ಕರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಆನ್ಲೈನ್ ಮೂಲಕ ನಡೆಸಲಾಗುತ್ತಿರುವ ಶಾಲಾ-ಕಾಲೇಜು ತರಗತಿಗಳಿಗೆ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ (ಎಚ್ಆರ್ಡಿ) ಮಂಗಳವಾರ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ತರಗತಿಗಳಿಗೆ ಸಮಯ ಮಿತಿ ನಿಗದಿಪಡಿಸಿದೆದೆ.
ಪೂರ್ವ ಪ್ರಾಥಮಿಕ ಮಟ್ಟದ ವಿದ್ಯಾರ್ಥಿಗಳಿಗೆ ಆನ್ಲೈನ್ ತರಗತಿಗಳು 30 ನಿಮಿಷಗಳಿಗಿಂತ ಹೆಚ್ಚು ಇರಬಾರದು ಎಂದು ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ತಿಳಿಸಿದ್ದಾರೆ. ಜತೆಗೆ 1ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ ತಲಾ 45 ನಿಮಿಷದ ಎರಡು ಆನ್ಲೈನ್ ಸೆಷನ್ಗಳನ್ನು ನಡೆಸಬೇಕು. 9 ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗೆ 30 ರಿಂದ 45 ನಿಮಿಷದ ನಾಲ್ಕು ಸೆಷನ್ಗಳ್ನು ನಡೆಸಬೇಕು ಎಂದು ಹೇಳಿದ್ದಾರೆ.
ಕರೊನಾ ಬಿಕ್ಕಟ್ಟಿನಿಂದಾಗಿ ಶಾಲಾ-ಕಾಲೇಜುಗಳು ಮುಚ್ಚಿರುವುದರಿಂದಾಗಿ ಸುಮಾರು 24 ಕೋಟಿ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಆದಾಗ್ಯೂ ಮನೆಯಲ್ಲಿ ಆರೋಗ್ಯಕರ ವಾತಾವರಣದಲ್ಲಿ ಗುಣಮಟ್ಟದ ಶಿಕ್ಷಣ ಮುಂದುವರಿಸಬೇಕಾಗಿದೆ ಎಂದು ಅವರು ತಿಳಿಸಿದರು. ಲಾಕ್ಡೌನ್ನಿಂದಾಗಿ ಪ್ರಸ್ತುತ ಮನೆಯಲ್ಲಿರುವ ವಿದ್ಯಾರ್ಥಿಗಳಿಗಾಗಿ ನೆರವಾಗಲು ಆನ್ಲೈನ್ ಶಿಕ್ಷಣದ ಮೇಲೆ ಕೇಂದ್ರೀಕರಿಸುವ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸಲಾಗಿದೆ. ಶಾಲಾ ಮುಖ್ಯಸ್ಥರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಈ ಮಾರ್ಗಸೂಚಿಗಳು ಉಪಯುಕ್ತವಾಗುತ್ತವೆ ಎಂದು ಪೋಖ್ರಿಯಾಲ್ ಹೇಳಿದ್ದಾರೆ.
ಆನ್ಲೈನ್ ತರಗತಿ ನಡೆಸುವಾಗ ಅವಧಿ, ಆನ್ಲೈನ್ ಮತ್ತು ಆಫ್ಲೈನ್ ಚಟುವಟಿಕೆಗಳ ಬಗ್ಗೆ ಸರಿಯಾದ ಯೋಜನೆ ಇರಬೇಕು. ತರಗತಿ ಸಮಯದಲ್ಲಿ ದೈಹಿಕ, ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದ ಬಗ್ಗೆ ಕಾಳಜಿ ವಹಿಸಬೇಕು. ಮಕ್ಕಳಿಗೆ ಅತೀಯಾದ ಒತ್ತಡ, ಕಣ್ಣಿನ ಸಮಸ್ಯೆಗಳು ಹಾಗೂ ದೈಹಿಕ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು ಎಂದು ಸಚಿವಾಲಯ ತಿಳಿಸಿದೆ.