ಕೃಷಿ ಇಲಾಖೆಯ ರೈತ ಕರೆ ಕೇಂದ್ರದ ಕಚೇರಿ. 
ನ್ಯೂಸ್

ರೈತರ ಸಮಸ್ಯೆಗಳಿಗೆ ದನಿಯಾದ ಗ್ರೂಪ್ ಟಾಕ್

ನವೀನ ಬಿ.ಎಂ

ನವೀನ್ ಬಿಲ್ಗುಣಿ ಶಿವಮೊಗ್ಗ

ಬೆಳೆ ವಿಮೆ, ಬೆಳೆ ಸರ್ವೇ, ಪಿಎಂ ಕಿಸಾನ್, ಬಿತ್ತನೆ ಕಾರ್ಯ, ಮಳೆ ಕೊರತೆ, ರೋಗ ಮತ್ತು ಕೀಟ ಬಾಧೆ, ಹವಾಮಾನ ವೈಪರೀತ್ಯದ ಜತೆಗೆ ಕೃಷಿ ಇಲಾಖೆಯ 40ಕ್ಕೂ ಅಧಿಕ ಯೋಜನೆಗಳ ಸಮಗ್ರ ಮಾಹಿತಿಯನ್ನು ಸಕಾಲದಲ್ಲಿ ತಲುಪಿಸುವ ಗ್ರೂಪ್ ಟಾಕ್(ಗುಂಪು ಕರೆ) ರೈತರಿಗೆ ವರದಾನವಾಗಿದೆ.

