ಬೆಂಗಳೂರು: ಸುಸ್ಥಿರತೆ ಮತ್ತು ಪರಿಸರ ಕಾಳಜಿ ವಿಚಾರದಲ್ಲಿ ಗಮನಾರ್ಹ ಸಾಧನೆಗೆ ಇಂಟರ್‌ನ್ಯಾಷನಲ್ ಇನ್‌ಸ್ಟ್ಟಿಟ್ಯೂಟ್ ಆ್ ಇನ್ಫಾರ್ಮೇಶನ್ ಟೆಕ್ನಾಲಜಿ ಬೆಂಗಳೂರು (ಐಐಐಟಿ-ಬಿ) ಗ್ರೀನ್ ಯೂನಿವರ್ಸಿಟಿ ಅವಾರ್ಡ್ -2023 ಪಡೆದುಕೊಂಡಿದೆ.
ಇತ್ತೀಚಿಗೆ ನ್ಯೂಯಾರ್ಕ್‌ನಲ್ಲಿ ನಡೆದ 7ನೇ ಎನ್‌ವೈಸಿ ಗ್ರೀನ್ ಸ್ಕೂಲ್ ಕಾನ್ಫರೆನ್ಸ್‌ನಲ್ಲಿ ಸಂಸ್ಥೆಗೆ ಈ ಪ್ರತಿಷ್ಠಿತ ಪ್ರಶಸ್ತಿ ಸಂದಿದೆ. ಐಐಐಟಿ -ಬೆಂಗಳೂರು ಆಡಳಿತ ಮಂಡಳಿ ಸದಸ್ಯ ಉದಯ ಹೆಗ್ಡೆ ಅವರು ಸಮಾವೇಶದಲ್ಲಿ ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.
ಐಐಐಟಿ-ಬೆಂಗಳೂರು ಕ್ಯಾಂಪಸ್ 9 ಎಕರೆ ಹಸಿರು ಪರಿಸರವನ್ನು ಹೊಂದಿದ್ದು, ಈ ಪೈಕಿ ಸದಾ ಶೇ.41 ಪ್ರದೇಶವು ಹಸಿರುಮಯವಾಗಿದೆ. ಅಗತ್ಯವಿರುವ ವಿದ್ಯುತ್‌ನ ಶೇ.40 ಪಾಲನ್ನು ಸೌರಶಕ್ತಿ ಮೂಲಕ ಪೂರೈಸಿಕೊಳ್ಳುತ್ತದೆ. 500 ಕೆವಿಎ ಸಾಮರ್ಥ್ಯದ ಸ್ಥಾವರವು ವಾರ್ಷಿಕ ಅಂದಾಜು 0.7 ದಶಲಕ್ಷ ಕೆಡಬ್ಲುೃಎಚ್ ಸೌರ ಶಕ್ತಿ ಉತ್ಪಾದಿಸುತ್ತದೆ. ವಾರ್ಷಿಕವಾಗಿ 55,000 ಕಿಲೋ ಲೀಟರ್ ತ್ಯಾಜ್ಯ ನೀರನ್ನು ಮರುಬಳಕೆ ಮಾಡುತ್ತಿದ್ದು, ಅಗತ್ಯದ ಶೇ.40 ನೀರನ್ನು ಈ ವಿಧಾನದಿಂದ ಪಡೆಯಲಾಗುತ್ತಿದೆ. ಹೆಚ್ಚುವರಿಯಾಗಿ ಶೇ.10 ಮೇಲ್ಛಾವಣಿಯ ಮಳೆನೀರಿನ ಸಂಗ್ರಹದ ಮೂಲಕ ಒಟ್ಟು ಶೇ.50 ನೀರನ್ನು ಪೂರೈಸಿಕೊಳ್ಳಲಾಗುತ್ತಿದೆ.
ವಿಶೇಷವೆಂದರೆ ಕ್ಯಾಂಪಸ್‌ನಲ್ಲಿ ಶೇ.100 ತ್ಯಾಜ್ಯ ವಿಂಗಡಣೆ ಸಾಧಿಸಿದ್ದು, ಜೈವಿಕ ಅನಿಲ ಸ್ಥಾವರವನ್ನು ನಿರ್ವಹಿಸಲಾಗುತ್ತಿದೆ. ಕ್ಯಾಂಪಸ್ ಜೀವವೈವಿಧ್ಯಮಯ ತಾಣವಾಗಿದ್ದು, 60 ಪ್ರಭೇದಗಳ 487 ಮರಗಳು, ವಿವಿಧ ಪಕ್ಷಿಗಳು ಮತ್ತು ಚಿಟ್ಟೆಗಳು ಕಾಣಬಹುದಾಗಿದೆ.
ಪ್ರಶಸ್ತಿ ಸಂದಿರುವುದಕ್ಕೆ ಪ್ರತಿಕ್ರಿಯಿಸಿರುವ ಐಐಐಟಿ-ಬಿ ನಿರ್ದೇಶಕ ಪ್ರೊ. ದೇಬಬ್ರತ ದಾಸ್, ಸಂಸ್ಥೆಯ ಸುಸ್ಥಿರ ಕ್ರಮಗಳು ಕ್ಯಾಂಪಸ್‌ನ ಆಚೆಗೂ ವಿಸ್ತರಿಸಿದೆ. ನಾವು ವಿದ್ಯಾರ್ಥಿಗಳಿಗೆ ಗಿಡ ನೆಡುವ ಅಭಿಯಾನ, ಮ್ಯಾರಥಾನ್ ಇನ್ನಿತರ ಕಾರ್ಯಕ್ರಮಗಳ ಮೂಲಕ ಹಸಿರು ಪರಿಸರ ನಿರ್ಮಿಸಲು ನಿರಂತರವಾಗಿ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.
ಐಐಐಟಿ-ಬಿ ಪರಿಸರ ಉಪಕ್ರಮಗಳ ಜತೆಗೆ ಕಾಗದದ ಬಳಕೆಯನ್ನು ಕಡಿಮೆಗೊಳಿಸಲು ಹಾಗೂ ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪುಸ್ತಕ ವಿನಿಮಯವನ್ನು ಉತ್ತೇಜಿಸಲು ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ. ಸುಸ್ಥಿರ ಶೈಕ್ಷಣಿಕ ಪರಿಸರ ವ್ಯವಸ್ಥೆಗೆ ಸಂಸ್ಥೆ ಕೊಡುಗೆ ನೀಡುವಲ್ಲಿ ನಿರತವಾಗಿದೆ.
- ಜಗದೀಶ್ ಪಾಟೀಲ್, ಐಐಐಟಿ-ಬಿ ಮುಖ್ಯ ಆಡಳಿತಾಧಿಕಾರಿ