ನ್ಯೂಸ್

ಅಂತಾರಾಜ್ಯ ಪ್ರಯಾಣಿಕರಿಗೆ ಮುಕ್ತ ಅವಕಾಶ; ಕ್ವಾರಂಟೈನ್, ಕೈಗಳಿಗೆ ಮುದ್ರೆ ಮತ್ತಿತರ ನಿರ್ಬಂಧ ರದ್ದು

rameshmysuru

ಬೆಂಗಳೂರು: ರಾಜ್ಯದಲ್ಲಿ ಕರೊನಾ ಹಾವಳಿ ಕಡಿಮೆಯಾಗದಿದ್ದರೂ ನಿರ್ಬಂಧ ಮಾತ್ರ ಸಡಿಲವಾಗುತ್ತಿದೆ. ಇದೀಗ ಕೇಂದ್ರಾಡಳಿತ ಪ್ರದೇಶವೂ ಒಳಗೊಂಡು ಇತರ ರಾಜ್ಯಗಳ ಪ್ರಯಾಣಿಕರಿಗೆ ಮುಕ್ತ ಅವಕಾಶ ಕಲ್ಪಿಸಿ, ಹಿಂದಿನ ಹಲವಾರು ನಿರ್ಬಂಧಗಳನ್ನು ರದ್ದುಪಡಿಸಲಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಪರಿಷ್ಕೃತ ಶಿಷ್ಟಾಚಾರದ ಸುತ್ತೋಲೆಯನ್ನು ಸೋಮವಾರ ಹೊರಡಿಸಿದ್ದು, ಕೇಂದ್ರ ಸರ್ಕಾರದ ಅನ್​ಲಾಕ್-3 ಮಾರ್ಗಸೂಚಿಯನ್ನು ಯಥಾವತ್ ಅನುಪಾಲನೆ ಮಾಡಿದ್ದಾರೆ. ಹೊರ ರಾಜ್ಯಗಳ ಪ್ರಯಾಣಿಕರಿಗೆ ರಾಜ್ಯ ಪ್ರವೇಶ ಮುಕ್ತಗೊಳಿಸಿದ್ದು, ಸಹಜ ದಿನಗಳಂತೆ ಎಷ್ಟು ದಿನ ಬೇಕಾದರೂ ಇರಬಹುದು, ಉದ್ದೇಶವನ್ನೂ ತಿಳಿಸಬೇಕಾಗಿಲ್ಲ. ಆದರೆ ಈ ಪ್ರಯಾಣಿಕರ ಸ್ವಯಂ ಹೊಣೆಗಾರಿಕೆ ಹೆಚ್ಚಿಸಲಾಗಿದೆ.

ವ್ಯಾಪಾರಿಗಳು, ವಿದ್ಯಾರ್ಥಿಗಳು, ಕಾರ್ವಿುಕರು, ಸಾರಿಗೆ ಮಧ್ಯಂತರ ಪ್ರಯಾಣಿಕರು ಇತರರಿಗೆ ಇದು ಅನ್ವಯಿಸಲಿದ್ದು, ಪರಿಷ್ಕೃತ ಶಿಷ್ಟಾಚಾರದ ಸುತ್ತೋಲೆ ಯಥಾವತ್ ಜಾರಿಗೆ ತರಬೇಕು ಎಂದು ಜಿಲ್ಲಾ ಆಡಳಿತ ಮತ್ತು ಬಿಬಿಎಂಪಿ ಆಯುಕ್ತರಿಗೆ ಸರ್ಕಾರ ಸೂಚಿಸಿದೆ.

