ನ್ಯೂಸ್

ಶಾಸಕರ ಒತ್ತಡಕ್ಕೆ ಮಣಿದ ಸರ್ಕಾರ; ಬಾಕಿ ಹಣ ಬಿಡುಗಡೆಗೆ ಹಸಿರು ನಿಶಾನೆ

ಬೆಂಗಳೂರು: ಸರ್ಕಾರದ ಎಲ್ಲಾ ಇಲಾಖೆ, ನಿಗಮ ಮಂಡಳಿ, ಪ್ರಾಧಿಕಾರಗಳ ಮುಂದುವರಿದ ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡುವ ಬಗ್ಗೆ ಹೇರಿದ್ದ ನಿರ್ಬಂಧವನ್ನು ಸರ್ಕಾರ ಹಿಂಪಡೆದಿದೆ.

ಸಾಮಾನ್ಯವಾಗಿ ಹೊಸ ಸರ್ಕಾರ ಆರಂಭದಲ್ಲಿ ನಿಕಟಪೂರ್ವ ಸರ್ಕಾರದ ಕಾಮಗಾರಿಗಳ ಬಾಕಿ ಪಾವತಿಗೆ ಕೆಲಕಾಲ ತಾತ್ಕಾಲಿಕ ತಡೆ ಹಾಕುವ ಸಂಪ್ರದಾಯ ಹಿಂದಿನಿಂದಲೂ ಬಂದಿದೆ. ಈ ಬಾರಿ ಗ್ಯಾರೆಂಟಿ ಯೋಜನೆ ಅನುಷ್ಠಾನಕ್ಕಾಗಿ ಎರಡು ತಿಂಗಳವರೆಗೂ ತಡೆ ಹಾಕಲಾಗಿತ್ತು. ಇದರಿಂದ ಸ್ವಪಕ್ಷದ ಶಾಸಕರು, ಗುತ್ತಿಗೆದಾರರು ಅಸಮಾಧಾನಗೊಂಡಿದ್ದರು. ಶಾಸಕಾಂಗ ಪಕ್ಷದ ಸಭೆಯಲ್ಲಿ ಸರ್ಕಾರದ ನಿಲುವಿಗೆ ಆಕ್ಷೇಪ ಕೇಳಿಬಂದಿತ್ತು.

ಸೋಮವಾರ ಸರ್ಕಾರ ತಾನು ಹೇರಿದ್ದ ನಿರ್ಬಂಧವನ್ನು ಸಡಿಲಿಸಿ ಆದೇಶ ಹೊರಡಿಸಿದೆ.

ಎಲ್ಲಾ ಇಲಾಖೆಗಳು ಹಾಗೂ ಇಲಾಖೆಗಳ ಅಧೀನಕ್ಕೊಳಪಡುವ ನಿಗಮ, ಮಂಡಳಿ, ಪ್ರಾಧಿಕಾರಗಳ

ಮುಂದುವರಿದ ಕಾಮಗಾರಿಗಳ ಸಮರ್ಪಕ ಅನುಷ್ಠಾನದ ಬಗ್ಗೆ ಪರಿಶೀಲಿಸಿ, ನಿಯಮಾನುಸಾರವಿರುವುದನ್ನು ಖಚಿತಪಡಿಸಿಕೊಂಡು ಹಿಂದಿನಂತೆಯೇ ಹಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ.

ಹಿಂದಿನ ಸರ್ಕಾರದಿಂದ ಅನುಮೋದನೆಗೊಂಡು ಇನ್ನೂ ಪ್ರಾರಂಭವಾಗದಿರುವ ಕಾಮಗಾರಿಗಳ

ಬಗ್ಗೆ ಸಂಬಂಧಪಟ್ಟ ಸಚಿವರ ಅನುಮೋದನೆಯೊಂದಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಆಡಳಿತ ಇಲಾಖೆಯ ಕಾರ್ಯದರ್ಶಿಗಳು ಕ್ರಮಕೈಗೊಳ್ಳಬೇಕೆಂದು ಸ್ಪಷ್ಟವಾಗಿ ಸೂಚಿಸಲಾಗಿದೆ.

2023-24ರ ಆಯವ್ಯಯದಲ್ಲಿ (ಜುಲೈ) ಅವಕಾಶ ಮಾಡಿಕೊಂಡಿರುವ ಹೊಸ ಯೋಜನೆ, ಕಾಮಗಾರಿಗಳ ಬಗ್ಗೆ ಆರ್ಥಿಕ ಇಲಾಖೆಯಿಂದ ನೀಡಲಾದ ಅಯವ್ಯಯ ಸಲಹಾ ಟಿಪ್ಪಣಿ ಹಾಗೂ ಅಧಿಕಾರ ಪ್ರತ್ಯಾಯೋಜನೆ ಆದೇಶದ ಪ್ರಕಾರ ಹೊಸ ಯೋಜನೆ, ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ಇಲಾಖೆಗಳಿಗೆ ತಿಳಿಸಲಾಗಿದೆ.