ನ್ಯೂಸ್

ಕಟ್ಟಡ ಕಾರ್ಮಿಕರಿಗೆ ಗುಂಪು ವಸತಿ ಸಮುಚ್ಛಯ; ಉನ್ನತಾಧಿಕಾರಿಗಳ ಜತೆ ಸಚಿವ ಸಂತೋಷ್ ಲಾಡ್ ಸಮಾಲೋಚನೆ

Bengaluru - Political - Vilas Melagiri

ಬೆಂಗಳೂರು: ಕಟ್ಟಡ ಕಾರ್ಮಿಕರಿಗೆ ವಿವಿಧ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವ ರಾಜ್ಯ ಸರ್ಕಾರ ಈಗ ಗುಂಪು ವಸತಿ ಸಮುಚ್ಛಯ ನಿರ್ಮಿಸಲು ಮುಂದಾಗಿದೆ.

ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನಿವಾಸದಲ್ಲಿ ಈ ಕುರಿತು ಉನ್ನತಾಧಿಕಾರಿಗಳ ಸಭೆ ನಡೆಯಿತು. ಈ ಸಭೆಯಲ್ಲಿ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಕಾರ್ಮಿಕ ಆಯುಕ್ತ ಗೋಪಾಲಕೃಷ್ಣ, ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಿಇಒ ಭಾರತಿ ಪಾಲ್ಗೊಂಡಿದ್ದರು.

ಕಟ್ಟಡ ಕಾರ್ಮಿಕರಿಗೆ ಮಹಾನಗರ ವ್ಯಾಪ್ತಿಯಲ್ಲಿ ಗುಂಪು ವಸತಿ ನಿರ್ಮಿಸಿಕೊಡಲು ಸ್ಪಷ್ಟ ರೂಪುರೇಷೆ ಸಿದ್ಧಪಡಿಸುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಜಾಗ ಗುರುತಿಸಲು ಆದ್ಯತೆ

ಗುಂಪು ವಸತಿ ಸಮುಚ್ಛಯ ನಿರ್ಮಾಣಕ್ಕೆ ಈಗಾಗಲೇ ಹುಬ್ಬಳ್ಳಿಯಲ್ಲಿ ಜಾಗ ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗಳಿಂದ ಈ ಜಾಗವನ್ನು ಹಸ್ತಾಂತರಕ್ಕೆ ಪಡೆಯುವ ಪ್ರಕ್ರಿಯೆ ತ್ವರಿತಗೊಳಿಸಲು ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಹಾನಗರ ವ್ಯಾಪ್ತಿಯಲ್ಲಿ ಮನೆ

ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಬೆಂಗಳೂರು, ಮೈಸೂರು, ಕಲಬುರಗಿ, ಮಂಗಳೂರುಗಳಲ್ಲಿ 5-10 ಎಕರೆ ಜಾಗ ಗುರುತಿಸುವ ಸಂಬಂಧ ಇಲಾಖೆಯಿಂದ ಕ್ಷಿಪ್ರ ಪ್ರಕ್ರಿಯೆ ಆರಂಭಿಸಲು ತೀರ್ಮಾನಿಸಲಾಯಿತು.

ಜಾಗ ಸಿಕ್ಕ ಬಳಿಕ ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಮನೆ ನಿರ್ಮಿಸುವ ಯೋಚನೆಯನ್ನು ಇಲಾಖೆ ಹೊಂದಿದೆ. ಎಷ್ಟು ಮನೆ, ಮನೆ ವೆಚ್ಚ, ಲಾನುಭವಿಗಳ ಆಯ್ಕೆ, ಲಾನುಭವಿಗಳು ಪಾವತಿಸಬೇಕಾದ ಮೊತ್ತ, ಸರ್ಕಾರದ ಸಹಾಯಧನ, ಮನೆಗಳ ವಿಸ್ತೀರ್ಣ ಮತ್ತಿತರ ವಿಷಯಗಳು ಇನ್ನೂ ಚರ್ಚೆಯ ಹಂತದಲ್ಲಿವೆ. ಜಾಗ ದೊರೆತ ಬಳಿಕ ಈ ಬಗ್ಗೆ ಸ್ಪಷ್ಟ ನಿರ್ಧಾರಗಳನ್ನು ಕೈಗೊಳ್ಳಲಾಗುತ್ತದೆ.

ಆರ್ಥಿಕವಾಗಿ ದುರ್ಬಲವಾಗಿರುವರಿಗೆ ಈ ಮನೆ ನಿರ್ಮಿಸಿಕೊಡಲು ಸರ್ಕಾರ ಹೆಜ್ಜೆ ಇಟ್ಟಿದ್ದು, ಈ ನಿಟ್ಟಿನಲ್ಲಿ ಸಚಿವ ಸಂತೋಷ್ ಲಾಡ್ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು.