ನ್ಯೂಸ್

ರಸಗೊಬ್ಬರ ಸಬ್ಸಿಡಿಗೆ ಅಸ್ತು: ಕೇಂದ್ರ ಸಂಪುಟದಿಂದ 62,370 ಕೋಟಿ ರೂ. ಅನುಮೋದನೆ

ನವದೆಹಲಿ: ಮುಂಬರುವ 2026-27ರ ಹಿಂಗಾರು ಹಂಗಾಮಿಗೆ ರಂಜಕ ಮತ್ತು ಪೊಟ್ಯಾಷ್ (ಪಿ-ಕೆ) ರಸಗೊಬ್ಬರಗಳಿಗೆ ಬರೋಬ್ಬರಿ 62,370 ಕೋಟಿ ರೂಪಾಯಿ ಸಬ್ಸಿಡಿ ನೀಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಗೊಬ್ಬರದ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದರೂ, ರೈತರಿಗೆ ಕೈಗೆಟುಕುವ ದರದಲ್ಲಿ ಪೋಷಕಾಂಶಗಳು ಸಿಗುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ಸಚಿವ ಸಂಪುಟದ ತೀಮಾನಗಳನ್ನು ವಿವರಿಸಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಪಶ್ಚಿಮ ಏಷ್ಯಾದ ಬಿಕ್ಕಟ್ಟು ಮತ್ತು ರಷ್ಯಾ-ಯೂಕ್ರೇನ್ ಯುದ್ಧದಿಂದಾಗಿ ಜಾಗತಿಕವಾಗಿ ಗೊಬ್ಬರದ ಬೆಲೆ ಏರಿಕೆಯಾಗಿದೆ. ಆದರೂ ರೈತರ ಹಿತರಕ್ಷಣೆಗಾಗಿ ಸರ್ಕಾರ ಗರಿಷ್ಠ ನೆರವು ನೀಡಿದೆ ಎಂದರು. ಪ್ರಮುಖವಾಗಿ ರೈತರು ಹೆಚ್ಚು ಬಳಸುವ ಡಿಎಪಿ ಗೊಬ್ಬರದ ಚಿಲ್ಲರೆ ದರ ಹೆಚ್ಚಿಸದೆ, 50 ಕೆ.ಜಿ. ಚೀಲಕ್ಕೆ 1,350 ರೂಪಾಯಿಯಲ್ಲೇ ಮುಂದುವರಿಸಲು ನಿರ್ಧರಿಸಲಾಗಿದೆ.

ಇದರೊಂದಿಗೆ 2026-27ರ ಸಾಲಿನಲ್ಲಿ ಪಿ-ಕೆ ಗೊಬ್ಬರಗಳ ಒಟ್ಟು ಸಬ್ಸಿಡಿ ಮೊತ್ತ 1,03,903 ಕೋಟಿ ರೂಪಾಯಿಗೆ ತಲುಪಿದೆ. ಇದಲ್ಲದೆ, ಸಿಂಗಲ್ ಸೂಪರ್ ಫಾಸ್ಪೇಟ್ (ಎಸ್​ಎಸ್​ಪಿ) ಮೇಲಿನ ಸರಕು ಸಾಗಣೆ ಸಬ್ಸಿಡಿ ಹಾಗೂ ಅಮೋನಿಯಂ ಸಲ್ಪೇಟ್ ಮೇಲಿನ ನೆರವು ಮುಂದುವರಿಸಲಾಗಿದೆ. ದೇಶೀಯವಾಗಿ ಗಂಧಕ ಮತ್ತು ಸಲ್ಪ್ಯೂರಿಕ್ ಆಸಿಡ್ ಉತ್ಪಾದನೆಯನ್ನು ಉತ್ತೇಜಿಸಲು ವಿಶೇಷ ಪ್ಯಾಕೇಜ್ ಘೋಷಿಸಲಾಗಿದ್ದು, ಉತ್ಪಾದಕರಿಗೆ ಶೇ.20 ಖರೀದಿ ವೆಚ್ಚದ ನೆರವು

