ಕೋಲಾರ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ಅಪರ ಜಿಲ್ಲಾಧಿಕಾರಿ ಮಂಗಳಾ ಅವರು ಶಾಲೆಯಲ್ಲಿ ಬಿಸಿಯೂಟ ಪರಿಶೀಲನೆ ನಡೆಸಿದರು. ರಾಜೇಂದ್ರಕುಮಾರ್​, ಗೋಪಾಲಕೃಷ್ಣ, ಅನಿತಾ, ಸಿದ್ದೇಶ್ವರಿ ಇದ್ದರು. 
ನ್ಯೂಸ್

ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸೂಚನೆ

ಕಿರುವಾರ ಎಸ್.ಸುದರ್ಶನ್

ಕೋಲಾರ: ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಗೆ ಅಪರ ಜಿಲ್ಲಾಧಿಕಾರಿ ಎಸ್​.ಎಂ.ಮಂಗಳಾ ಅವರು ಸೋಮವಾರ ಭೇಟಿ ನೀಡಿ, ಮಕ್ಕಳ ದಾಖಲಾತಿ, ಬೋಧನೆ, ಬಿಸಿಯೂಟ ವಿತರಣೆ ಕುರಿತು ಪರಿಶೀಲಿಸಿದರು.

ಶ್ರಾವಣ ಮಾಸದ ಹಿನ್ನೆಲೆಯಲ್ಲಿ ಕೆಲ ಮಕ್ಕಳು ಮೊಟ್ಟೆ ನಿರಾಕರಿಸಿ ಬಾಳೆ ಹಣ್ಣು ಪಡೆಯುತ್ತಿರುವ ಕುರಿತು ಗಮನಹರಿಸಿದ ಮಂಗಳಾ ಅವರು, ಸರ್ಕಾರ ಮೊಟ್ಟೆ ನೀಡುತ್ತಿರುವ ಉದ್ದೇಶ ಮಕ್ಕಳನ್ನು ಕಾಡುತ್ತಿರುವ ಅಪೌಷ್ಟಿಕತೆ ಹಾಗೂ ಅನಿಮಿಯ ನಿವಾರಣೆಗೆ ಒತ್ತು ನೀಡುವುದಾಗಿದೆ. ಮಕ್ಕಳು ಮೊಟ್ಟೆ ತಿನ್ನಬೇಕು, ಮೊಟ್ಟೆ ಸೇವನೆಯಿಂದ ಉತ್ತಮ ಆರೋಗ್ಯ, ಅಪೌಷ್ಟಿಕತೆ ನಿವಾರಣೆ ಸಾಧ್ಯ ಎಂದು ಕಿವಿಮಾತು ಹೇಳಿದರು.

ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ದಾಖಲಾತಿ ಹೆಚ್ಚಳ ಮತ್ತು ಅಪೌಷ್ಟಿಕತೆ ನಿವಾರಣೆಗೆ ಬಿಸಿಯೂಟ, ಮೊಟ್ಟೆ, ಕ್ಷೀರಭಾಗ್ಯ ನೀಡಿದ್ದು, ಆಹಾರದ ಗುಣಮಟ್ಟ ಉತ್ತಮವಾಗಿರಲಿ, ಶುಚಿ, ರುಚಿಗೆ ಒತ್ತು ನೀಡಬೇಕು ಎಂದು ಸಿಬ್ಬಂದಿಗೆ ಸೂಚಿಸಿದರು.

ಮೆನು ತಕ್ಕಂತೆ ಅಡುಗೆ ಮಾಡಿ, ಅಡುಗೆ ಮನೆ ಮತ್ತು ಸುತ್ತ ಶುಚಿತ್ವ ಕಾಪಾಡಿ, ಸಾಂಬಾರ್​ ಮಾಡುವಾಗ ಸೊಪ್ಪು ಹೆಚ್ಚಾಗಿ ಬಳಸಿ, ಮಕ್ಕಳಿಗೆ ನಿಗದಿಯಾಗಿರುವಂತೆ ತರಕಾರಿ, ಬೇಳೆಗಳನ್ನು ಹಾಕಿ ಸಾಂಬಾರ್​ ಮಾಡಿ, ಮಕ್ಕಳ ಆರೋಗ್ಯದ ಕಡೆ ಗಮನ ಇರಬೇಕು ಎಂದರು.

ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ ಹಿಂದೆ ತಾವು ಕೋಲಾರದ ತಹಸೀಲ್ದಾರ್​ ಆಗಿದ್ದಾಗ ಜಮೀನು ಮಂಜೂರು ಮಾಡಲಾಯಿತು. ಗ್ರಾಮೀಣ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಈ ಶಾಲೆಯ ಪರಿಸರ ಹೇಳಿ ಮಾಡಿಸಿದಂತಿದೆ. ಬೆಟ್ಟದ ಸುಂದರ ತಪ್ಪಲಲ್ಲಿ ಶಾಲೆ ಇದ್ದು, ಗಿಡಮರಗಳಿಂದ ಕಂಗೊಳಿಸುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಶಾಲೆಯ ಆವರಣದಲ್ಲಿ ಬ್ಯಾಸ್ಕೆಟ್​ ಬಾಲ್​, ವಾಲಿಬಾಲ್​ ಕ್ರೀಡಾಂಗಣವನ್ನು ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಸಮಗ್ರ ಶಿಕ್ಷಣದ ಭಾಗವಾಗಿ ಕ್ರೀಡೆಗಳಿಗೂ ಒತ್ತು ನೀಡುವ ಅಗತ್ಯವಿದೆ. ಕ್ರೀಡಾ ಶಿಕ್ಷಕರಿದ್ದು, ಜಿಲ್ಲೆಗೆ ಉತ್ತಮ ಕ್ರೀಡಾಪಟುಗಳನ್ನು ಕೊಡುಗೆ ನೀಡಿ ಎಂದರು.

ಸರ್ಕಾರಿ ಪ್ರೌಢಶಾಲೆಗೆ ಹೊಂದಿಕೊಂಡಿರುವ ಜಾಗದಲ್ಲಿ ಯೋಧರು ಮತ್ತವರ ಕುಟುಂಬಗಳಿಗಾಗಿ ಸುಸಜ್ಜಿತ ಆಸ್ಪತ್ರೆ ನಿಮಾರ್ಣಕ್ಕೆ ಜಾಗ ಮಂಜೂರು ಮಾಡಿದ್ದು, ಜಿಲ್ಲೆಯಲ್ಲಿರುವ 6,500 ಯೋಧರ ಕುಟುಂಬಗಳ ಆರೋಗ್ಯ ತಪಾಸಣೆಗೆ ಅಗತ್ಯ ಇಸಿಎಚ್​ಎಸ್​ ಆಸ್ಪತ್ರೆಗಾಗಿ ಇದನ್ನು ಬಳಸಿಕೊಳ್ಳುವುದಾಗಿ ತಿಳಿಸಿದರು.

ಯೋಧರ ಆರೋಗ್ಯ ನಿರ್ವಹಣೆಗೆಂದು ಕೇಂದ್ರ ಸರ್ಕಾರ ಈಗಾಗಲೇ 8.50 ಕೋಟಿ ರೂ. ಮಂಜೂರು ಮಾಡಿದೆ. ಆದರೆ ರಾಜ್ಯ ಸರ್ಕಾರ ಜಾಗ ಗುರುತಿಸಿ ಕೊಡಲಿಲ್ಲ ಎಂಬ ಅಪವಾದವಿದ್ದು, ಜಾಗ ನೀಡಲು ಜಿಲ್ಲಾಡಳಿತ ಕ್ರಮವಹಿಸಿದೆ ಎಂದರು.

ಕಂದಾಯ ನಿರೀಕ್ಷಕ ರಾಜೇಂದ್ರ ಕುಮಾರ್​, ಗ್ರಾಮ ಲೆಕ್ಕಾಧಿಕಾರಿ ಅನಿತಾ, ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಗೋಪಾಲಕೃಷ್ಣ, ಮಾಜಿ ಉಪಾಧ್ಯಕ್ಷ ವೈ.ಮುನಿಯಪ್ಪ, ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸಿದ್ದೇಶ್ವರಿ, ಶಿಕ್ಷಕರಾದ ಭವಾನಿ, ವೆಂಕಟರೆಡ್ಡಿ, ಸುಗುಣಾ, ಶ್ವೇತಾ, ಲೀಲಾ, ರಮಾದೇವಿ, ಚೈತ್ರಾ, ಶ್ರೀನಿವಾಸಲು ಇದ್ದರು.