ನ್ಯೂಸ್

GST ಸರಳೀಕರಣದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ. ನಷ್ಟ: CM ಸಿದ್ದರಾಮಯ್ಯ

ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಜಿಎಸ್​​​ಟಿಯನ್ನು ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದರು. ಜಿಎಸ್​​ಟಿ ಉತ್ಸವ ಆಚರಿಸುವಂತೆ ಕೇಂದ್ರ ಸರ್ಕಾರ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, 2017ರಲ್ಲಿ ಕೇಂದ್ರ ಸರ್ಕಾರವೇ GST ಯನ್ನು ಜಾರಿಗೆ ತಂದು GST ದರ ನಿಗದಿಪಡಿಸಿದರು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ ಪಡೆದಿರುವ ಕೇಂದ್ರಸರ್ಕಾರ, ಆ ಹಣವನ್ನು ಮರಳಿ ನೀಡುವರೇ? ತಾವೇ ಹೆಚ್ಚಿಸಿದ GST ದರವನ್ನು ತಾವೇ ಕಡಿಮೆ ಮಾಡಿ, ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುವ ಕೆಲಸದಲ್ಲಿ ಕೇಂದ್ರ ತೊಡಗಿದೆ. ಬಿಹಾರದ ಚುನಾವಣೆಯಿರುವ ಕಾರಣ, GST ಯನ್ನು ಸರಳೀಕರಣಗೊಳಿಸಿ, ಕಡಿತಗೊಳಿಸಿದ್ದೇವೆ ಎಂದು ಹೇಳಿಕೊಳ್ಳುವ ಅವಶ್ಯಕತೆಯಿಲ್ಲ ಎಂದು ವ್ಯಂಗ್ಯವಾಡಿದರು.

ರಾಜ್ಯಕ್ಕೆ 17,000 ಕೋಟಿ ರೂ. ಖೋತಾ

ಕೇಂದ್ರದಿಂದ ತೆರಿಗೆ ಹಣವಾಗಿ ಕೇವಲ 3,200 ಕೋಟಿ ರೂ.ಗಳನ್ನು ರಾಜ್ಯಕ್ಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಉತ್ತರಪ್ರದೇಶಕ್ಕೆ ಶೇ.18 ರಷ್ಟು ನೀಡುತ್ತಿದ್ದು, ರಾಜ್ಯಕ್ಕೆ ಕೇವಲ ಶೇ. 3.5 ರಷ್ಟು ನೀಡುತ್ತಿರುವುದು ಅನ್ಯಾಯ. ಕರ್ನಾಟಕ 4.5 ಲಕ್ಷ ಕೋಟಿ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡಿದರೆ, ನಮಗೆ ರೂಪಾಯಿಗೆ ಕೇವಲ 14 ಪೈಸೆ ಮಾತ್ರ ರಾಜ್ಯ ದೊರೆಯುತ್ತದೆ. 15 ನೇ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಅನುದಾನವನ್ನು ಕೇಂದ್ರ ವಿತ್ತಸಚಿವರು ರದ್ದುಪಡಿಸಿದರು ಎಂದರು.

ಆಯೋಗದ ಶಿಫಾರಸ್ಸಿನಂತೆ 5,490 ಕೋಟಿ ಹಾಗೂ ಕೆರೆಗಳ ಅಭಿವೃದ್ದಿ 3,000 ಕೋಟಿ, ರಸ್ತೆ ನಿರ್ಮಾಣಕ್ಕೆ 3,000 ಕೋಟಿ, ಭದ್ರಾ ಮೇಲ್ದಂಡೆ ಯೋಜನೆಗೆ 5000 ಕೊಟಿ ರೂ.ಗಳ ಅನುದಾನವನ್ನು ನಮಗೆ ನೀಡಲಾಗಿಲ್ಲ. ಒಟ್ಟಾರೆ 17000 ಕೋಟಿ ರೂ. ಬರಬೇಕಾಗಿದ್ದ ಅನುದಾನ ಖೋತಾ ಆಗಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅಗತ್ಯಬಿದ್ದರೆ ನ್ಯಾಯಾಲಯದ ನೆರವು ಪಡೆದು ಕೇಂದ್ರದ ಅನುದಾನ ಪಡೆಯಲಾಗುವುದು ಎಂದರು.

ಅ.7 ರೊಳಗೆ ಸಮೀಕ್ಷೆ ಪೂರ್ಣ!

ರಾಜ್ಯದಲ್ಲಿ ಜಾತಿಸಮೀಕ್ಷೆ ಕಾರ್ಯದ ಪ್ರಗತಿ ಬಗ್ಗೆ ಪ್ರತಿಕ್ರಿಯೆ ನೀಡಿ, ರಾಜ್ಯದಲ್ಲಿ ಈಗಾಗಲೇ ಸುಮಾರು 80 ಲಕ್ಷ ಮನೆಗಳಿಂದ 3 ಕೋಟಿ ಜನಸಂಖ್ಯೆಯ ಸಮೀಕ್ಷೆ ಪೂರ್ಣಗೊಂಡಿದ್ದು, ಅಕ್ಟೋಬರ್ 7ರೊಳಗೆ ಸಮೀಕ್ಷೆ ಕಾರ್ಯ ಮುಗಿಯುವ ಭರವಸೆಯಿದೆ. 1.80 ಕೋಟಿ ಕುಟುಂಬಗಳ ಸಮೀಕ್ಷೆ ನಡೆಯಬೇಕಿದೆ. ಸಮೀಕ್ಷೆಯ ಪ್ರಗತಿಯನ್ನು ಗಮನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ರಾಜಕಾರಣಕ್ಕಾಗಿ ಆರೋಪ

ವಿಪಕ್ಷ ನಾಯಕ ಅಶೋಕ್ ರವರು ರೈತರ ಸಮಸ್ಯೆ ಬಗೆಹರಿಸದಿದ್ದರೆ ಸರ್ಕಾರ ಇದ್ದರೂ ಸತ್ತಂತೆಯೇ ಎಂದು ಹೇಳಿಕೆ ನೀಡಿರುವ ಬಗ್ಗೆ ಉತ್ತರಿಸಿ, ಅಶೋಕ್ ಅವರು ವಿಪಕ್ಷದ ನಾಯಕರಾಗಿದ್ದರೂ, ಆರ್ ಎಸ್ ಎಸ್ ನವರ ನಿರ್ದೇಶನದಂತೆ ಮಾತನಾಡುತ್ತಾರೆ. ಅಶೋಕ್ ರವರು ರಾಜಕಾರಣಕ್ಕೆ ಆರೋಪ ಮಾಡುತ್ತಿದ್ದಾರೆ ಎಂದರು.