ಅತಿವೃಷ್ಟಿ, ಅನಾವೃಷ್ಟಿ, ದರ ಕುಸಿತದ ನಡುವೆ ಬೆಳೆಗಳನ್ನು ಉಳಿಸಿಕೊಳ್ಳುವ ಮತ್ತು ಕೃಷಿಗೆ ಪೂರಕವಾದ ಸೌಲಭ್ಯ ಕಲ್ಪಿಸುವ ರೈತರ ಗುಂಪು ಕರೆಗೆ ರಾಜ್ಯವ್ಯಾಪಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಾನಾ ಕಾರಣಕ್ಕೆ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹಾಗಾಗಿ ಉತ್ತೇಜನ ನೀಡಲು ಮುಂದಾಗಿರುವ ಕೃಷಿ ಇಲಾಖೆ ಸಬ್ಸಿಡಿ ಸೇರಿ ಹತ್ತು ಹಲವು ಯೋಜನೆಗಳನ್ನು ರೂಪಿಸುತ್ತಿದೆ. ಇದೀಗ ಒಂದೇ ಸೂರಿನಡಿ 8ರಿಂದ 10 ಸಾವಿರ ರೈತರಿಗೆ ಏಕಕಾಲಕ್ಕೆ ದೂರವಾಣಿ ಕರೆ ಮಾಡುವ ಮೂಲಕ ಕೃಷಿ ಸೌಲಭ್ಯಗಳ ಬಳಕೆ ಮತ್ತು ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುತ್ತಿದೆ. ಬೆಂಗಳೂರಿನಲ್ಲಿ ಇ-ಗೌವರ್ನೆನ್ಸ್ ತಂಡವು ಆಯಾ ತಾಲೂಕು ಸಹಾಯಕ ಕೃಷಿ ಇಲಾಖೆ ನಿರ್ದೇಶಕರ ಸಲಹೆ ಮೇರೆಗೆ ಏಕಕಾಲಕ್ಕೆ ಗುಂಪು ಕರೆ ಮಾಡಲಿದೆ. 15ರಿಂದ 20 ನಿಮಿಷದಲ್ಲಿ ಜಿಲ್ಲಾಧಿಕಾರಿಗಳು, ಕೃಷಿ ಇಲಾಖೆ ಜಂಟಿ ನಿರ್ದೇಶಕರು, ಹಿರಿಯ ಅಧಿಕಾರಿಗಳು ಒಳಗೊಂಡಂತೆ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಗುಂಪು ಕರೆ ಮೂಲಕ ಹಂಚಿಕೊಳ್ಳಲಿದ್ದಾರೆ. ಚರ್ಚೆಗೂ ಮುಕ್ತ ಅವಕಾಶ ನೀಡಲಾಗುತ್ತಿದೆ. ಕೃಷಿ ಬಗ್ಗೆ ನಾನಾ ಗೊಂದಲಗಳಿಗೆ ಒಮ್ಮೆಲೆ ಪರಿಹಾರ ಸಿಗುತ್ತಿದೆ. ಹಲವು ಉಪಯೋಗ: ರೈತರಲ್ಲಿ ಹವಮಾನ ಆಧಾರಿತ ಬೆಳೆಗಳನ್ನು ಬೆಳೆಯುವ ಬಗ್ಗೆ ಸಾಕಷ್ಟು ಗೊಂದಲಗಳಿರುತ್ತವೆ. ಯಾವ ಸಮಯದಲ್ಲಿ ಯಾವ ಬೆಳೆ ಬೆಳೆಯಬೇಕು? ಎಷ್ಟು ಪ್ರಮಾಣದಲ್ಲಿ ಗೊಬ್ಬರ, ಔಷಧ ಬಳಸಬೇಕು? ರೋಗ ಬಾಧೆ ನಿಯಂತ್ರಿಸುವುದು ಹೇಗೆ? ಪ್ರತಿ ವರ್ಷ ಮಣ್ಣು ಪರೀಕ್ಷೆ ಮಾಡಿಸಬೇಕೆ? ಕೃಷಿ ಇಲಾಖೆಯಲ್ಲಿ ಏನೆಲ್ಲಾ ಸೌಲಭ್ಯಗಳಿವೆ ಎಂಬಿತ್ಯಾದಿ ಪ್ರಶ್ನೆಗಳು ರೈತರನ್ನು ಕಾಡುವುದು ಸಹಜ. ಅದರಲ್ಲೂ ಮುಂಗಾರು ಮತ್ತು ಹಿಂಗಾರು ಬಿತ್ತನೆ ವೇಳೆ ಸಾಕಷ್ಟು ರೈತರು ನಷ್ಟ ಅನುಭವಿಸುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ದೂರದ ಊರುಗಳಿಂದ ಕೃಷಿ ಇಲಾಖೆ, ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಮಾಹಿತಿ ಪಡೆಯುವುದು ಕಷ್ಟವಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಗುಂಪು ಕರೆ ರೈತರಿಗೆ ನೆರವಾಗಲಿದೆ. ಒಂದೇ ಕರೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಕುಳಿತಲ್ಲೇ ಉತ್ತರ ಸಿಗುತ್ತಿದೆ. ಕೀಟ ಬಾಧೆಗೆ ತಡೆ: ಪ್ರಸಕ್ತ ವರ್ಷ ಭತ್ತ ತೆನೆಗಟ್ಟುವ ಸಂದರ್ಭ ರಾಜ್ಯಾದ್ಯಂತ ಕಂದುಜಿಗಿ ಹುಳು ಬಾಧೆ ತೀವ್ರವಾಗಿತ್ತು. ಸಾವಿರಾರು ಹೆಕ್ಟೇರ್ ಭತ್ತದ ಫಸಲನ್ನು ನಾಶ ಮಾಡಿತ್ತು. ಹೀಗಿದ್ದಾಗ ಎಲ್ಲ ಜಮೀನುಗಳಿಗೆ ಕೃಷಿ ಅಧಿಕಾರಿಗಳು ತೆರಳಿ ಮಾಹಿತಿ ನೀಡುವುದು ಕಷ್ಟ. ಅಂತಹ ಸಂದರ್ಭದಲ್ಲಿ ಗುಂಪು ಕರೆಗಳು ಕೀಟ ಬಾಧೆ ತಡೆಗೆ ನೆರವಾಯಿತು. ರೈತರು ತಮ್ಮ ಭತ್ತಕ್ಕೆ ಆವರಿಸಿದ್ದ ಕೀಟ ಬಾಧೆಯನ್ನು ನಿಯಂತ್ರಣಕ್ಕೆ ತರುವಲ್ಲಿ ಕೃಷಿ ಇಲಾಖೆ, ವಿಜ್ಞಾನಿಗಳು ಕೊಟ್ಟ ಸಲಹೆಗಳು ಪೂರಕವಾಗಿ ಕೆಲಸ ಮಾಡಿದವು ಎನ್ನುತ್ತಾರೆ ರೈತರು. ಏನಿದು ಗುಂಪು ಕರೆ? ಬಹಳಷ್ಟು ರೈತರಿಗೆ ಏನಿದು ಕೃಷಿ ಇಲಾಖೆಯಿಂದ ಯಾರೋ ಫೋನ್ ಮಾಡಿದ್ದಾರೆ. ಯಾರೋ ಮಾತನಾಡುತ್ತಿದ್ದಾರೆ. ಫೋನ್ ಕರೆಯನ್ನು ಕಡಿತಗೊಳಿಸದಂತೆ ಆಗಾಗ್ಗೆ ವಿನಂತಿಯನ್ನೂ ಮಾಡಿಕೊಳ್ಳಲಾಗುತ್ತದೆ. ವಾಸ್ತವವಾಗಿ ಕೃಷಿ ಇಲಾಖೆಯಲ್ಲಿರುವ 46 ಯೋಜನೆಗಳನ್ನು ರೈತರಿಗೆ ಮುಟ್ಟಿಸುವುದೇ ಗುಂಪು ಕರೆಗಳ ಉದ್ದೇಶ. ಜತೆಗೆ ಕೃಷಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ನುರಿತ, ಅನುಭವಿಗಳಿಂದ ರೈತರಿಗೆ ತಲುಪಿಸುವ ಕೆಲಸವನ್ನೂ ಮಾಡಲಾಗುತ್ತಿದೆ. ಬಹಳಷ್ಟು ಬಾರಿ ವಾಟ್ಸ್‌ಆ್ಯಪ್, ಟೆಲಿಗ್ರಾಂನಂತಹ ಗ್ರೂಪ್ ರಚನೆ ಮಾಡಿಕೊಂಡಿದ್ದರೂ ರೈತರನ್ನು ಸುಲಭವಾಗಿ ತಲುಪುವುದು ಕಷ್ಟವಾಗುತ್ತಿತ್ತು. ಅನಕ್ಷರತೆ, ಕೆಲಸದ ಒತ್ತಡದ ನಡುವೆ ಅವುಗಳಿಂದ ಮಾಹಿತಿ ರೈತರಿಗೆ ತಲುಪುತ್ತಿಲ್ಲ. ಹಾಗಾಗಿ ಭೂಮಿ, ಫ್ರೂಟ್ಸ್ ಐಡಿ ಪೋರ್ಟಲ್‌ನಂತಹ ಜಾಲತಾಣದಿಂದ ದತ್ತಾಂಶ ಸಂಗ್ರಹಿಸಿರುವ ಇ-ಗೌವರ್ನನ್ಸ್ ತಾಲೂಕುವಾರು ರೈತರಿಗೆ ಕರೆಗಳನ್ನು ಮಾಡುತ್ತಿದೆ.

