ಬೆಂಗಳೂರು: ಹಲವು ನಿರ್ಬಂಧ, ನಿರ್ದಿಷ್ಟ ಕಾಲಮಿತಿಯನ್ನು ಒಳಗೊಂಡ 2025-26ನೇ ಸಾಲಿನ ರಾಜ್ಯ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ ಮೇ 15ರಿಂದ ಶುರುವಾಗಲಿದೆ.
ನಿರ್ಬಂಧ ಸಹಿತ ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆಗೆ ರಾಜ್ಯ ಸಚಿವ ಸಂಪುಟ ಸಭೆ ಶುಕ್ರವಾರ ಒಪ್ಪಿಗೆ ನೀಡಿದೆ. ಬೆನ್ನಲ್ಲೇ ಮಾರ್ಗಸೂಚಿಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಕಟಿಸಿ, ಸೋಮವಾರ ಆದೇಶಿಸಿದೆ.
ರಾಜ್ಯ ಸರ್ಕಾರಿ ಸಿಬ್ಬಂದಿಯ ಈ ವರ್ಷದ ಸಾರ್ವತ್ರಿಕ ವರ್ಗಾವಣೆಗೆ ಮೇ 15ರಿಂದ ಜೂ.14ರ ಗಡುವು ವಿಧಿಸಲಾಗಿದೆ. ಹುದ್ದೆಗಳ ವರ್ಗಾವಣೆ ಸಂಖ್ಯೆಯು ಶೇ.6ರಷ್ಟನ್ನು ಮೀರುವಂತಿಲ್ಲ ಎಂಬ ನಿರ್ಬಂಧ ವಿಧಿಸಲಾಗಿದೆ.
ಅಲ್ಲದೆ ಗ್ರೂಪ್ ಎ ಮತ್ತು ಬಿ ವೃಂದ ನೌಕರರ ವರ್ಗಾವಣೆ ಅಧಿಕಾರವನ್ನು ಆಯಾ ಇಲಾಖೆ ಸಚಿವರಿಗೆ ನೀಡಲಾಗಿದೆ. ಸಕ್ಷಮ ಪ್ರಾಧಿಕಾರಿ ಅಂದರೆ ನೇಮಕಾತಿ ಪ್ರಾಧಿಕಾರಕ್ಕೆ ಗ್ರೂಪ್ ಸಿ ಮತ್ತು ಡಿ ವೃಂದ ನೌಕರರ ವರ್ಗಾವಣೆ ಅಧಿಕಾರ ಪ್ರತ್ಯಾಯೋಜಿಸಲಾಗಿದೆ.
ವರ್ಗಾವಣೆ ಉದ್ದೇಶಕ್ಕೆ ಈಗಾಗಲೇ ಹೊರಡಿಸಿದ ಪ್ರತ್ಯೇಕ ಅಧಿನಿಯಮ/ ನಿಯಮಗಳಿಗೆ ಅನ್ವಯವಾಗುವ ಸರ್ಕಾರಿ ನೌಕರರು ಈ ಮಾರ್ಗಸೂಚಿಗಳು ಅನ್ವಯಿಸುವುದಿಲ್ಲ. ಚಲನವಲನ ಪ್ರಕರಣಗಳನ್ನು ವರ್ಗಾವಣೆಯನ್ನಾಗಿ ಪರಿಗಣಿಸುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
- ವರ್ಗಾವಣೆಯಾದ ಯಾವುದೇ ನೌಕರ ಸ್ಥಳ ನಿಯುಕ್ತಿಗಾಗಿ ಕಾಯದಂತೆ ಕಡ್ಡಾಯವಾಗಿ ಸ್ಥಳ ನಿಯುಕ್ತಿ ನೀಡಬೇಕು
- ಗಂಭೀರ ಸ್ವರೂಪದ ಆರೋಪ, ಇಲಾಖಾ ವಿಚಾರಣೆ, ಕ್ರಿಮಿನಲ್ ನಡವಳಿ ಆರಂಭಿಸದಿದ್ದಲ್ಲಿ ಅಥವಾ ಬಾಕಿಯಿದ್ದಲ್ಲಿ ಅಂತಹ ನೌಕರರು ಕೋರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸುವಂತಿಲ್ಲ.
