ನ್ಯೂಸ್

ಪ್ರೀತಿ ಕೊಂದ ಕೊಲೆಗಾತಿ! ಗಲ್ಲುಶಿಕ್ಷೆ ತಪ್ಪಿಸಲು ಹೈಕೋರ್ಟ್‌ ಮೆಟ್ಟಿಲೇರಿದ ಗ್ರೀಷ್ಮಾ | Sharon Raj Case

Sharon raj & Greeshma: ಸ್ಲೋ ಪಾಯಿಸನ್​ ಕೊಟ್ಟು ಪ್ರಿಯಕರನನ್ನು ಹಂತ ಹಂತವಾಗಿ ಸಾವಿಗೆ ದೂಡಿದ ಪ್ರೇಯಸಿಗೆ ಕಡೆಗೂ ಮರಣದಂಡನೆ ಶಿಕ್ಷೆ ದೊರಕಿದ್ದೇ ಆದರೂ ಕೊಲೆಗಾತಿ ಗ್ರೀಷ್ಮಾಳಿಗೆ ಮಾತ್ರ ಪಾಪಪ್ರಜ್ಞೆ ಕಾಡಿದಂತಿಲ್ಲ. ಕೇರಳದಲ್ಲಿ ಭಾರೀ ಕೋಲಾಹಲ ಎಬ್ಬಿಸಿದ್ದ ಶರೋನ್ ರಾಜ್​ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಗ್ರೀಷ್ಮಾಳಿಗೆ ಕೋರ್ಟ್​ ಗಲ್ಲು ಶಿಕ್ಷೆಯನ್ನು ವಿಧಿಸಿದೆ. ಈ ಪ್ರಕರಣದ ಮತ್ತೊಬ್ಬ ಆರೋಪಿ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಕುಮಾರನ್ ನಾಯರ್​ಗೆ 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 2 ಲಕ್ಷ ರೂ. ದಂಡವನ್ನು ಕೋರ್ಟ್​ ಸೋಮವಾರ (ಜ.20)​ ವಿಧಿಸಿತು. ಆದರೆ, ತನ್ನ ವಿರುದ್ಧ ಸೆಷನ್ಸ್ ಕೋರ್ಟ್ ನೀಡಿದ​ ಗಲ್ಲುಶಿಕ್ಷೆ ತೀರ್ಪನ್ನು ಪ್ರಶ್ನಿಸಿರುವ ಅಪರಾಧಿ, ಈಗ ನೇರವಾಗಿ ಕೇರಳ ಹೈಕೋರ್ಟ್​ ಮೆಟ್ಟಿಲೇರಿರುವುದು ಮೃತ ಶರೋನ್ ಪೋಷಕರಲ್ಲಿ ಅಚ್ಚರಿ ತಂದಿದೆ.

ಸೆಷನ್ಸ್​ ಕೋರ್ಟ್​ ತೀರ್ಪು

2022ರಲ್ಲಿ ತನ್ನ ಪ್ರಿಯಕರ ಶರೋನ್ ರಾಜ್ ಕೊಲೆಗೆ ಸಂಬಂಧಿಸಿದಂತೆ ಗ್ರೀಷ್ಮಾಗೆ (24) ವಿಧಿಸಲಾದ ಶಿಕ್ಷೆ ಮತ್ತು ಮರಣದಂಡನೆಗೆ ಸಂಬಂಧಿಸಿದ ದಾಖಲೆಗಳನ್ನು ಕೇರಳ ಹೈಕೋರ್ಟ್ ಗುರುವಾರ (ಫೆ.06) ಕೋರಿದೆ. ನ್ಯಾಯಮೂರ್ತಿಗಳಾದ ಪಿ.ಬಿ. ಸುರೇಶ್ ಕುಮಾರ್ ಮತ್ತು ಜೋಬಿನ್ ಸೆಬಾಸ್ಟಿಯನ್ ಅವರನ್ನು ಒಳಗೊಂಡ ಪೀಠವು, ಶಿಕ್ಷೆ ಅವಧಿ ಹಾಗೂ ಮರಣದಂಡನೆ ಎರಡನ್ನೂ ಪ್ರಶ್ನಿಸಿ ಗ್ರೀಷ್ಮಾ ಮತ್ತು ಆಕೆಯ ಚಿಕ್ಕಪ್ಪ ನಿರ್ಮಲಾ ಕುಮಾರನ್ ನಾಯರ್ ಸಲ್ಲಿಸಿದ ಮೇಲ್ಮನವಿ ಪರಿಶೀಲಿಸಿ, ಈ ಬಗ್ಗೆ ರಾಜ್ಯದ ನಿಲುವನ್ನು ಕೋರಿದೆ.

