ಬೆಂಗಳೂರು:
ಗ್ರೇಟರ್ ಬೆಂಗಳೂರು ವಾರ್ಡ್‌ಗಳ ವಿಂಗಡಣೆಯೂ ದೋಷಪೂರಿತವಾಗಿದ್ದು, ಇದನ್ನು ತಕ್ಷಣವೇ ಸರಿಪಡಿಸಬೇಕು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ, ಮಾಜಿ ಶಾಸಕ ಹೆಚ್.ಎಂ.ರಮೇಶ್‌ಗೌಡ ಅವರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ವಾರ್ಡ್‌ಗಳ ವಿಭಜನೆಯಲ್ಲಿನ ನ್ಯೂನ್ಯತೆಗಳ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತು ಜಿಬಿಎ ಚುನಾವಣೆಗೆ ಜೆಡಿಎಸ್ ಪಕ್ಷದ ಆಕಾಂಕ್ಷಿಗಳ ಪಟ್ಟಿ ಸಿದ್ಧತೆ ಮಾಡುವ ವಿಚಾರವಾಗಿ ಜೆಪಿ ಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ತನ್ನ ಮೂಗಿನ ನೇರಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ರಾಜಕೀಯ ಲಾಭ ಆಗುವ ರೀತಿಯಲ್ಲಿ ವಾರ್ಡ್ ವಿಂಗಡಣೆ ಮಾಡಿದೆ. ಈ ವಿಂಗಡಣೆ ಸಾಕಷ್ಟು ನ್ಯೂನತೆಗಳಿಂದ ಕೂಡಿದ್ದು, ಬೆಂಗಳೂರು ಅಭಿವೃದ್ಧಿಗೆ ಮಾರಕವಾಗಿದೆ ಎಂದು ದೂರಿದರು.
ಜಿಬಿಎ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು. ದೇವೇಗೌಡರು ಮತ್ತು ಕುಮಾರಸ್ವಾಮಿ ನೀಡಿರುವ ಆದೇಶದಂತೆ ಪಕ್ಷವನ್ನು ಸಂಘಟನೆ ಮಾಡಲು ಎಲ್ಲರೂ ಸಂಘಟಿತವಾಗಿ ಮುಂದಾಗೋಣ. ಸ್ಪರ್ಧಾಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸೋಣ ಎಂದರು.
ಜೆಪಿ ಜಯಂತಿ ಆಚರಣೆ:
ಜನತಾ ಪರಿವಾರದ ಮೂಲ ಪುರುಷರಾದ ಲೋಕನಾಯಕ ಜಯಪ್ರಕಾಶ ನಾರಾಯಣ ಅವರ ಜನ್ಮ ಜಯಂತಿಯನ್ನು ಇದೇ ಸಂದರ್ಭದಲ್ಲಿ ಆಚರಿಸಲಾಯಿತು.
ಸಭೆಯಲ್ಲಿ ಶಾಸಕ ಟಿ.ಎನ್. ಜವರಾಯಿಗೌಡ, ಮಾಜಿ ಸಚಿವೆ ಲೀಲಾ ದೇವಿ ಆರ್.ಪ್ರಸಾದ್, ಮಾಜಿ ಶಾಸಕ ಕೆ.ಎ.ತಿಪ್ಪೇಸ್ವಾಮಿ, ಪಕ್ಷದ ಜಿಲ್ಲಾ ಚುನಾವಣಾಧಿಕಾರಿ ಶೈಲಾ ಸಂತೋಜಿ ರಾವ್, ಬಿಬಿಎಂಪಿಯ ಮಾಜಿ ಉಪ ಮಹಾಪೌರ ಬಿ.ಭದ್ರೇಗೌಡ, ವಿರೋಧ ಪಕ್ಷದ ಮಾಜಿ ಸದಸ್ಯ ಟಿ. ತಿಮ್ಮೇಗೌಡ ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.