- ಮೇಲ್ನೋಟಕ್ಕೆ ಆರೋಪ ಸಾಬೀತಾಗಿದೆ ಎಂದು ಇಲಾಖೆ ಮುಖ್ಯಸ್ಥರು ಅಭಿಪ್ರಾಯಪಟ್ಟ, ದೋಷಾರೋಪ ಪಟ್ಟಿ ಸಲ್ಲಿಕೆ, ಅಭಿಯೋಜನೆ ಖಚಿತವಾದ ಪ್ರಕರಣಗಳು, ಅಮಾನತು ಹೊರತುಪಡಿಸಿ ಒಂದು ಸ್ಥಳದಲ್ಲಿ ಸೇವಾವಧಿಯನ್ನು ಪೂರ್ಣಗೊಳಿಸದ ಯಾವುದೇ ಸರ್ಕಾರಿ ನೌಕರನನ್ನು ಸಾಧರಣವಾಗಿ ವರ್ಗಾವಣೆ/ ಚಲನವಲನ ಮಾಡುವಂತಿಲ್ಲ.
- ಎಲ್ಲ ಗುಂಪುಗಳ ಗ್ರೂಪ್ ಎ ಮತ್ತು ಬಿ ಹುದ್ದೆಗಳು- ಎರಡು ವರ್ಷ, ಎಲ್ಲ ಗುಂಪು ಗ್ರೂಪ್ ಸಿ ಹುದ್ದೆಗಳು ನಾಲ್ಕು ವರ್ಷ ಹಾಗೂ ಎಲ್ಲ ಗ್ರೂಪ್ ಡಿ ಹುದ್ದೆಗಳು- ಏಳು ವರ್ಷ
- ಕಲ್ಯಾಣ ಕರ್ನಾಟಕ ವೃಂದದ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಹೊಂದಿರುವ ನೌಕರ ನೇಮಕಾತಿ ದಿನಾಂಕದಿಂದ 10 ವರ್ಷಗಳವರೆಗೂ ವರ್ಗಾವಣೆಯಾಗುವಂತಿಲ್ಲ
- ಒಂದು ಸ್ಥಳದಲ್ಲಿರಬಹುದಾದ ಕನಿಷ್ಠ ಅವಧಿ ಪೂರ್ಣಗೊಳಿಸಿ ಅರ್ಹರಿನಿರುವ ನೌಕರ, ನಿವೃತ್ತನಾಗಲು ಎರಡು ವರ್ಷಕ್ಕಿಂತ ಕಡಿಮೆ ಅವಧಿ, ವಿಶೇಷ ತಾಂತ್ರಿಕ ವಿದ್ಯಾರ್ಹತೆ, ಕೇಂದ್ರ ಸರ್ಕಾರ ಅಥವಾ ಮಹತ್ವಾಕಾಂಕ್ಷಿ ಯೋಜನೆ, ಪತಿ-ಪತ್ನಿ ಪ್ರಕರಣಗಳ, ಮಾರಕ ಕಾಯಿಲೆ, ಅವಲಂಬಿತರು, ಮಹಿಳಾ ನೌಕರರು ಕೋರಿದ ಸ್ಥಳಗಳಿಗೆ ವರ್ಗಾಯಿಸಬಹುದು
- ಅಂಗವಿಕಲ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡುವುದು
- ಸೇವಾನಿರತ ಸರ್ಕಾರಿ ನೌಕರರು ತಮ್ಮ ಸೇವೆ ಅವಧಿಯಲ್ಲಿ ಅಂಗವಿಕಲರಾದಲ್ಲಿ ವೈದ್ಯಕೀಯ ಮಂಡಳಿಯಿಂದ ಪ್ರಮಾಣಪತ್ರವನ್ನು ಹಾಜರುಪಡಿಸುವ ಷರತ್ತು ವಿಧಿಸಿ ವರ್ಗಾಯಿಸಬಹುದು