ನವದೆಹಲಿ: ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹ 1.41 ಲಕ್ಷ ಕೋಟಿ ರೂಪಾಯಿಗೂ ಅಧಿಕವಾಗಿದ್ದು, ಜಿಎಸ್ಟಿ ಜಾರಿಯಾದಾಗಿನಿಂದ ಇಷ್ಟು ದೊಡ್ಡ ಮೊತ್ತದ ಸಂಗ್ರಹ ಇದೇ ಮೊದಲ ಬಾರಿಗೆ ಆಗಿದೆ. ಕೇಂದ್ರೀಯ ಜಿಎಸ್ಟಿ 27,837 ಲಕ್ಷ ಕೋಟಿ ರೂಪಾಯಿ, ರಾಜ್ಯಗಳ ಜಿಎಸ್ಟಿ 35,621 ಕೋಟಿ ರೂಪಾಯಿ ಮತ್ತು ಏಕೀಕೃತ ಜಿಎಸ್ಟಿ 68,481 ಕೋಟಿ ರೂಪಾಯಿ (ಆಮದು ಶುಲ್ಕ 29,599 ಕೋಟಿ ರೂಪಾಯಿ ಸೇರಿ) 9,445 ಕೋಟಿ ರೂಪಾಯಿ (981 ಕೋಟಿ ರೂಪಾಯಿ ಆಮದು ಸೆಸ್ ಸೇರಿ) ಒಟ್ಟಾರೆ 1,41,384 ಕೋಟಿ ರೂಪಾಯಿ ಸರ್ಕಾರಗಳ ಬೊಕ್ಕಸ ಸೇರಿದೆ.
ಮಾರ್ಚ್ನಲ್ಲಿ ಜಿಎಸ್ಟಿ ಸಂಗ್ರಹಕ್ಕೆ (1.23 ಲಕ್ಷ ಕೋಟಿ ರೂಪಾಯಿ) ಹೋಲಿಸಿದರೆ ಏಪ್ರಿಲ್ನ ಆಕರ ಶೇ. 14 ಹೆಚ್ಚಿದೆ. ದೇಶದೊಳಗಿನ ಸಾಗಣೆ ಕೂಡ ಶೇ. 21ರಷ್ಟು ಅಧಿಕವಾಗಿದೆ. ಕಳೆದ ವರ್ಷ ಏಪ್ರಿಲ್ನಲ್ಲಿ ಕೋವಿಡ್ ಕಾರಣ ಲಾಕ್ಡೌನ್ ಜಾರಿಯಲ್ಲಿದ್ದರಿಂದ ಕೇವಲ 32,172 ಕೋಟಿ ರೂಪಾಯಿ ಜಿಎಸ್ಟಿ ಸಂದಾಯವಾಗಿತ್ತು. ಲಾಕ್ಡೌನ್ ನಿಯಮ ಸಿಡಲಗೊಂಡಂತೆ ಜಿಎಸ್ಟಿ ಸಂಗ್ರಹದಲ್ಲೂ ಏರಿಕೆ ಕಾಣಿಸಿತು. ಕಳೆದ ಅಕ್ಟೋಬರ್ನಿಂದ ಜಿಎಸ್ಟಿ ಸಂಗ್ರಹ ಪ್ರತಿ ಒಂದು ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದೆ. ಇದು ಆರ್ಥಿಕತೆ ಚೇತರಿಕೆ ಹಾದಿಯಲ್ಲಿ ಸ್ಥಿರವಾಗಿ ಮುನ್ನಡೆಯುತ್ತಿದೆ ಎಂಬುದನ್ನು ತೋರಿಸುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.
ಮಾರ್ಚ್ ತಿಂಗಳ ಆರ್ಥಿಕ ಚಟುವಟಿಕೆಯಿಂದ ಏಪ್ರಿಲ್ನಲ್ಲಿ ತೆರಿಗೆ ಸಂಗ್ರಹ ಹೆಚ್ಚಿದೆ. ಆದರೆ, ಏಪ್ರಿಲ್ನಲ್ಲಿ ಲಾಕ್ಡೌನ್ ರೀತಿಯ ನಿರ್ಬಂಧಗಳು ಮತ್ತೆ ವಿಧಿಸಲ್ಪಟ್ಟಿರುವುದರಿಂದ ಮೇ ತಿಂಗಳ ಸಂಗ್ರಹದಲ್ಲಿ ಏರುಪೇರಾಗುವ ಎಲ್ಲ ಲಕ್ಷಣ ಇದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.