ರಾಣೆಬೆನ್ನೂರ: ತಾಲೂಕಿನಲ್ಲಿ ಮಳೆಕೊರತೆಯಿಂದ ಬರಗಾಲ ಎದುರಾಗಿದ್ದು, ಮುಂದಿನ ವಾರದಲ್ಲಿ ಮೋಡ ಬಿತ್ತನೆ ಮಾಡುವ ಮೂಲಕ ಮಳೆ ಸುರಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರಸಭೆ, ತಾಪಂ, ತಾಲೂಕು ಆಡಳಿತದ ವತಿಯಿಂದ ನಗರದ ಎಪಿಎಂಸಿ ಮಾರುಕಟ್ಟೆಯ ಸಮುದಾಯ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮಳೆ ಇಲ್ಲದ ಕಾರಣ ರೈತರು ಕಂಗಾಲಾಗಿದ್ದಾರೆ. ಹಾವೇರಿ ಜಿಲ್ಲೆಯನ್ನು ಬರಮುಕ್ತ ಮಾಡುವುದಾಗಿ ಚುನಾವಣೆ ಸಮಯದಲ್ಲಿ ನಾನು ಘೋಷಿಸಿದ್ದೇನೆ. ಕೊಟ್ಟ ಭರವಸೆಯಂತೆ ಸರ್ಕಾರದೊಂದಿಗೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಮುಂದಿನ ವಾರದಲ್ಲಿ ಮೋಡ ಬಿತ್ತನೆ ಮಾಡುತ್ತೇವೆ. ಜತೆಗೆ ನಿರುದ್ಯೋಗ ಮುಕ್ತ ಮಾಡುವ ಉದ್ದೇಶದಿಂದ ಕೈಗಾರಿಕೆ ಸಚಿವರೊಂದಿಗೆ ಈಗಾಗಲೇ ಚರ್ಚೆ ಮಾಡಿದ್ದೇನೆ. ಹೆಚ್ಚಿನ ಪ್ರಮಾಣದ ಕೈಗಾರಿಕಾ ಘಟಕಗಳನ್ನು ರಾಣೆಬೆನ್ನೂರಿನಲ್ಲಿಯೆ ಸ್ಥಾಪಿಸುವ ಭರವಸೆಯನ್ನು ಅವರು ನೀಡಿದ್ದಾರೆ ಎಂದರು.
ತಹಸೀಲ್ದಾರ್ ಎಚ್.ಎನ್. ಶಿರಹಟ್ಟಿ, ತಾಪಂ ಇಒ ಸುಮಲತಾ ಎಸ್.ಪಿ., ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ, ಸಿಡಿಪಿಒ ಪಾರ್ವತಿ ಹುಂಡೇಕಾರ, ನಗರಸಭೆ ಸದಸ್ಯರಾದ ಪುಟ್ಟಪ್ಪ ಮರಿಯಮ್ಮನವರ, ಶಶಿಧರ ಬಸ್ಯೆನಾಯ್ಕರ, ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ, ಶಹರ ಘಟಕದ ಅಧ್ಯಕ್ಷ ಶೇರುಖಾನ ಕಾಬೂಲಿ, ರಮೇಶ ಬಿಸಲಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.