ಹೈಕೋರ್ಟ್ ಮಧ್ಯಂತರ ಆದೇಶದಲ್ಲಿ, ಸಾಕ್ಷ್ಯ ನಾಶಕ್ಕಾಗಿ 3 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಗ್ರೀಷ್ಮಾಳ ಚಿಕ್ಕಪ್ಪ ನಿರ್ಮಲಾ ಕುಮಾರನ್ ನಾಯರ್​ ಶಿಕ್ಷೆಯನ್ನು ಕೋರ್ಟ್​ ಈಗ ಅಮಾನತುಗೊಳಿಸಿದೆ. ನಾಯರ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಇನ್ನು ಜಂಟಿ ಮೇಲ್ಮನವಿಯಲ್ಲಿ, ಸೆಷನ್ಸ್ ನ್ಯಾಯಾಲಯದ ಮರಣದಂಡನೆ ತೀರ್ಪು ಸತ್ಯ, ಸಾಕ್ಷ್ಯಗಳು ಮತ್ತು ಕಾನೂನಿಗೆ ವಿರುದ್ಧವಾಗಿದೆ ಎಂದು ಗ್ರೀಷ್ಮಾ ಹೈಕೋರ್ಟ್​ನಲ್ಲಿ ವಾದಿಸಿದ್ದಾಳೆ.  ಈ ಕುರಿತು ಏನು ಹೇಳಲಿದೆ? ಗ್ರೀಷ್ಮಾಳಿಗೆ ಸೆಷನ್ಸ್​ ಕೋರ್ಟ್​ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಲಿದೆಯಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

ಏನಿದು ಪ್ರಕರಣ?

ಕೇರಳದ ತಿರುವನಂತಪುರದಲ್ಲಿ 2022ರ ಅ.25ರಂದು ರೇಡಿಯೋಲಜಿ ವಿದ್ಯಾರ್ಥಿ ಶರೋನ್ ರಾಜ್ ಮೃತಪಟ್ಟಿದ್ದ. ಆತನ ಪ್ರೇಯಸಿ ಗ್ರೀಷ್ಮಾ ಮೇಲೆ ಅನುಮಾನ ಮೂಡಿ ಪೊಲೀಸರು ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದರು. ಸಾಕಷ್ಟು ವಿಚಾರಣೆ ಬಳಿಕ ಅ.31 ರಂದು ಗ್ರೀಷ್ಮಾ, ವಿಷವುಣಿಸಿ ಕೊಲೆ ಮಾಡಿದ್ದಾಗಿ ತನ್ನ ತಪ್ಪೊಪ್ಪಿಕೊಂಡಳು. ಅ. 14ರಂದು ಶರೋನ್​ ರಾಜ್​ನನ್ನು ತನ್ನ ಮನೆಗೆ ಕರೆಸಿಕೊಂಡ ಗ್ರೀಷ್ಮಾ, ಆಯುರ್ವೇದದ ಔಷಧಿಯಲ್ಲಿ ಕ್ರಿಮಿನಾಶಕವನ್ನು ಬೆರೆಸಿ ಕುಡಿಸಿದ್ದಳು. ಬಳಿಕ ವಿಪರೀತ ವಾಂತಿ ಮಾಡಿಕೊಂಡಿದ್ದ ರಾಜ್​, ತನ್ನ ಸ್ನೇಹಿತನೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವು-ಬದುಕಿನ ನಡುವೆ ಹೋರಾಡಿ ಅ.25 ರಂದು ಮೃತಪಟ್ಟನು. ಸಂಚು ರೂಪಿಸಿ ಆತನನ್ನು ಗ್ರೀಷ್ಮಾ ಕೊಲೆ ಮಾಡಿರುವುದು ಪೊಲೀಸರ ತನಿಖೆಯಲ್ಲಿ ಸಾಬೀತಾಯಿತು.