ನ್ಯೂಸ್

ತೆರಿಗೆ ವ್ಯವಸ್ಥೆಗೆ ಸರ್ಜರಿ: ಅಗ್ಗವಾಗಲಿದೆ ಚಿಕಿತ್ಸೆ.. ಈ ಔಷಧಿಗಳ ಮೇಲೆ ಜಿಎಸ್‌ಟಿ ಇರುವುದಿಲ್ಲ! GST Council

GST Council : ನಿನ್ನೆ (ಸೆ.3) ನಡೆದ GST ಮಂಡಳಿ ಸಭೆಯ ಮೊದಲ ದಿನದಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಲವಾರು ಘೋಷಣೆಗಳನ್ನು ಮಾಡಿದ್ದಾರೆ. ಸೆಪ್ಟೆಂಬರ್ 22 ರಿಂದ ಹೊಸ GST ಸ್ಲ್ಯಾಬ್ ದರಗಳನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ. ಈ ಹಿಂದೆ ಜಿಎಸ್​ಟಿಯಲ್ಲಿ 4 ಸ್ಲ್ಯಾಬ್​ಗಳಿದ್ದವು. ಅದನ್ನು ಕೇವಲ ಎರಡು ಸ್ಲ್ಯಾಬ್‌ಗಳಿಗೆ (5 ಮತ್ತು 18 ಪ್ರತಿಶತ) ಇಳಿಸಲಾಗಿದೆ.

ಪ್ರಸ್ತುತ GST ಯಲ್ಲಿರುವ 12 ಮತ್ತು 28 ಪ್ರತಿಶತ ಸ್ಲ್ಯಾಬ್‌ಗಳನ್ನು ತೆಗೆದುಹಾಕಲು ಸರ್ಕಾರಿ ನಿರ್ಧರಿಸಿದೆ. ಅಲ್ಲದೆ, ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮಾ ಪ್ರೀಮಿಯಂ ಮೇಲಿನ GST ಅನ್ನು ಸಂಪೂರ್ಣವಾಗಿ ರದ್ದುಗೊಳಿಸಲು ನಿರ್ಧಾರ ತೆಗೆದುಕೊಂಡಿದೆ. ಈ ಹಿಂದೆ, ಇವುಗಳ ಮೇಲೆ 18% ಜಿಎಸ್​ಟಿ ಇತ್ತು. ಇದೀಗ ಭಾರಿ ಬದಲಾವಣೆ ಆಗಿದ್ದು, ಸಾಮಾನ್ಯ ಜನರಿಗೆ ಬಿಗ್​ ರಿಲೀಫ್​ ನೀಡುತ್ತದೆ. ಅಷ್ಟೇ ಅಲ್ಲ, ಅನೇಕ ರೀತಿಯ ಔಷಧಗಳು ಮತ್ತು ವೈದ್ಯಕೀಯ ಸಾಧನಗಳ ಮೇಲೆಯೂ ಪರಿಹಾರವನ್ನು ನೀಡಲಾಗಿದೆ.

56ನೇ ಜಿಎಎಸ್​ಟಿ ಕೌನ್ಸಿಲ್ ಸಭೆಯ ನಂತರ ಮಾತನಾಡಿದ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿಮಾ ಸೇವೆಗಳ ಮೇಲಿನ ಅಸ್ತಿತ್ವದಲ್ಲಿರುವ 18% ಜಿಎಸ್​ಟಿಯನ್ನು ಎರಡು-ಮೂರು ವಿಭಿನ್ನ ವರ್ಗಗಳಾಗಿ ವಿಂಗಡಿಸಲಾಗುವುದು ಎಂದು ಹೇಳಿದರು. ಟರ್ಮ್ ಲೈಫ್, ಯುಲಿಪ್ ಅಥವಾ ಎಂಡೋಮೆಂಟ್ ಪಾಲಿಸಿಗಳು, ಅವುಗಳ ಮರುವಿಮೆ ಮತ್ತು ಎಲ್ಲ ವೈಯಕ್ತಿಕ ಜೀವ ವಿಮಾ ಪಾಲಿಸಿಗಳ ಮೇಲೆ ಜಿಎಸ್​ಟಿ ವಿಧಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇದು ಸಾಮಾನ್ಯ ಜನರಿಗೆ ವಿಮೆಯನ್ನು ಖರೀದಿಸಲು ಸುಲಭವಾಗುತ್ತದೆ. ದೇಶದಲ್ಲಿ ವಿಮಾ ವ್ಯಾಪ್ತಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಔಷಧಗಳ ಪಟ್ಟಿ ಇಲ್ಲಿದೆ

ಇನ್ನು ರೋಗಿಗಳು ಬಳಸುವ 33 ಬಗೆಯ ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ಶೂನ್ಯಕ್ಕೆ ಇಳಿಸಿದೆ. ಇದಕ್ಕೂ ಮೊದಲು, ಇವುಗಳ ಮೇಲಿನ ಜಿಎಸ್‌ಟಿ ದರವು ಶೇ. 12 ರಷ್ಟಿತ್ತು. ಇದೀಗ ಜಿಎಸ್​ಟಿ ಬದಲಾವಣೆಯಿಂದ ಈ ಕೆಳಗಿನ ಔಷಧಿಗಳ ಮೇಲೆ ಜಿಎಸ್​ಟಿ ಇರುವುದಿಲ್ಲ..