ಮ್ಯೂಸಿಯಂ ಸ್ಥಾಪನೆಗೆ ಒಪ್ಪಿಗೆ

ದೆಹಲಿಯ ಐತಿಹಾಸಿಕ ನಾರ್ತ್, ಸೌತ್ ಬ್ಲಾಕ್​ಗಳಲ್ಲಿ ವಿಶ್ವದ ಅತಿದೊಡ್ಡ ‘ಯುಗೇ ಯುಗೇನ್ ಭಾರತ್ ಮ್ಯೂಸಿಯಂ’ ನಿಮಾಣಕ್ಕೆ ಪ್ರಧಾನಿ ಮೋದಿ ನೇತೃತ್ವದ ಸಂಪುಟ ಅನುಮೋದನೆ ನೀಡಿದೆ. ಭಾರತದ ಶ್ರೀಮಂತ ನಾಗರಿಕತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ ಬೃಹತ್ ಯೋಜನೆಗೆ 3,230 ಕೋಟಿ ರೂ. ವೆಚ್ಚವಾಗಲಿದೆ. ಸುಮಾರು 1.78 ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ನಿಮಾಣ ಆಗಲಿರುವ ಈ ವಸ್ತುಸಂಗ್ರಹಾಲಯದ ಕಾಮಗಾರಿ 2026-27ರಿಂದ 2030-31ರ ಅವಧಿಯಲ್ಲಿ ಹಂತ ಹಂತವಾಗಿ ನಡೆಯಲಿದೆ. ಮೊದಲ ಗ್ಯಾಲರಿ 2027ರ ಅಂತ್ಯದ ವೇಳೆಗೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗುವ ನಿರೀಕ್ಷೆ ಇದೆ.

ಮೆಟ್ರೋ ಮಾರ್ಗ ವಿಸ್ತರಣೆ

ನೋಯ್ಡಾ ಸೆಕ್ಟರ್ 51ರಿಂದ ಗ್ರೇಟರ್ ನೋಯ್ಡಾ ಸೆಕ್ಟರ್ 4ರ ವರೆಗಿನ ‘ಅಕ್ವಾ ಲೈನ್’ ಮೆಟ್ರೋ ಮಾರ್ಗ ವಿಸ್ತರಣೆಗೂ ಸಂಪುಟ ಅನುಮೋದನೆ ನೀಡಿದೆ. 2,390 ಕೋಟಿ ರೂ. ವೆಚ್ಚದ ಈ ಯೋಜನೆ 8.449 ಕಿ.ಮೀ. ಉದ್ದವಿದ್ದು, 5 ಎತ್ತರಿಸಿದ ನಿಲ್ದಾಣಗಳನ್ನು ಹೊಂದಿರಲಿದೆ. ಇದರಿಂದ ಉಭಯ ನಗರಗಳ ಸಾರಿಗೆ ಸಂಪರ್ಕ ಮತ್ತು ಸುಗಮವಾಗಲಿದೆ.

2026-27ನೇ ಸಾಲಿನ ರಸಗೊಬ್ಬರ ನೂತನ ಸಬ್ಸಿಡಿ ದರಗಳು

ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್) ನೀತಿಯಡಿ 2026ರ ಅಕ್ಟೋಬರ್ 1ರಿಂದ 2027ರ ಮಾರ್ಚ್ 31ರ ಅವಧಿಗೆ ನೂತನ ಸಬ್ಸಿಡಿ ದರವನ್ನು ನಿಗದಿಪಡಿಸಲಾಗಿದೆ.

ಪೋಷಕಾಂಶವಾರು ಸಬ್ಸಿಡಿ ದರ (ಪ್ರತಿ ಕೆಜಿಗೆ):

  • ಸಾರಜನಕ (ಎನ್): ಪ್ರತಿ ಕೆಜಿಗೆ 94.21 ರೂ.

  • ರಂಜಕ (ಪಿ): ಪ್ರತಿ ಕೆಜಿಗೆ 66.11 ರೂ.

  • ಗಂಧಕ (ಎಸ್): ಪ್ರತಿ ಕೆಜಿಗೆ 10.42 ರೂ.

