ಬಿ.ವೈ.ರಾಘವೇಂದ್ರ 
ನ್ಯೂಸ್

ನಾಲ್ಕು ಮಾರ್ಗಗಳಿಗೆ ಗ್ರೀನ್ ಸಿಗ್ನಲ್, ಆ.11ರಿಂದ ಇಂಡಿಗೋ ಹಾರಾಟ; ಬಿ.ವೈ.ರಾಘವೇಂದ್ರ

ಶಿವಮೊಗ್ಗ: ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನಾಲ್ಕು ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಕೇಂದ್ರದಿಂದ ಅನುಮತಿ ದೊರೆತಿದ್ದು ಆ.11ಕ್ಕೆ ಶಿವಮೊಗ್ಗ-ಬೆಂಗಳೂರು ನಡುವೆ ಮೊದಲ ವಿಮಾನ ಇಂಡಿಗೋ ಏರ್‌ಲೈನ್ಸ್ ಕಾರ್ಯಾರಂಭ ಮಾಡಲಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ತಿಳಿಸಿದರು.

450 ಕೋಟಿ ರೂ. ವೆಚ್ಚದಲ್ಲಿ ಸೋಗಾನೆಯಲ್ಲಿ ನಿರ್ಮಾಣಗೊಂಡಿರುವ ದೇಶದ 158ನೇ ವಿಮಾನ ನಿಲ್ದಾಣವು ಫೆ.27ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಜನ್ಮದಿನದಂದೇ ಲೋಕಾರ್ಪಣೆಗೊಂಡಿದ್ದು ಇದೀಗ ಉಡಾನ್ ಯೋಜನೆ ಮೂಲಕ ಇಂಡಿಗೋ ಸಂಸ್ಥೆ ವಿಮಾನ ಹಾರಾಟಕ್ಕೆ ಒಪ್ಪಂದ ಮಾಡಿಕೊಂಡಿದೆ. ಸಮಯ ಅಧಿಕೃತಗೊಳ್ಳದಿದ್ದರೂ ಆ.11ರ ಬೆಳಗ್ಗೆ 10ಕ್ಕೆ ಬೆಂಗಳೂರಿನಿಂದ ಹೊರಟು 11ಕ್ಕೆ ಶಿವಮೊಗ್ಗ ತಲುಪಲಿದೆ. ಮಧ್ಯಾಹ್ನ 1ಕ್ಕೆ ಶಿವಮೊಗ್ಗ ಬಿಟ್ಟು 2ಕ್ಕೆ ಬೆಂಗಳೂರು ತಲುಪಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಶಿವಮೊಗ್ಗದಿಂದ 11 ಮಾರ್ಗಗಳನ್ನು ಪರಿಗಣಿಸುವಂತೆ ಕೇಂದ್ರ ವಿಮಾನಯಾನ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದೆ. ಆದರೆ ಶಿವಮೊಗ್ಗ-ಬೆಂಗಳೂರು ಮಾರ್ಗದಲ್ಲಿ ವಿಮಾನ ಹಾರಾಟ ಶುರು ಮಾಡುವ ಮೊದಲೇ ಕೇಂದ್ರ ಸರ್ಕಾರ ನಾನ್ ರೀಜನಲ್ ಕನೆಕ್ಟಿವಿಟಿ ಸ್ಕೀಮ್ ಅಡಿಯಲ್ಲಿ ಪ್ರಸ್ತುತ ನಾಲ್ಕು ಮಾರ್ಗಗಳಿಗೆ ಗ್ರೀನ್‌ಸಿಗ್ನಲ್ ಕೊಟ್ಟಿದೆ. ಶಿವಮೊಗ್ಗ-ಬೆಂಗಳೂರು ನಡುವಿನ ಸಂಚಾರ ನೋಡಿಕೊಂಡು ಉಳಿದ ಮಾರ್ಗದಲ್ಲೂ ವಿಮಾನ ಹಾರಾಟ ಶುರುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಎಂಎಲ್‌ಸಿಗಳಾದ ಎಸ್.ರುದ್ರೇಗೌಡ, ಡಿ.ಎಸ್.ಅರುಣ್, ಭದ್ರಾ-ಕಾಡಾ ಮಾಜಿ ಅಧ್ಯಕ್ಷೆ ಪವಿತ್ರಾ ರಾಮಯ್ಯ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಪ್ರಧಾನ ಕಾರ್ಯದರ್ಶಿಗಳಾದ ಶಿವರಾಜ್, ಬಿ.ಕೆ.ಶ್ರೀನಾಥ್, ನಗರ ಅಧ್ಯಕ್ಷ ಎನ್.ಕೆ.ಜಗದೀಶ್, ಮುಖಂಡರಾದ ಡಾ. ಧನಂಜಯ ಸರ್ಜಿ, ಮಾಲತೇಶ್, ಕೆ.ವಿ.ಅಣ್ಣಪ್ಪ ಇದ್ದರು.