ನ್ಯೂಸ್

ಗೃಹಜ್ಯೋತಿಯ ಸಹಾಯಧನ ಸರ್ಕಾರದಿಂದಲೇ ಮುಂಗಡವಾಗಿ ಎಸ್ಕಾಂಗಳಿಗೆ ಪಾವತಿ: ಕೆ.ಜೆ.ಜಾರ್ಜ್

ಬೆಂಗಳೂರು:

ಗೃಹ ಜ್ಯೋತಿಯ ಸಹಾಯಧನವನ್ನು ಎಸ್ಕಾಂಗಳಿಗೆ ಸರ್ಕಾರದಿಂದ ಮುಂಗಡವಾಗಿ ಪಾವತಿಸುತ್ತಿದ್ದು, ಗ್ರಾಹಕರಿಂದ ಹಣ ಪಡೆಯುವ ಯಾವುದೇ ಪ್ರಸ್ತಾಪ ಮುಂದಿಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಬೆಳಕು ಭವನದಲ್ಲಿ ಸೋಮವಾರ ಆಯೋಜಿಸಿದ್ದ ಇಲಾಖೆಯ ಸಭೆಯ ಬಳಿಕ ಮಾತನಾಡಿದ ಸಚಿವರು, ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ ಎಂದರು.

ಗೃಹಜ್ಯೋತಿ ಹಣವನ್ನು ಸರ್ಕಾರ ಮುಂಗಡವಾಗಿ ಪಾವತಿಸದಿದ್ದರೆ ಜನರಿಂದ ಪಡೆಯಲು ಕರ್ನಾಟಕ ವಿದ್ಯುತ್‌ಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ)ಎಸ್ಕಾಂಗಳು ಮನವಿ ಮಾಡಿವೆ ಎಂಬುದು ತಪ್ಪು ಕಲ್ಪನೆ. ಸರ್ಕಾರಕ್ಕೆ ಅಂತಹ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಗೃಹ ಬಳಕೆದಾರರಿಗೆ ಉಚಿತವಾಗಿ ವಿದ್ಯುತ್ ಪೂರೈಸುವುದರ ಸಬ್ಸಿಡಿ ಮೊತ್ತವನ್ನು ಸರ್ಕಾರದಿಂದಲೇ ಪಾವತಿ ಮಾಡುವುದಾಗಿಯೂ ಹೇಳಲಾಗಿತ್ತು. ಅದರಂತೆ ಬಜೆಟ್‌ನಲ್ಲಿ ಅನುದಾನ ಮೀಸಲಿಡಲಾಗುತ್ತಿದೆ ಎಂದರು.

ಫೆಬ್ರವರಿ 2025ರವರೆಗಿನ ಗೃಹಜ್ಯೋತಿ ಯೋಜನೆ ಸಹಾಯಧನವನ್ನು ಮುಂಗಡವಾಗಿ ಎಲ್ಲಾ ಎಸ್ಕಾಂಗಳಿಗೆ ಪಾವತಿಸಲಾಗಿದೆ ಎಂದರು.

ಕೆಇಆರ್ ಸಿ (ಸಹಾಯಧನ ಪಾವತಿ ವಿಧಾನ) ನಿಯಮ 2008ರಲ್ಲಿ ವಿದ್ಯುತ್ ಯೋಜನೆಗಳ ಸಹಾಯಧನವು ರಾಜ್ಯ ಸರ್ಕಾರದಿಂದ ಮುಂಗಡವಾಗಿ ಪಾವತಿಯಾಗದಿದ್ದರೆ ಗ್ರಾಹಕರಿಂದ ಪಡೆಯಲು ಎಸ್ಕಾಂಗಳಿಗೆ ಅವಕಾಶ ಕಲ್ಪಿಸುತ್ತದೆ. ಈ ಸಾಮಾನ್ಯ ನಿಯಮವನ್ನೇ ತಪ್ಪಾಗಿ ಗ್ರಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಗೃಹಜ್ಯೋತಿ ಯೋಜನೆ ಜಾರಿಯಾದಾಗಿನಿಂದ ಎಸ್ಕಾಂಗಳಿಗೆ ಮುಂಗಡವನ್ನು ಪಾವತಿಸುತ್ತಿದೆ.

ಹೀಗಾಗಿ, ಗ್ರಾಹಕರಿಂದ ಯೋಜನೆ ಹಣ ಪಡೆಯುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಸಬ್ಸಿಡಿ ಮೊತ್ತವನ್ನು ಗ್ರಾಹಕರಿಂದ ಪಡೆಯಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. 200 ಯೂನಿಟ್ ವರೆಗೆ ಉಚಿತವಾಗಿ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆಯನ್ನು ಯಾವುದೇ ಗೊಂದಲವಿಲ್ಲದೆ ಮುಂದುವರಿಸಿಕೊಂಡು ಹೋಗಲು ಇಂಧನ ಇಲಾಖೆ ಬದ್ಧವಾಗಿದೆ, ಎಂದು ಸಚಿವರಾದ ಜಾರ್ಜ್ ಹೇಳಿದರು.