  • ಪೊಟ್ಯಾಷ್ (ಕೆ): ಪ್ರತಿ ಕೆಜಿಗೆ 2.38 ರೂ. (ಯಾವುದೇ ಬದಲಾವಣೆ ಇಲ್ಲ)

ರಸಗೊಬ್ಬರ ಸಮರ್ಪಕ ದಾಸ್ತಾನು

ಪ್ರಸ್ತುತ ದೇಶದಲ್ಲಿ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನವೆಂಬರ್ 10ರ ವರದಿಯಂತೆ ಯೂರಿಯಾ 103.12 ಲಕ್ಷ ಟನ್, ಡಿಎಪಿ 28.65 ಲಕ್ಷ ಟನ್, ಎನ್​ಪಿಕೆ 60.87 ಲಕ್ಷ ಟನ್ ಹಾಗೂ ಎಂಒಪಿ 20.08 ಲಕ್ಷ ಟನ್ ದಾಸ್ತಾನು ಲಭ್ಯವಿದೆ. ಸರ್ಕಾರದ ಈ ನಿರ್ಧಾರವು ರೈತರಿಗೆ ಜಾಗತಿಕ ಬೆಲೆ ಏರಿಕೆಯ ಹೊರೆ ಆಗದಂತೆ ರಕ್ಷಣೆ ನೀಡಲಿದೆ ಎಂದು ಭಾರತೀಯ ರಸಗೊಬ್ಬರಗಳ ಒಕ್ಕೂಟ (ಎಫ್​ಎಐ) ಸ್ವಾಗತಿಸಿದೆ.

12.6 ಲಕ್ಷ ಕೋಟಿ ರೂ. ಮುದ್ರಾ ಸಾಲ ವಿತರಣೆ ಗುರಿ

‘ಸೂಕ್ಷ್ಮ ಘಟಕಗಳ ಸಾಲ ಖಾತರಿ ನಿಧಿ’ (ಸಿಜಿಎಫ್​ಎಂಯು) ಯೋಜನೆಯನ್ನು 2031ರ ಮಾರ್ಚ್​ವರೆಗೆ ವಿಸ್ತರಿಸಲಿಕ್ಕೂ ಪ್ರಧಾನಿ ಮೋದಿ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಈ ನಿರ್ಧಾರದಿಂದ ಮುಂದಿನ 5 ವರ್ಷಗಳಲ್ಲಿ ಸುಮಾರು 12.6 ಲಕ್ಷ ಕೋಟಿ ರೂ. ಮೊತ್ತದ ಮುದ್ರಾ ಸಾಲ ಒದಗಿಸಲು ಅನುಕೂಲವಾಗಲಿದ್ದು, ಇದಕ್ಕಾಗಿ 5,000 ಕೋಟಿ ರೂ. ನಿಧಿ ಮೀಸಲಿಡಲಾಗಿದೆ. 2016ರಲ್ಲಿ ಆರಂಭವಾದ ಈ ಯೋಜನೆ ಸಾಲ ಮರುಪಾವತಿಯಾಗದ ಅಪಾಯದ ವಿರುದ್ಧ ಬ್ಯಾಂಕ್​ಗಳಿಗೆ ಖಾತರಿ ನೀಡುತ್ತದೆ.

ಧಾನ ಮಂತ್ರಿ ಮುದ್ರಾ ಯೋಜನೆಯಡಿ ನೀಡುವ 20 ಲಕ್ಷ ರೂ.ವರೆಗಿನ ಜಾಮೀನು ರಹಿತ ಸಾಲ, ಜನ್ ಧನ್ ಖಾತೆಗಳ 10,000 ಓವರ್​ಡ್ರಾಫ್ಟ್ ಹಾಗೂ ಸ್ವಸಹಾಯ ಸಂಘಗಳ 10ರಿಂದ 20 ಲಕ್ಷ ರೂ. ವರೆಗಿನ ಸಾಲಗಳಿಗೆ ಇದು ಅನ್ವಯಿಸುತ್ತದೆ. ಈ ಯೋಜನೆ ಹೊಸ ತಲೆಮಾರಿನ ಉದ್ಯಮಿಗಳನ್ನು ಸೃಷ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2026ರ ಸೆಪ್ಟೆಂಬರ್​ವರೆಗೆ ಮುದ್ರಾ ಯೋಜನೆಯಡಿ ಒಟ್ಟು 43.34 ಲಕ್ಷ ಕೋಟಿ ರೂ. ಮೌಲ್ಯದ 60.36 ಕೋಟಿಗೂ ಹೆಚ್ಚು ಸಾಲಗಳನ್ನು ಮಂಜೂರು ಮಾಡಲಾಗಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