* ಅಸ್ಸಿಮಿನಿಬ್ (Asciminib)

* ಒನಾಸೆಮ್ನೋಜೀನ್ ಅಬೆಪರ್ವೋವೆಕ್ (Onasemnogene abeparvovec)

* ಮೆಪೊಲಿಜುಮಾಬ್ (Mepolizumab)

* ಪೆಗಿಲೇಟೆಡ್ ಲಿಪೊಸೋಮಲ್ ಇರಿನೋಟೆಕಾನ್ (Pegylated Liposomal Irinotecan)

* ಡರಟುಮುಮಾಬ್ (Daratumumab)

* ಅಗಲ್ಸಿಡೇಸ್ ಆಲ್ಫಾ (Agalsidase alfa)

* ಅಲಿರೋಕುಮಾಬ್ (Alirocumab)

* ಇವೊಲೊಕುಮಾಬ್ (Evolocumab)

* ಟೆಕ್ಲಿಸ್ಟಮಾಬ್ (Teclistamab)

* ಅಮಿವಂತಮಾಬ್ (Amivantamab)

* ಅಲೆಕ್ಟಿನಿಬ್ (Alectinib)

* ರಿಸ್ಡಿಪ್ಲಾಮ್ (Risdiplam)

* ಒಬಿನುಟುಜುಮಾಬ್ (Obinutuzumab)

* ಪೊಲಾಟುಜುಮಾಬ್ ವೆಡೋಟಿನ್ (Polatuzumab vedotin)

* ಎಂಟ್ರೆಕ್ಟಿನಿಬ್ (Entrectinib)

* ಅಟೆಝೋಲಿಜುಮಾಬ್ (Atezolizumab)

* ಸ್ಪೆಸೊಲಿಮಾಬ್ (Spesolimab)

* ವೆಲಾಗ್ಲುಸೆರೇಸ್ ಆಲ್ಫಾ (Velaglucerase Alpha)

* ಅಗಲ್ಸಿಡೇಸ್ ಆಲ್ಫಾ (Agalsidase Alfa)

* ರುರಿಯೊಕ್ಟೊಕಾಗ್ ಆಲ್ಫಾ ಪೆಗೋಲ್ (Rurioctocog Alpha Pegol)

* ಇಡರ್ಸಲ್ಫಟೇಸ್ (Idursulphatase)

ಇತ್ಯಾದಿಗಳು ಸೇರಿದ್ದು, ಇವುಗಳಲ್ಲಿ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸುವ ಔಷಧಿಗಳೂ ಸೇರಿವೆ.

ಅನೇಕ ಔಷಧಿಗಳ ಮೇಲಿನ ಜಿಎಸ್‌ಟಿಯನ್ನು ಶೇ. 18 ರಿಂದ 5 ಕ್ಕೆ ಇಳಿಸಲಾಗಿದೆ. ಇದರೊಂದಿಗೆ, ಥರ್ಮಾಮೀಟರ್‌ಗಳು, ವೈದ್ಯಕೀಯ ಆಮ್ಲಜನಕ, ರೋಗನಿರ್ಣಯ ಕಿಟ್‌ಗಳು, ಗ್ಲುಕೋಮೀಟರ್‌ಗಳು, ಪರೀಕ್ಷಾ ಪಟ್ಟಿಗಳು ಮತ್ತು ಕನ್ನಡಕಗಳ ಮೇಲಿನ ಜಿಎಸ್‌ಟಿ ದರವನ್ನು 5% ಕ್ಕೆ ಇಳಿಸಲಾಗಿದೆ. ಇದಕ್ಕೂ ಮೊದಲು, ಇವುಗಳ ಮೇಲೆ ಜಿಎಸ್‌ಟಿಯನ್ನು ಶೇ. 12 ರಿಂದ 18 ಕ್ಕೆ ಸಂಗ್ರಹಿಸಲಾಗಿತ್ತು. ಈ ಬದಲಾವಣೆಯಿಂದಾಗಿ ಸಾಮಾನ್ಯ ಜನರಿಗೆ ತುಂಬಾ ಅನುಕೂಲವಾಗಲಿದೆ. (ಏಜೆನ್ಸೀಸ್​)