ನ್ಯೂಸ್

ಮಣಿಪುರ ಸಚಿವ ಕಾಶಿಂ ವಶುಮ್ ನಿವಾಸದ ಮೇಲೆ ಗ್ರೆನೇಡ್ ದಾಳಿ!

ಇಂಫಾಲ್: ಮಣಿಪುರದ ಉಖ್ರುಲ್ ಜಿಲ್ಲೆಯಲ್ಲಿರುವ ಸಚಿವ ಕಾಶಿಂ ವಶುಮ್ ಅವರ ನಿವಾಸದ ಮೇಲೆ ಶಂಕಿತ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿಗೆ ಹಾನಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ರಾತ್ರಿ ನಡೆದ ಈ ಘಟನೆಯಲ್ಲಿ ಸಚಿವರ ಮನೆಯ ಗೋಡೆಗಳು ಸೇರಿದಂತೆ ಇತರೆ ಭಾಗಗಳಿಗೆ ಹಾನಿಯಾಗಿದೆ. ಆದರೆ ಯಾರಿಗೂ ಗಾಯಗಳಾಗಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  ಗ್ರೆನೇಡ್ ದಾಳಿ ಹೊಣೆಯನ್ನು ಯಾರು ಹೊತ್ತಿಕೊಂಡಿಲ್ಲ. ಘಟನೆ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಎಲ್ಲಾ ಆಯಾಮಾಗಳಲ್ಲಿ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸಚಿವ ಕಾಶಿಂ ವಶುಮ್ ಅವರಯ ಆಡಳಿತರೂಢ ಮಿತ್ರಪಕ್ಷವಾದ ನಾಗಾ ಪೀಪಲ್ಸ್ (ಎನ್‌ಪಿಎಫ್) ಶಾಸರಕಾಗಿದ್ದಾರೆ. ಗ್ರೆನೇಡ್ ದಾಳಿ ನಡೆದ ಸಂದರ್ಭದಲ್ಲಿ ನಾನು ಸೇರಿದಂತೆ ಕುಟುಂಬ ಸದಸ್ಯರು ಮನೆಯಲ್ಲಿ ಇರಲಿಲ್ಲ ಎಂದು ವಶುಮ್ ಹೇಳಿದ್ದಾರೆ.

"ಗ್ರೆನೇಡ್ ದಾಳಿಯ ನಂತರ ಸ್ಪ್ಲಿಂಟರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಬಿಗಿಯಾದ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ" ಎಂದು ಅಧಿಕಾರಿ ಹೇಳಿದರು.

ಏತನ್ಮಧ್ಯೆ, ನಾಗಾ ಬುಡಕಟ್ಟು ಜನಾಂಗದ ಉನ್ನತ ಸಂಘಟನೆಯಾದ ತಂಗ್ಖುಲ್ ನಾಗಾ ಲಾಂಗ್ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದು, ದುಷ್ಕರ್ಮಿಗಳನ್ನು ಬಂಧಿಸುವಂತೆ ಪೊಲೀಸರನ್ನು ಒತ್ತಾಯಿಸಿದೆ. ಮಣಿಪುರದಲ್ಲಿ ಕುಕಿ ಮತ್ತು ಮೈತೇಯಿ ಜನಾಂಗಳ ನಡುವೆ ಸಂಘರ್ಷ ಆರಂಭವಾದಾಗಿನಿಂದ 226 ಜನರು ಮೃತಪಟ್ಟಿದ್ದಾರೆ. 60 ಸಾವಿರಕ್ಕೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ.