ನ್ಯೂಸ್

ಲಾಕ್ ಡೌನ್ ನಾಲ್ಕನೇ ಹಂತದ ನಿಯಮ ನಾಳೆ ಪ್ರಕಟ ಸಾಧ್ಯತೆ

ನವದೆಹಲಿ: ಕರೊನಾ ಸೋಂಕು ತಡೆಯುವುದಕ್ಕೆ ದೇಶದಲ್ಲಿ ಈಗ ಮೂರನೇ ಹಂತದ ಲಾಕ್​ಡೌನ್ ಚಾಲ್ತಿಯಲ್ಲಿದೆ. ಮಂಗಳವಾರ ರಾತ್ರಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡುತ್ತ, ನಾಲ್ಕನೇ ಹಂತದ ಲಾಕ್​ಡೌನ್​ ಸಂಪೂರ್ಣ ಭಿನ್ನವಾಗಿರಲಿದೆ ಎಂದು ಸುಳಿವು ನೀಡಿದ್ದರು. ಕೇಂದ್ರ ಗೃಹ ಸಚಿವಾಲಯದ ಅಧಿಕಾರಿ ಮೂಲಗಳ ಪ್ರಕಾರ, ಇದಕ್ಕೆ ಸಂಬಂಧಿಸಿದ ಮಾರ್ಗಸೂಚಿ ನಾಳೆ ಪ್ರಕಟವಾಗುವ ಸಾಧ್ಯತೆ ಇದೆ.

ಮೂರನೇ ಹಂತದ ಲಾಕ್​ಡೌನ್ ಮೇ 17ಕ್ಕೆ ಮುಕ್ತಾಯವಾಗಲಿದೆ. ಮೇ 18ರಿಂದ ಭಿನ್ನವಾಗಿರುವ ಲಾಕ್​ಡೌನ್​ ಚಾಲ್ತಿಗೆ ಬರಲಿದೆ. ಅಧಿಕಾರಿಗಳು ಹೇಳುವ ಪ್ರಕಾರ, ಸಾಮಾಜಿಕ ಅಂತ, ಶುಚಿತ್ವ ಮತ್ತು ನೈರ್ಮಲ್ಯದ ಪ್ರೊಟೊಕಾಲ್​ಗಳನ್ನು ಈಗಿರುವಂತೆಯೇ ಅನುಸರಿಸಬೇಕು. ಅದರ ಸಂಪೂರ್ಣ ಹೊಣೆಗಾರಿಕೆ ಆಯಾ ವ್ಯಕ್ತಿಗಳಿಗೇ ಬಿಟ್ಟದ್ದು. ಆರೋಗ್ಯ ಸೇತುವಿನಂತಹ ಆ್ಯಪ್ ಮೂಲಕ ಉಳಿದ ನಿಗಾ ವ್ಯವಸ್ಥೆ ಮುಂದುವರಿಯಲಿದೆ. ಅಲ್ಲದೆ ನಾವೀಗ ಉತ್ತಮ ಆರೋಗ್ಯ ಸೌಲಭ್ಯ ಒದಗಿಸುವ ಸಾಮರ್ಥ್ಯವನ್ನೂ ಹೊಂದಿದ್ದೇವೆ.

ಸೋಮವಾರ (ಮೇ17) ಪ್ರಧಾನಮಂತ್ರಿಯವರು ಮುಖ್ಯಮಂತ್ರಿಗಳ ಜತೆಗೆ ಆರು ಗಂಟೆ ಕಾಲ ನಡೆಸಿದ ವಿಡಿಯೋ ಕಾನ್ಫರೆನ್ಸ್ ಸಂದರ್ಭದಲ್ಲೇ ಲಾಕ್​ಡೌನ್​ ಎರಡು ಅವಧಿಗೆ ವಿಸ್ತರಣೆಯಾಗಿದ್ದನ್ನು ಉಲ್ಲೇಖಿಸಿದ್ದರು. ಅಲ್ಲದೇ, ಕೆಲವೊಂದು ನಿರ್ಬಂಧಗಳೊಂದಿಗೆ ಮುಂದುವರಿಯುವ ವಿಚಾರವನ್ನೂ ಪ್ರಸ್ತಾಪಿಸಿದ್ದರು. ರಾಜ್ಯಗಳ ಸಲಹೆಯನ್ನು ಆಧರಿಸಿ ಮಾರ್ಗಸೂಚಿ ಸಿದ್ಧಪಡಿಸಲಾಗುವುದು. ಅವುಗಳ ವಿವರವನ್ನು ಮೇ 18ಕ್ಕೂ ಮೊದಲೇ ಎಲ್ಲ ರಾಜ್ಯಗಳೊಂದಿಗೆ ಹಂಚಿಕೊಳ್ಳಲಾಗುವುದು ಎಂದು ದೇಶವನ್ನು ಉದ್ದೇಶಿಸಿ ಮಾತನಾಡುವಾಗ ಹೇಳಿದ್ದರು.

ಇನ್ನೊಬ್ಬರು ಅಧಿಕಾರಿ ಹೇಳುವ ಪ್ರಕಾರ, ಕರೊನಾ ವೈರಸ್ ನಮ್ಮ ಬದುಕಿನೊಂದಿಗೆ ಬಹುಕಾಲ ಇರಲಿದೆ. ಅವುಗಳ ಜತೆಗೇ ಬದುಕಬೇಕಾದ ಪ್ರಸಂಗ ಎದುರಾಗಿದೆ. ನಾವು ಮಾಸ್ಕ್​ಗಳನ್ನು ಧರಿಸಬೇಕಾಗುತ್ತದೆ. ಅಲ್ಲದೆ, ಎರಡು ಗಜ (ಆರು ಅಡಿ) ಅಂತರವನ್ನೂ ಕಾಯಬೇಕಾಗುತ್ತದೆ. ಆದರೆ, ನಮ್ಮ ಬದುಕು, ಗುರಿ ಹಳಿತಪ್ಪದಂತೆ ನೋಡಿಕೊಳ್ಳಬೇಕು. ಅಲ್ಲದೆ, ರಾಜ್ಯಗಳು ಮುಂದಿನ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಆಯಾ ರಾಜ್ಯಗಳ ಪರಿಸ್ಥಿತಿಗೆ ಅನುಗುಣವಾಗಿ ಕಠಿಣ ನಿಯಮಗಳನ್ನು ಚಾಲ್ತಿಗೆ ತರಬಹುದು ಎಂಬ ಸುಳಿವು ಲಭ್ಯವಾಗಿದೆ. (ಏಜೆನ್ಸೀಸ್)