ಯಾವುದೆಲ್ಲ ರದ್ದು?:

  • ಸೇವಾ ಸಿಂಧು ಪೋರ್ಟಲ್​ನಲ್ಲಿ ನೋಂದಣಿ
  • ಗಡಿ, ಬಸ್, ರೈಲ್ವೆ ಮತ್ತು ವಿಮಾನ ನಿಲ್ದಾಣಗಳ ಪ್ರವೇಶ ಮತ್ತು ವೈದ್ಯಕೀಯ ತಪಾಸಣೆ
  • ಜಿಲ್ಲೆಯ ಸ್ವೀಕರಿಸುವ ಕೇಂದ್ರಗಳಲ್ಲಿ ತಪಾಸಣೆ
  • ಪ್ರಯಾಣಿಕರ ವರ್ಗೀಕರಣ
  • ಕೈಗಳ ಮೇಲೆ ಮುದ್ರೆ ಹಾಕುವುದು
  • 14 ದಿನಗಳ ಕ್ವಾರಂಟೈನ್
  • ಬೇರ್ಪಡಿಸುವಿಕೆ, ಪರೀಕ್ಷಿಸುವಿಕೆ
  • ಮನೆ ಬಾಗಿಲಿಗೆ ಪೋಸ್ಟರ್ ಅಂಟಿಸುವುದು, ನೆರೆ-ಹೊರೆಯವರು/ ನಿವಾಸ ಕಲ್ಯಾಣ ಸಂಘ/ ಅಪಾರ್ಟ್​ವೆುಂಟ್ ಮಾಲೀಕರ ಸಂಘಗಳಿಗೆ ಮಾಹಿತಿ.

ಪಂಚಾಯಿತಿ/ ವಾರ್ಡ್ ಮಟ್ಟದ ತಂಡಗಳಿಂದ ಮೇಲ್ವಿಚಾರಣೆ, ಫ್ಲೈಯಿಂಗ್ ಸ್ಕಾ್ವಡ್, ಐವಿಆರ್​ಎಸ್ ಕಾಲ್ ಸೆಂಟರ್​ಗೆ ಹೋಗುವ ಕರೆಗಳು, ಕ್ವಾರಂಟೈನ್ ವಾಚ್ ಅಪ್ಲಿಕೇಷನ್ ಮುಖೇನ ನಿಗಾ ಸೇರಿ ಮನೆ ಸಂಪರ್ಕ ತಡೆ. ಹೊರ ರಾಜ್ಯಗಳ ಪ್ರಯಾಣಿಕರ ಜವಾಬ್ದಾರಿ: 

  1. ಕರೊನಾ ಲಕ್ಷಣರಹಿತರು ಎಂದಿನಂತೆ ಕೆಲಸ, ಕಾರ್ಯಗಳಲ್ಲಿ ತೊಡಗಿಸಿಕೊಳ್ಳ ಬಹುದು. ರೋಗ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ವೈದ್ಯಕೀಯ ಸಮಾಲೋಚನೆ ಪಡೆಯುವುದು. ಇಲ್ಲವೆ, ಆಪ್ತಮಿತ್ರ ಸಹಾಯವಾಣಿ 14410ಗೆ ಕರೆ ಮಾಡುವುದು.
  2. ರಾಜ್ಯಕ್ಕೆ ಬರುವ ವೇಳೆ ಕರೊನಾ ರೋಗ ಲಕ್ಷಣವುಳ್ಳವರು ಇಲ್ಲವೇ ಜ್ವರ, ಕೆಮ್ಮು, ಶೀತ ಇತ್ಯಾದಿ ಕಂಡು ಬಂದರೆ ಸ್ವಯಂಪ್ರತ್ಯೇಕವಾಗಿರಬೇಕು. ತಪ್ಪದೆ ವೈದ್ಯರ ಸಮಾಲೋಚನೆ ಪಡೆಯಬೇಕು. ಇಲ್ಲವೆ, ಆಪ್ತಮಿತ್ರ ಸಹಾಯವಾಣಿಗೆ ಕರೆ ಮಾಡಬೇಕು.
  3. ರೋಗಲಕ್ಷಣದ ಸ್ವಯಂ ವರದಿ ಮಾಡುವಿಕೆ ಮಹತ್ವ, ಸ್ವಯಂಪ್ರತ್ಯೇಕತೆ, ರೋಗಲಕ್ಷಣವುಳ್ಳವರು ಪರೀಕ್ಷೆ ಮಾಡಿಸುವ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳು ಮತ್ತು ಬಿಬಿಎಂಪಿ ಮಾಹಿತಿ, ಸಂವಹನ ಮತ್ತು ಅರಿವು ಅಭಿಯಾನ ಆಯೋಜಿಸುವುದು.

