ಬೆಂಗಳೂರು: ಮಂಡ್ಯ ಜಿಲ್ಲೆಯ ಕೆರೆಗೋಡು ಗ್ರಾಮದ ಹನುಮ ಧ್ವಜ ಹಾಗೂ ರಾಷ್ಟ್ರ ಧ್ವಜ ತೆರವು ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದ್ದು, ಇದರ ಬೆನ್ನಲ್ಲೇ ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹಾರಿಸಲಾದ ಹಸಿರು ಬಾವುಟ ಮತ್ತೊಂದು ಸುತ್ತಿನ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ಇತ್ತ ಶಿವಾಜಿನಗರದ ಚಾಂದಿನ ಚೌಕ್ನಲ್ಲಿ ಹಸಿರು ಬಾವುಟ ಹಾರಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಈ ಕುರಿತು ಟ್ವೀಟ್ ಮಾಡಿದ್ದ ಬಿಜೆಪಿ ನಾಯಕರು ತೆಗೆಸುವ ತಾಕತ್ ನಿಮಗೆ ಇಲ್ಲವಾ ಪೊಲೀಸರಿಗೆ ಸವಾಲ್ ಎಸೆದಿದ್ದರು. ಇತ್ತ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಹರಿಸು ಧ್ವಜವನ್ನು ತೆರವು ಮಾಡಿರುವ ಪೊಲೀಸರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬರೆದುಕೊಂಡಿರುವ ಬಿಜೆಪಿ ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್, ಶಿವಾಜಿನಗರದ ಜನನಿಬಿಡ ಪ್ರದೇಶದಲ್ಲಿ ಹಾರಿಸಿದ್ದ ಹಸಿರು ಬಣ್ಣದ ಧ್ವಜದ ಬಗ್ಗೆ ನಾನು ಟ್ವೀಟ್ ಮಾಡಿದ ಬೆನ್ನಲ್ಲೇ, ಶಿವಾಜಿನಗರದ ಪೊಲೀಸರು, ಹಾಗೂ ಬೆಂಗಳೂರು ನಗರದ ಆಯುಕ್ತರು , ಕೂಡಲೇ ಅದನ್ನು ತೆಗೆಸಿ ಅಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರ ತಂಡಕ್ಕೆ ನನ್ನ ಕೃತಜ್ಞಾಪೂರ್ವಕ ಅಭಿನಂದನೆಗಳನ್ನು ತಿಳಿಸಿದ್ದಾರೆ.
ಬೆಂಗಳೂರಿನ ಶಿವಾಜಿನಗರದ ಚಾಂದಿನಿ ಚೌಕ್‌ನಲ್ಲಿನ ಬಿಬಿಎಂಪಿ ಧ್ವಜಸ್ತಂಭದಲ್ಲಿದ್ದ ಹಸಿರು ಬಾವುಟ ಹಾರಾಡುತ್ತಿರುವುದನ್ನು ರಾಮಚಂದ್ರ ಯರಗಲ್ ಎಂಬುವವರು ಟ್ವೀಟ್ ಮಾಡಿದ್ದರು. ಈ ಬಾವುಟ ಯಾವ ಧರ್ಮದ್ದು ಎಂದು ‘ಕೈ’ ನಾಯಕರು ಉತ್ತರಿಸಬೇಕು. ಹಸಿರು ಬಾವುಟ ತೆಗೆಸುವ ತಾಕತ್ ನಿಮಗೆ ಇಲ್ಲವಾ ಎಂದು ಬರೆದುಕೊಂಡಿದ್ದರು.
ಇದರ ಬೆನ್ನಲ್ಲೇ ಈ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಹ ಟ್ವೀಟ್ ಮಾಡಿ, ಪೂರ್ವ ವಿಭಾಗ ಡಿಸಿಪಿಯವರೇ ಈ ರೀತಿ ಶತ್ರು ದೇಶದ ಬಣ್ಣವನ್ನು ಹೋಲುವ ಹಸಿರು ಧ್ವಜವನ್ನು ಸಾರ್ವಜನಿಕ ಪ್ರದೇಶದಲ್ಲಿ ಹಾರಿಸುವುದು ನಮ್ಮ ಧ್ವಜ ನೀತಿಗೆ ವಿರುದ್ದವಾದದ್ದಲ್ಲವೇ ಈ ಕೂಡಲೇ, ಇದನ್ನು ತೆಗೆದು ಇಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ. ಶಿವಾಜಿನಗರ ಇರುವುದು ಭಾರತದಲ್ಲಿ, ಪಾಕಿಸ್ತಾನದಲ್ಲಲ್ಲ ಬರೆದುಕೊಂಡಿದ್ದರು.