ನವದೆಹಲಿ: ಸರ್ಕಾರವು ಮೇ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಯಿಂದ 2.01 ಲಕ್ಷ ಕೋಟಿ ರೂ. ಸಂಗ್ರಹಿಸಿದೆ. 2024ರ ಮೇನಲ್ಲಿ 1.73 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ವಾರ್ಷಿಕ ಆಧಾರದಲ್ಲಿ ಈ ಬಾರಿಯ ಮೇನಲ್ಲಿ ಜಿಎಸ್ಟಿ ಸಂಗ್ರಹ ಶೇಕಡ 16.4ರಷ್ಟು ಹೆಚ್ಚಳ ಕಂಡಿದೆ ಎಂದು ಭಾನುವಾರ ಬಿಡುಗಡೆಯಾದ ಸರ್ಕಾರದ ಅಂಕಿಅಂಶಗಳು ತಿಳಿಸಿವೆ. ಇದಕ್ಕೂ ಮೊದಲು ಅಂದರೆ 2025ರ ಏಪ್ರಿಲ್ನಲ್ಲಿ ದಾಖಲೆಯ 2.37 ಲಕ್ಷ ಕೋಟಿ ರೂ. ಸಂಗ್ರಹವಾಗಿತ್ತು. ಇದು ಸಾರ್ವಕಾಲಿಕ ದಾಖಲೆಯಾಗಿತ್ತು. ಜಿಎಸ್ಟಿ ವರಮಾನ ಸಂಗ್ರಹವು ಸತತ ಎರಡನೇ ತಿಂಗಳಲ್ಲೂ 2 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಾಗಿರುವುದು ಗಮನಾರ್ಹ. ಜಿಎಸ್ಟಿ ಸಂಗ್ರಹ ಪ್ರಮಾಣವು ಇದೇ ಮಟ್ಟದಲ್ಲಿ ಇನ್ನೂ ಒಂದೆರಡು ತಿಂಗಳು ಮುಂದುವರಿದರೆ, ಜಿಎಸ್ಟಿ ದರಗಳನ್ನು ಇನ್ನಷ್ಟು ಸರಳಗೊಳಿಸಲು ಸರ್ಕಾರಕ್ಕೆ ಅನುವಾಗಬಹುದು ಎಂದು ತಜ್ಞರು ಹೇಳಿದ್ದಾರೆ.
ದೊಡ್ಡ ರಾಜ್ಯಗಳಾದ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಜಿಎಸ್ಟಿ ವರಮಾನ ಸಂಗ್ರಹದಲ್ಲಿನ ಏರಿಕೆಯು ಶೇಕಡ 17ರಿಂದ 25ರವರೆಗೆ ಇದೆ. ಆದರೆ, ಈ ರಾಜ್ಯಗಳಂತೆಯೇ ದೊಡ್ಡ ರಾಜ್ಯಗಳಾಗಿರುವ ಗುಜರಾತ್, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಜಿಎಸ್ಟಿ ಸಂಗ್ರಹ ಹೆಚ್ಚಳ ಶೇ.6ರವರೆಗೆ ಮಾತ್ರ ಇದೆ. ಮಧ್ಯಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನದಲ್ಲಿ ಜಿಎಸ್ಟಿ ಸಂಗ್ರಹ ಏರಿಕೆ ಪ್ರಮಾಣ ಶೇ.10ರಷ್ಟಿದೆ.
‘ಬೇರೆ ಬೇರೆ ರಾಜ್ಯಗಳ ಜಿಎಸ್ಟಿ ಸಂಗ್ರಹ ಏರಿಕೆ ಪ್ರಮಾಣದಲ್ಲಿನ ವ್ಯತ್ಯಾಸದ ವಿಚಾರವಾಗಿ, ಆಯಾ ರಾಜ್ಯಗಳಿಗೆ ಮುಖ್ಯವಾದ ವಲಯಗಳನ್ನು ಗಮನದಲ್ಲಿ ಇರಿಸಿಕೊಂಡು ಆಳವಾದ ಪರಿಶೀಲನೆ ಆಗಬೇಕಿದೆ. ದೇಶದಾದ್ಯಂತ ಜಿಎಸ್ಟಿ ಸಂಗ್ರಹ ಪ್ರಮಾಣ ಒಂದೇ ಆಗಿಲ್ಲ. ಇದಕ್ಕೆ ವಲಯವಾರು ಕಾರಣಗಳು ಇರಬಹುದು. ಇದರ ಬಗ್ಗೆ ದತ್ತಾಂಶ ಆಧರಿಸಿ ವಿಶ್ಲೇಷಣೆ ಆಗಬೇಕಿದೆ’ ಎಂದು ಡೆಲಾಯ್್ಟ ಇಂಡಿಯಾ ಪಾಲುದಾರ ಎಂ.ಎಸ್.ಮಣಿ ಹೇಳಿದ್ದಾರೆ.
ಆಂತರಿಕ ವಹಿವಾಟುಗಳಿಂದ ವರಮಾನ ಏರಿಕೆ
ಈ ವರ್ಷದ ಮೇ ತಿಂಗಳಲ್ಲಿ ದೇಶದ ಆಂತರಿಕ ವಹಿವಾಟುಗಳಿಂದ ಬರುವ ಜಿಎಸ್ಟಿ ವರಮಾನವು ಶೇ.13.7ರಷ್ಟು ಏರಿಕೆ ಕಂಡಿದ್ದು, ಅಂದಾಜು 1.50 ಲಕ್ಷ ಕೋಟಿ ರೂ.ಗೆ ತಲುಪಿದೆ. ಆಮದು ಮೂಲಕ ಬರುವ ಜಿಎಸ್ಟಿ ವರಮಾನವು ಶೇಕಡ 25.2ರಷ್ಟು ಹೆಚ್ಚಳ ಕಂಡು 51 ಸಾವಿರ ಕೋಟಿ ರೂ.ಗಳಿಗೆ ತಲುಪಿದೆ.