ನಾಲ್ವರಿಗೆ ಕೋವ್ಯಾಕ್ಸಿನ್ ಎರಡನೇ ಡೋಸ್: ಬೆಳಗಾವಿ: ಕರೊನಾ ವೈರಸ್ ನಿಯಂತ್ರಣಕ್ಕಾಗಿ ದೇಶಿಯವಾಗಿ ಸಿದ್ಧಪಡಿಸಿರುವ ‘ಕೋವ್ಯಾಕ್ಸಿನ್’ನ ಮಾನವರ ಮೇಲಿನ ಪ್ರಯೋಗವು ನಗರದ ಜೀವನ ರೇಖಾ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು, ನಾಲ್ವರು ಆರೋಗ್ಯವಂತ ವ್ಯಕ್ತಿಗಳಿಗೆ ಕೋವ್ಯಾಕ್ಸಿನ್ 2ನೇ ಡೋಸ್ ನೀಡಲಾಗಿದೆ. ಲಸಿಕೆ ನೀಡಿರುವ ನಾಲ್ವರು ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಡ್ಡ ಪರಿಣಾಮವಾಗಿಲ್ಲ. ಎಲ್ಲರೂ ಅವರವರ ಮನೆಗಳಲ್ಲೇ ಇದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಪ್ರಯೋಗಕ್ಕೊಳಗಾಗಿರುವ ನಾಲ್ವರು ವ್ಯಕ್ತಿಗಳ ರೋಗ ನಿರೋಧಕ ಶಕ್ತಿ ಪರಿಶೀಲನೆ ಮಾಡಲಾಗುವುದು ಎಂದು ಜೀವನ ರೇಖಾ ಆಸ್ಪತ್ರೆಯ ನಿರ್ದೇಶಕ ಡಾ. ಅಮಿತ್ ಭಾತೆ ತಿಳಿಸಿದ್ದಾರೆ.

ಸಾಮಾಜಿಕ ಕ್ಲಬ್​ಗಳಿಗೆ ಅನುಮತಿ: ಕ್ರೀಡಾಪಟುಗಳ ಅಭ್ಯಾಸಕ್ಕೆ ಅನುಕೂಲ ಮಾಡಿಕೊಡಲೆಂದು ಕ್ರೀಡಾ ಸಮುಚ್ಚಯ ಮತ್ತು ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಲ್ಲದೆ ಕ್ರೀಡಾ ಚಟುವಟಿಕೆಗಳನ್ನು ಪುನರಾರಂಭಿಸಲು ಅನುಮತಿ ನೀಡಲಾಗಿದೆ. ಕೇಂದ್ರದ ನಿರ್ದೇಶನ, ರಾಜ್ಯ ಸರ್ಕಾರದ ಆದೇಶ ಮತ್ತು ಮಾರ್ಗಸೂಚಿ ಪಾಲನೆ ಷರತ್ತಿಗೆ ಒಳಪಟ್ಟು ಸಾಮಾಜಿಕ ಕ್ಲಬ್​ಗಳಲ್ಲಿ ಕ್ರೀಡಾ ಚಟುವಟಿಕೆ ನಡೆಸಲು ಹಾಗೂ ಮೇಜಿನ ಮೇಲೆ ಆಹಾರ ವ್ಯವಸ್ಥೆ ಕಲ್ಪಿಸಲು ಅನುಮತಿ ನೀಡಲಾಗಿದೆ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ (ವಿಪತ್ತು ನಿರ್ವಹಣೆ) ಅಂಜುಂ ಪರ್ವೆಜ್ ಸ್ಪಷ್ಟಪಡಿಸಿದ್ದಾರೆ. ಚಿತ್ರಮಂದಿರಗಳು, ಈಜುಗೊಳ, ಉದ್ಯಾನವನ, ಬಾರ್​ಗಳು, ಸಭಾಂಗಣಗಳು, ಅಸೆಂಬ್ಲಿ ಹಾಲ್, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಧಾರ್ವಿುಕ ಸಭೆ-ಸಮಾರಂಭಗಳು ಮೇಲಿನ ನಿರ್ಬಂಧ ಮುಂದುವರಿಯಲಿದೆ ಎಂದು ಹೇಳಿದ್ದಾರೆ.