾಗೂ ಕಿರುಕುಳ ಸಹಿಸದ ಹರ್ಷಾ ಪಟೇಲ್​, ಕಳೆದ ಡಿಸೆಂಬರ್​ನಲ್ಲಿ ಗಂಡನನ್ನು ತೊರೆದು ತನ್ನ ತವರಿಗೆ ತೆರಳುತ್ತಾಳೆ. ಇದಾದ ಬಳಿಕ ತಂದೆಯ ಮನೆಯಲ್ಲೇ ಉಳಿದುಕೊಂಡಿದ್ದ ಹರ್ಷಾ ಕಳೆದ ಮಂಗಳವಾರ ಗಂಡನ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಮಾಹಿತಿ ತಿಳಿದು ತಕ್ಷಣ ಆಸ್ಪತ್ರೆಗೆ ಕರೆದೊಯ್ದರು ಸಹ ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿರುವುದನ್ನು ವೈದ್ಯರು ತಿಳಿಸುತ್ತಾರೆ.

ಇದಾದ ಬಳಿಕ ವಿಚಾರಣೆ ನಡೆಸುವ ಪೊಲೀಸರು ಹಿತೇಂದ್ರ, ಆತನ ತಂದೆ-ತಾಯಿ ಮತ್ತು ಸಹೋದರಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ, ಅಸಹಜ ಲೈಂಗಿಕ ಕ್ರಿಯೆ ಮತ್ತು ಬಲವಂತವಾಗಿ ಡ್ರಗ್ಸ್​ ನೀಡಿರುವ ಪ್ರಕರಣದಡಿಯಲ್ಲಿ ಕೇಸು ದಾಖಲಿಸುತ್ತಾರೆ. ಆರೋಪಿಗಳು ಹರ್ಷಾಳ ಮೇಲೆ ಮಾನಸಿಕ, ದೈಹಿಕ ಮತ್ತು ಭಾವನಾತ್ಮಕವಾಗಿ ಹಿಂಸಿಸಿರುತ್ತಾರೆ. ಇದೀಗ ವಿಚಾರಣೆ ಎದುರಿಸುತ್ತಿರುವ ಆರೋಪಿಗಳು ಬಂಧನ ಭೀತಿಯಲ್ಲಿದ್ದಾರೆ. ಹರ್ಷಾಳ ಮೃತದೇಹವನ್ನು ಸೊಲಾ ಆಸ್ಪತ್ರೆಗೆ ಶವಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ. (ಏಜೆನ್ಸೀಸ್​)