ಶಿಕಾರಿಪುರದಲ್ಲಿ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಜಂಬರಗಟ್ಟಿ ಮಂಜಪ್ಪ ಉದ್ಘಾಟಿಸಿದರು. ಎಚ್.ಟಿ.ಬಳಿಗಾರ್, ಎಚ್.ಹನುಮಂತಪ್ಪ, ಮಾದೇವಪ್ಪ, ಕೆ.ಎಸ್.ಹುಚ್ರಾಯಪ್ಪ, ಎಚ್.ನಾಗೇಶಪ್ಪ ಇತರರಿದ್ದರು.  
ನ್ಯೂಸ್

ಸಾಲ ಮರುಪಾವತಿಯಿಂದ ಸಂಘದ ಬೆಳವಣಿಗೆ

ಶಿಕಾರಿಪುರ: ಸಹಕಾರ ಕ್ಷೇತ್ರ ಈಗ ವೇಗವಾಗಿ ಬೆಳೆಯುತ್ತಿದೆ. ಸಂಘಗಳಲ್ಲಿನ ನಿಯಮಾವಳಿಗಳು ಸರಳವಾಗಿ ಇರುವುದರಿಂದ ಜನರು ವ್ಯವಹಾರ ನಡೆಸಲು ಇಷ್ಟಪಡುತ್ತಾರೆ ಎಂದು ಜಿಲ್ಲಾ ವಾಲ್ಮೀಕಿ ಸಮಾಜದ ಅಧ್ಯಕ್ಷ ಜಂಬರಗಟ್ಟಿ ಮಂಜಪ್ಪ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಬುಧವಾರ ಆಯೋಜಿಸಿದ್ದ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕವಾಗಿ ಹಿಂದುಳಿದವರು, ಬಡವರು, ಸಣ್ಣ ರೈತರು, ಸಣ್ಣ ವ್ಯಾಪಾರಿಗಳು ಸೇರಿ ಅನೇಕ ಜನರು ಬದುಕು ಕಟ್ಟಿಕೊಳ್ಳಲು ಸಹಕಾರ ಸಂಘಗಳು ಪೂರಕವಾಗಿವೆ ಎಂದರು.
ಸಂಘಗಳು ಏಳಿಗೆ ಆಗಬೇಕಾದರೆ ಉತ್ತಮ ಆಡಳಿತ ಮಂಡಳಿ ಇರಬೇಕು. ಜತೆಗೆ ಸದಸ್ಯರು ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು. ಆಗ ಸಂಘಗಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ಹೇಳಿದರು.
ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ.ಬಳಿಗಾರ್ ಮಾತನಾಡಿ, ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಏಳಿಗೆಗಾಗಿ ಹಾಗೂ ಸಹಕಾರ ಕ್ಷೇತ್ರಕ್ಕಾಗಿ ದುಡಿದ ಮಾಜಿ ಸಿಎಂ ಡಿ. ದೇವರಾಜ ಅರಸು, ಎಲ್.ಜಿ.ಹಾವನೂರು ಅವರನ್ನು ಎಂದಿಗೂ ಮರೆಯುವಂತಿಲ್ಲ ಎಂದು ತಿಳಿಸಿದರು.
ತಾಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ಎಚ್.ಹನುಮಂತಪ್ಪ, ಮಾದೇವಪ್ಪ, ಕೆ.ಎಸ್.ಹುಚ್ರಾಯಪ್ಪ, ಎಚ್.ನಾಗೇಶಪ್ಪ, ವಿದ್ಯಾನಗರ ರಾಮಪ್ಪ, ಹೂವಿನಮಂಡಿ ಸುರೇಶ್, ಸತೀಶಕುಮಾರ್, ಎಂ.ಎಚ್.ಮಲ್ಲಿಕಾರ್ಜುನ್, ಜಗದೀಶ್, ಮಮತಾ ಸಾಲಿ, ಅನ್ನಪೂರ್ಣಮ್ಮ, ಉಮೇಶ್, ಕಿರಿಟ್ ರಾಯ್ಕರ್, ಸುರೇಶ್, ಕರಿಬಸಪ್ಪ, ಇತರರಿದ್ದರು.