ನ್ಯೂಸ್

ಕಾನೂನು ಉಲ್ಲಂಘಿಸಿ ತೆಂಗು, ಅಡಕೆ ಮರ ಕಡಿಯಲು ನೆರವಾದ ಆರೋಪದಲ್ಲಿ ಗುಬ್ಬಿ ತಹಸೀಲ್ದಾರ್ ಮಮತಾ ಎತ್ತಂಗಡಿ

ಗುಬ್ಬಿ (ತುಮಕೂರು): ತಿಪ್ಪೂರು ಗ್ರಾಮದಲ್ಲಿ ಕಾನೂನು ಉಲ್ಲಂಘಿಸಿ ತೆಂಗು, ಅಡಕೆ ಮರ ಕಡಿಯಲು ನೆರವಾದ ಆರೋಪದಲ್ಲಿ ತಹಸೀಲ್ದಾರ್ ಮಮತಾ ಅವರನ್ನು ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ.

ವಿವಾದದ ಬಗ್ಗೆ ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿ ಪ್ರಕಟವಾದ ಹಿನ್ನೆಲೆಯಲ್ಲಿ ಸರ್ಕಾರ ಮುಜುಗರದಿಂದ ಪಾರಾಗಲು ಈ ಕ್ರಮ ಕೈಗೊಂಡಿದೆ. ಗ್ರಾಮಲೆಕ್ಕಿಗ ಮುರಳಿ ಅವರನ್ನು ಮಂಗಳವಾರ ಅಮಾನತುಗೊಳಿಸಿ ಡಿಸಿ ಡಾ.ಕೆ.ರಾಕೇಶ್​ಕುಮಾರ್ ವಿವಾದ ತಣ್ಣಗಾಗಿಸಲು ಯತ್ನಿಸಿದ್ದರು. ಆದರೆ, ಸಂಘಟನೆಗಳ ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ತಹಸೀಲ್ದಾರ್ ತಲೆದಂಡವಾಗಿದೆ.

ಮತ್ತೊಂದೆಡೆ ಕರ್ನಾಟಕ ಕಿಸಾನ್ ಕಾಂಗ್ರೆಸ್ ಕೂಡ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ತಿಪ್ಪೂರು ವೃತ್ತದ ಗ್ರಾಮಲೆಕ್ಕಿಗನ ವಿರುದ್ಧ ಮಾ.18ರಂದು ದೂರು ಸಲ್ಲಿಸಲು ಮುಂದಾಗಿರುವುದು ಹಿರಿಯ ಅಧಿಕಾರಿಗಳ ತಲೆನೋವು ಹೆಚ್ಚಿಸಿದೆ.