ಗ್ರೂಪ್ ಟಾಕ್ ರೈತರಿಗೆ ಸಾಕಷ್ಟು ಉಪಯುಕ್ತವಾಗಿದೆ. ಕೃಷಿ ಇಲಾಖೆಯ 46 ಯೋಜನೆಗಳನ್ನು ರೈತರಿಗೆ ತಿಳಿಸುವುದು ಮುಖ್ಯ ಉದ್ದೇಶ. ಜತೆಗೆ ಹವಾಮಾನ ವೈಪರಿತ್ಯ, ಬೆಳೆ ವಿಮೆ, ಕೀಟಬಾಧೆ ಮತ್ತಿತರರ ಸಂದರ್ಭಗಳಲ್ಲಿ ಸಮಸ್ಯೆಗಳಿಗೆ ಪರಿಹಾರವನ್ನೂ ಕಲ್ಪಿಸುತ್ತಿದೆ. ವಾಟ್ಸ್‌ಆ್ಯಪ್ ಗ್ರೂಪ್‌ಗಳಿದ್ದರೂ ಎಲ್ಲ ಸಮಯಕ್ಕೆ ನೋಡುವುದಕ್ಕೆ ಆಗುವುದಿಲ್ಲ. ಅನಕ್ಷರಸ್ಥರಿದ್ದರೂ ಮಾಹಿತಿ ಪಡೆಯಲು ಗ್ರೂಪ್ ಕರೆಗಳು ನೆರವಾಗುತ್ತಿವೆ. -ಡಾ. ಎಂ.ಕಿರಣ್‌ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